16 ಒಪ್ಪಂದಗಳಿಗೆ ಭಾರತ-ಯುಎಇ ಸಹಿ ಸಾಧ್ಯತೆ

ಹೂಡಿಕೆ , ಭಯೋತ್ಪಾದನೆ ನಿಗ್ರಹಕ್ಕೆ ಆದ್ಯತೆ
ಹೊಸದಿಲ್ಲಿ, ಫೆ.8: ಅಬುದಾಭಿಯ ಯುವರಾಜ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರ ಭಾರತ ಪ್ರವಾಸ ಬುಧವಾರ ಆರಂಭಗೊಳ್ಳಲಿದ್ದು, ಈ ಸಂದರ್ಭದಲ್ಲಿ ಯುಎಇ ಜೊತೆಅಣುಶಕ್ತಿ, ತೈಲ,ಮಾಹಿತಿ ತಂತ್ರಜ್ಞಾನ,ವಾಯುಯಾನ ಹಾಗೂ ರೈಲ್ವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕನಿಷ್ಠ 16 ಒಪ್ಪಂದಗಳಿಗೆ ಸಹಿಬೀಳುವ ನಿರೀಕ್ಷೆಯಿದೆ. ಈ ಒಪ್ಪಂದಗಳಿಂದಾಗಿ ಯುಎಇ ಭಾರತದಲ್ಲಿ ನೂರಾರು ಕೋಟಿ ಡಾಲರ್ ಮೊತ್ತದ ಹೂಡಿಕೆಯನ್ನುಮಾಡುವ ನಿರೀಕ್ಷೆಯಿದೆ.
ಉಗ್ರವಾದದ ದಮನ, ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಸಹಕಾರ ಬಲಪಡಿಸುವುದು ಹಾಗೂ ಐಸಿಸ್ ನಿಗ್ರಹ, ಈ ವಿಷಯಗಳು ಪ್ರಧಾನಿ ಮೋದಿ ಹಾಗೂ ಅಲ್‌ನಹ್ಯಾನ್ ನಡುವಿನ ಮಾತುಕತೆಯಲ್ಲಿ ಪ್ರಮುಖ ಸ್ಥಾನ ಪಡೆಯಲಿವೆಯೆಂದು, ಭಾರತದಲ್ಲಿನ ಯುಎಇ ರಾಯಭಾರಿ ಅಹ್ಮದ್ ಅಲ್ ಬನ್ನಾ ಸೋಮವಾರ ಹೊಸದಿಲ್ಲಿಯಲ್ಲಿ ತಿಳಿಸಿದ್ದಾರೆ.
ಯುಎಇನ ಪ್ರಭಾವಿ ನಾಯರಾದ ಶೇಖ್ ಮುಹಮ್ಮದ್ ಅವರ ಮೂರು ದಿನಗಳ ಭಾರತ ಪ್ರವಾಸವು, ಎರಡೂ ದೇಶಗಳ ನಡುವಣ ಆರ್ಥಿಕ ಬಾಂಧವ್ಯವನ್ನು ಬಲಪಡಿಸುವುದೆಂಬ ನಿರೀಕ್ಷೆಗಳು ವ್ಯಕ್ತವಾಗಿವೆ. ಪ್ರಧಾನಿ ನರೇಂದ್ರ ಮೋದಿ ಯುಎಇಗೆ ಭೇಟಿ ನೀಡಿದ ಆರು ತಿಂಗಳ ಬಳಿಕ,ಅಬುದಾಭಿಯ ಯುವರಾಜ ಭಾರತ ಪ್ರವಾಸವನ್ನು ಕೈಗೊಳ್ಳುತ್ತಿದ್ದಾರೆ. ಯುಎಇ ರಾಜಧಾನಿಯಾದ ಅಬುದಾಭಿ ಸುಮಾರು 800 ಶತಕೋಟಿ ಡಾಲರ್ ವೌಲ್ಯದ ಸಂಪತ್ತನ್ನು ಹೊಂದಿದೆ. ಅಬುದಾಭಿ ಹೂಡಿಕೆ ಪ್ರಾಧಿಕಾರದ ನಿಯಂತ್ರಣದಲ್ಲಿರುವ ಈ ನಿಧಿಯನ್ನು ತನ್ನ ಮೂಲಸೌಕರ್ಯ ವಲಯದ ಅಭಿವೃದ್ಧಿಗೆ ಬಳಸಿಕೊಳ್ಳಲು ಭಾರತ ಆಸಕ್ತಿ ತೋರಿದೆ. ಅಲ್‌ನಹ್ಯಾನ್ ಭೇಟಿಯ ಸಂದರ್ಭದಲ್ಲಿ ಈ ಬಗ್ಗೆ ಕೆಲವು ಘೋಷಣೆಗಳನ್ನು ಮಾಡುವ ನಿರೀಕ್ಷೆಯಿದೆಯೆಂದು ಮೂಲಗಳು ತಿಳಿಸಿವೆ.
‘‘ ಭಾರತ ಸರಕಾರದ ವಿವಿಧ ಸಚಿವಾಲಯಗಳು ಹಾಗೂ ಪ್ರಾಧಿಕಾರಗಳೊಂದಿಗೆ ಯುಎಇು ಸುಮಾರು 16 ಒಪ್ಪಂದಗಳನ್ನು ಏರ್ಪಡಿಸಿಕೊಳ್ಳಲಿದೆ. ಈ ಪೈಕಿ 12 ಒಪ್ಪಂದಗಳು ಅಂತಿಮಗೊಂಡಿದ್ದು, ಸಹಿ ಹಾಕಲು ಸಿದ್ಧವಾಗಿವೆ’’ ಎಂದು ಅಲ್ ಬನ್ನಾ ತಿಳಿಸಿದ್ದಾರೆ.ಯುವರಾಜ ಶೇಖ್ ಮುಹಮ್ಮದ್ ಅವರು ಯುಎಇನ ಸಶಸ್ತ್ರಪಡೆಗಳ ದಂಡನಾಯಕರೂ ಆಗಿದ್ದಾರೆ. ಈ ಒಪ್ಪಂದಗಳಿಂದಾಗಿ ಪುನರ್‌ನವೀಕರಣಯೋಗ್ಯ ಇಂಧನ, ತೈಲ ಹಾಗೂ ಅನಿಲ ಮತ್ತಿತರ ಪ್ರಮುಖ ವಲಯಗಳಲ್ಲಿ ಬೃಹತ್ ಮೊತ್ತದ ಹೂಡಿಕೆಗಳನ್ನು ಮಾಡುವ ನಿರೀಕ್ಷೆಯಿದೆಯೆಂದು ಪ್ರತಿನಿಧಿ ತಿಳಿಸಿದ್ದಾರೆ.
ಭಾರತವು ಯುಎಇನ ನಂ.1 ವ್ಯಾಪಾರ ಪಾಲುದಾರನಾಗಿದ್ದು, ಆ ದೇಶದೊಂದಿಗೆ ಪ್ರಸ್ತುತ 60 ಶತಕೋಟಿ ಡಾಲರ್ ಮೊತ್ತದ ವ್ಯವಹಾರವನ್ನು ನಡೆಸುತ್ತದೆ. ಗಲ್ಫ್ ಪ್ರಾಂತ್ಯದಲ್ಲಿ ಪ್ರಮುಖ ಆರ್ಥಿಕ ಶಕ್ತಿಯಾದ ಯುಎಇ, ಆರ್ಥಿಕ ದೃಷ್ಟಿಯಿಂದ ಭಾರತಕ್ಕೆ ಅತ್ಯಂತ ಮಹತ್ವದ ದೇಶವಾಗಿದೆ.
ಯುಎಇನಲ್ಲಿ ಪ್ರಸ್ತುತ 2.60 ಕೋಟಿಗೂ ಅಧಿಕ ಅನಿವಾಸಿ ಭಾರತೀಯರಿದ್ದು, ಅವರು ಆ ದೇಶದ ಒಟ್ಟು ಜನಸಂಖ್ಯೆಯ ಶೇ.30ರಷ್ಟಿದ್ದಾರೆ. 2014-15ನೇ ಸಾಲಿನಲ್ಲಿ ಯುಎಇ, ಭಾರತಕ್ಕೆ ಅತಿ ದೊಡ್ಡ ಕಚ್ಚಾ ತೈಲ ಪೂರೈಕೆದಾರ ರಾಷ್ಟ್ರವಾಗಿದೆ.
ಕಳೆದ ವರ್ಷ ಮೋದಿ ಕೈಗೊಂಡ ಯುಎಇ ಪ್ರವಾಸವು, 34 ವರ್ಷಗಳ ಸುದೀರ್ಘ ಆಂತರದ ಬಳಿಕ ಭಾರತದ ಪ್ರಧಾನಿಯೊಬ್ಬರು, ಆ ದೇಶಕ್ಕೆ ನೀಡಿದ ಪ್ರಪ್ರಥಮ ಭೇಟಿಯಾಗಿದ್ದು, ಇದು ಉಭಯ ರಾಷ್ಟ್ರಗಳ ಬಾಂಧವ್ಯದಲ್ಲಿ ಹೊಸ ಶಕೆಯನ್ನು ತೆರೆಯುವ ನಿರೀಕ್ಷೆಯಿದೆ.
ಐಸಿಸ್ ಚಟುವಟಿಕೆಗಳನ್ನು ಹತ್ತಿಕ್ಕಲೂ ಎರಡು ದೇಶಗಳ ನಡುವೆ ಸಹಕಾರ ಒಪ್ಪಂದವೇರ್ಪಡುವ ನಿರೀಕ್ಷೆಯಿದೆ. ಜನರನ್ನು ಉಗ್ರವಾದದೆಡೆಗೆ ಸೆಳೆಯುವುದಕ್ಕಾಗಿ ಮತಾಂಧರು ಬಳಸುವ ಸಾಮಾಜಿಕ ಜಾಲತಾಣಗಳನ್ನು ಗುರುತಿಸಲು ಕಾರ್ಯಯೋಜನೆಯೊಂದನ್ನು ರೂಪಿಸಲಾಗುವುದೆಂದು ಅಲ್ ಬನ್ನಾ ತಿಳಿಸಿದರು.
ಭಾರತ ಹಾಗೂ ಗಲ್ಫ್ ಸಹಕಾರ ಮಂಡಳಿಯ ನಡುವೆ ಮುಕ್ತ ವಾಣಿಜ್ಯ ಒಪ್ಪಂದವು ಸದ್ಯದಲ್ಲೇ ಅಂತಿಮಗೊಳ್ಳಲಿದೆಯೆಂದು ಅವರು ತಿಳಿಸಿದರು. ಮೋದಿಯ ಪ್ರಸ್ತಾವಿತ ಇಸ್ರೇಲ್ ಪ್ರವಾಸದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ , ಅದು ಭಾರತದ ವಿಶೇಷಾಧಿಕಾರವಾಗಿದೆಯೆಂದರು.





