ಕೊಣಾಜೆ-ಪುರುಷಕೋಡಿ ಹದಗೆಟ್ಟ ರಸ್ತೆ ಖಂಡಿಸಿ ನಾಗರಿಕರಿಂದ ಪ್ರತಿಭಟನೆ: ಮಾತಿನ ಚಕಮಕಿ

ಕೊಣಾಜೆ: ಕಳೆದ ಹಲವಾರು ವರ್ಷಗಳಿಂದ ಹದಗೆಟ್ಟು ಹೋಗಿರುವ ಕೊಣಾಜೆ-ಪುರುಷಕೋಡಿ ರಸ್ತೆಯ ಸರಿಪಡಿಸಬೇಕೆಂದು ಆಗ್ರಹಿಸಿ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷವನ್ನು ಖಂಡಿಸಿ ನಾಗರಿಕರು ಸೋಮವಾರ ಪುರುಷಕೋಡಿ ಬಳಿ ಪ್ರತಿಭಟನೆ ನಡೆಸಿದರು. ಆದರೆ ಪ್ರತಿಭಟನೆಗೆ ಮುನ್ನ ಚುನಾವಣಾ ಬಹಿಷ್ಕಾರಕ್ಕೆ ಸಂಬಂಧಿಸಿದಂತೆ ಪ್ರತಿಭಟನಾಕಾರರಲ್ಲಿ ಭಿನ್ನಮತ ಸ್ಪೋಟಗೊಂಡು ಎರಡು ಗುಂಪುಗಳ ನಡುವೆ ವಾಗ್ವಾದ ನಡೆಯಿತು. ವಾಗ್ವಾದದ ಬಳಿಕ ಪ್ರತಿಭಟನಾಕಾರರಲ್ಲಿ ಒಂದು ಗುಂಪು ಚುನಾವಣಾ ಬಹಿಷ್ಕಾರ ತೀರ್ಮಾಣಕ್ಕೆ ಒಪ್ಪದೆ ಪ್ರತಿಭಟನೆಯನ್ನು ನಡೆಸಿದರೆ ಇನ್ನೊಂದು ಗುಂಪು ಚುನಾವಣೆಯನ್ನು ಬಹಿಷ್ಕರಿಸುವ ತೀರ್ಮಾಣವನ್ನು ಕೈಗೊಂಡು ರಸ್ತೆಯಲ್ಲಿ ಪ್ರತಿಭಟನೆಯನ್ನು ನಡೆಸಿ ಜನಪ್ರತಿನಿಧಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಹಲವಾರು ವರ್ಷಗಳಿಂದ ಹದಗಟ್ಟು ಹೋಗಿರುವ ರಸ್ತೆ ಹಾಗೂ ಇದರ ಬಗ್ಗೆ ಜನಪ್ರತಿನಿಧಿಗಳ ನಿರ್ಲಕ್ಷದ ವಿರುದ್ದ ಕೊಣಾಜೆ ಪುರುಷ ಕೋಡಿಯ ನಾಗರಿಕರು ಚುನಾವಣೆ ಬಹಿಷ್ಕರಿಸಿ ಪ್ರತಿಭಟನೆ ನಡೆಸುವ ತೀರ್ಮಾನವನ್ನು ಕಳೆದ ವಾರ ತೆಗೆದುಕೊಂಡಿದ್ದರು. ಇದರಂತೆ ಸೋಮವಾರದಂದು ಬೆಳಿಗ್ಗೆ ಕೊಣಾಜೆ ಪುರುಷಕೋಡಿ ರಸ್ತೆಯ ರುದ್ರಭೂಮಿ ಬಳಿ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಸೇರಿದಂತೆ ನಾಗರಿಕರು ಸೇರಿದ್ದರು. ಆದರೆ ಇಲ್ಲಿ ಸೇರಿದ್ದವರಲ್ಲಿ ಒಂದು ಗುಂಪು ನಾವು ಪ್ರತಿಭಟನೆಗೆ ಸಿದ್ದರಿದ್ದೇವೆ ಆದರೆ ಚುನಾವಣೆಯನ್ನು ಬಹಿಷ್ಕರಿಸುವುದಿಲ್ಲ ಎಂದು ಹೇಳಿದಾಗ ಇನ್ನೊಂದು ಗುಂಪಿನ ನಾಗರಿಕರ ನಡುವೆ ಮಾತಿನ ಚಕಮಕಿ ನಡೆದು ವಾಗ್ವಾದ ನಡೆಯಿತು. ಪ್ರತ್ಯೇಕ ಪ್ರತಿಭಟನೆ
ಚುನಾವಣಾ ಬಹಿಷ್ಕಾರಕ್ಕೆ ಸಂಬಂಧಿಸಿದಂತೆ ಅಲ್ಲಿ ಸೇರಿದ ನಾಗರಿಕರಲ್ಲಿ ಭಿನ್ನಮತ ಇದ್ದುದರಿಂದ ಸೇರಿದ್ದವರಲ್ಲಿ ಒಂದು ಗುಂಪು ನಾವು ರಸ್ತೆಯ ಅವ್ಯವಸ್ಥೆಯನ್ನು ಖಂಡಿಸಿ ಚುನಾವಣೆಯನ್ನು ಬಹಿಷ್ಕರಿಸಿಯೇ ಸಿದ್ದ ಎಂದು ಹೇಳಿ ಜನಪ್ರತಿನಿಧಿಗಳ ವಿರುದ್ದ ಘೋಷನೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ರಸ್ತೆ ಅಭಿವೃದ್ದಿ ಆದ ನಂತರವೇ ನಾವು ಮುಂದಿನ ಚುನಾವಣೆಯಲ್ಲಿ ಭಾಗವಹಿಸಿ ರಸ್ತೆ ಅಭಿವದ್ದಿಯನ್ನು ಮಾಡಿದ ಪಕ್ಷವನ್ನು ನಾವು ಬೆಂಬಲಿಸುತ್ತೇವೆ ಎಂದರು. ಒಂದು ಗುಂಪಿನ ಪ್ರತಿಭಟನೆಯ ಬಳಿಕ ಇನ್ನೊಂದು ಗುಂಪಿನ ನಾಗರಿಕರು ಪ್ರತಿಭಟನೆಯನ್ನು ನಡೆಸಿ ಮತದಾನ ನಮ್ಮ ಹಕ್ಕು. ಅದನು ಕಸಿಯುವ ಹಕ್ಕು ಯಾರಿಗೂ ಇಲ್ಲ. ಆದರೆ ನಾವು ರಸ್ತೆಯ ಅಭಿವದ್ದಿಗಾಗಿ ನಡೆಯುವ ಪ್ರತಿಭಟನೆಗೆ ನಮ್ಮ ಸಹಕಾರ ಇದೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥ ವರದರಾಜ್, ಜಯರಾಮ ಶೆಟ್ಟಿ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ಇಲ್ಲಿಯ ರಸ್ತೆಗೆ ಡಾಂಬಾರು ಹಾಕಲಾಗಿತ್ತು. ಆದರೆ ಬಳಿಕ ಬಂದ ಕಾಂಗ್ರೆಸ್ ಶಾಸಕರು ಇಲ್ಲಿಯ ರಸ್ತೆಯ ಗಮನವೇ ಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು.
ರಸ್ತೆ ಅಭಿವೃದ್ಧಿಗಾಗಿ ಚುನಾವಣಾ ಬಹಿಷ್ಕಾರದ ತೀರ್ಮಾನದೊಂದಿಗೆ ನಡೆದ ನಾಗರಿಕರ ಪ್ರತಿಭಟನೆ
ರಸ್ತೆ ಅಭಿವೃದ್ಧಿಗಾಗಿಇನ್ನುಂದು ಗುಂಪಿನ ನಾಗರಿಕರಿಂದ ನಡೆದ ಪ್ರತಿಭಟನೆ









