ಅಂತರ ರಾಜ್ಯ ಗಡಿ ಪ್ರದೇಶದ ಪೊಲೀಸ್ ಅಧಿಕಾರಿಗಳ ಸಭೆ

ಮಂಗಳೂರು,ಫೆ.8: ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಬೇಕಲ ಎಂಬಲ್ಲಿ ಅಂತರ ರಾಜ್ಯ ಗಡಿ ಪ್ರದೇಶದ ಪೊಲೀಸ್ ಅಧಿಕಾರಿಗಳ ಸಭೆಯು ಆದಿತ್ಯವಾರದಂದು ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಪಶ್ಚಿಮ ವಲಯದ ಪೊಲೀಸ್ ಮಹಾ ನಿರೀಕ್ಷಕರಾದ ಅಮೃತ್ ಪಾಲ್ ವಹಿಸಿದ್ದರು. ಸಹ ಅಧ್ಯಕ್ಷತೆಯನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ವಹಿಸಿದ್ದರು. ಸಭೆಯಲ್ಲಿ ಕಾಸರಗೋಡ್ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಶ್ರೀನಿವಾಸ್ , ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಶರಣಪ್ಪ ಎಸ್.ಡಿ, ಹಾಗೂ ಕಣ್ಣೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಣ್ಣಿರಾಜನ್, ಮಂಗಳೂರು ನಗರ ಡಿ.ಸಿ.ಪಿ (ಅಪರಾಧ ಮತ್ತು ಸಂಚಾರ) ಡಾ. ಸಂಜೀವ ಕುಮಾರ್, ಪುತ್ತೂರು ಉಪ ವಿಭಾಗದ ಎ.ಎಸ್.ಪಿ ರಿಷ್ಯಂತ್ ಸಿ.ಬಿ, , ಬಂಟ್ವಾಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಭಾಸ್ಕರ ರೈ ಹಾಗೂ ಎಎಸ್‌ಪಿ ಲಕ್ಷ್ಮಣ ನಿಂಬರಗಿ ಇವರುಗಳು ಉಪಸ್ಥಿತರಿದ್ದರು. ಇವರುಗಳಲ್ಲದೆ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಹಾಗೂ ಕಾಸರಗೋಡ್ ಜಿಲ್ಲಾ ಘಟಕದ ಅಂತರರಾಜ್ಯ ಗಡಿ ವಿಭಾಗದ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.
ಪೊಲೀಸರು ಮಾತ್ರ ನಿಗದಿತ ಕಾರ್ಯವ್ಯಾಪ್ತಿಗೆ ಒಳಪಟ್ಟು ಕಾರ್ಯ ನಿರ್ವಹಿಸಬೇಕಾಗಿದ್ದು, ಅಪರಾಧಿಗಳು ಯಾವುದೇ ರಾಜ್ಯ ಅಥವಾ ಪ್ರದೇಶಗಳಿಗೆ ಸೀಮಿತವಾಗದೇ ಕಾರ್ಯಾಚರಿಸುತ್ತಿದ್ದು ಅವರುಗಳನ್ನು ಮಟ್ಟಹಾಕಲು ವಿವಿಧ ರಾಜ್ಯಗಳ ಹಾಗೂ ಘಟಕಗಳ ಪೊಲೀಸರು ಒಟ್ಟಾಗಿ ವ್ಯವಸ್ಥಿತವಾಗಿ ಕಾರ್ಯತಂತ್ರಗಳನ್ನು ರೂಪಿಸುವುದು ಅವಶ್ಯವಿರುತ್ತದೆ. ಈ ನಿಟ್ಟಿನಲ್ಲಿ ಚರ್ಚಿಸುವ ಸಲುವಾಗಿ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆ, ಕಣ್ಣೂರು ಜಿಲ್ಲೆ ಹಾಗೂ ದ. ಕ ಜಿಲ್ಲೆ, ಮಂಗಳೂರು ನಗರ ಮತ್ತು ಕೊಡಗು ಜಿಲ್ಲಾ ಘಟಕದ ಪೊಲೀಸರ ಸಭೆಯನ್ನು ಆಯೋಜಿಸಲಾಗಿತ್ತು. ಕರ್ನಾಟಕ ರಾಜ್ಯದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್‌ಗಳಿಗೆ ಚುನಾವಣೆ ಘೋಷಣೆಯಾಗಿದ್ದು ದ.ಕ ಜಿಲ್ಲೆಯಲ್ಲಿ 2ನೇ ಹಂತದಲ್ಲಿ ಫೆ.20 ರಂದು ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು ಫೆ.23ರಂದು ಮತ ಎಣಿಕೆಗೆ ದಿನಾಂಕ ನಿಗದಿಯಾಗಿರುತ್ತದೆ. ಅಲ್ಲದೆ ಇದೇ ರೀತಿ ಕೇರಳ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿದೆ. ಚುನಾವಣೆಗೆ ನಿರ್ಭಯ, ನಿಷ್ಪಕ್ಷಪಾತ ಹಾಗೂ ನ್ಯಾಯಯುತ ವಾತಾವರಣವನ್ನು ರ್ನಿುಸುವುದು ಮತ್ತು ಗಡಿಭಾಗದಲ್ಲಿ ನಡೆಯುವ ಅಕ್ರಮ ಮರಳು ಸಾಗಾಟ, ಅಕ್ರಮ ಮಾದಕದ್ರವ್ಯ ಸಾಗಾಟ ಹಾಗೂ ಇನ್ನಿತರ ಕಾನೂನು ಬಾಹಿರ ಚಟುವಟಿಕೆ, ಪತ್ತೆಯಾಗದ ಪ್ರಕರಣಗಳ ತನಿಖೆ, ಪತ್ತೆಯಾಗದ ಮನುಷ್ಯ ಕಾಣೆ ಪ್ರಕರಣಗಳು ಹಾಗೂ ಗಡಿ ಭಾಗದಲ್ಲಿನ ಅಕ್ರಮ ಚಟುವಟಿಕೆಗಳ ಮೇಲೆ ವಿಶೇಷ ನಿಗಾ ಇರಿಸುವ ಅವಶ್ಯಕತೆಯನ್ನು ಮನಗಂಡು ಮತ್ತು ಅಂತರರಾಜ್ಯ ಜಿಲ್ಲಾ ಗಡಿಭಾಗಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ರಚಿಸುವ ಬಗ್ಗೆ ಹಾಗೂ ಇತರ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ತೆಗೆದುಕೊಳ್ಳಲಾದ ಮುಖ್ಯ ನಿರ್ಣಯಗಳು:
1.ಜಿಲ್ಲಾ ಮಟ್ಟದ ಅಧಿಕಾರಿಗಳ ಗಡಿ ಸಮಾವೇಶದ ಮಾದರಿಯಲ್ಲಿ ಪೊಲೀಸ್ ಠಾಣೆಗಳ ಮಟ್ಟದಲ್ಲಿ ಗಡಿ ಭಾಗದ ಠಾಣಾಧಿಕಾರಿಗಳ ಸಭೆಗಳನ್ನು ಏರ್ಪಡಿಸುವುದು.
2.ಎರಡು ಜಿಲ್ಲೆಗಳ ಜಂಟಿ ಪೊಲೀಸ್ ಚೆಕ್ ಪೋಸ್ಟ್‌ಗಳನ್ನು ವ್ಯವಸ್ಥೆಗೊಳಿಸುವುದು.
3.ತಲೆ ಮರೆಸಿಕೊಂಡಿರುವ / ಬೇಕಾಗಿರುವ ಆರೋಪಿಗಳ ಪತ್ತೆ ಬಗ್ಗೆ ಪರಸ್ಪರ ಮಾಹಿತಿ ವಿನಿಮಯ ಮಾಡಿ ಸಹಕರಿಸಿಕೊಳ್ಳುವುದು
4.ಇತರ ರಾಜ್ಯದ ಪೊಲೀಸರೊಂದಿಗೆ ಉತ್ತಮ ಭಾಂದವ್ಯ ರೂಪಿಸಿಕೊಳ್ಳಲು ಹಾಗೂ ಅಧಿಕಾರಿ/ಸಿಬ್ಬಂದಿಗಳ ನಡುವೆ ಸೌಹಾರ್ದತೆ ಹೆಚ್ಚಿಸಲು ಅಂತರರಾಜ್ಯ ಜಿಲ್ಲಾ ಪೊಲೀಸ್ ಕ್ರೀಡಾ ಕೂಟಗಳನ್ನು ಏರ್ಪಡಿಸುವುದು.
5.ಎಲ್ಲಾ ಜಿಲ್ಲೆಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಿಕೊಂಡು ಕನಿಷ್ಟ 2 ತಿಂಗಳಿಗೊಮ್ಮೆ ವಿಚಾರ ನಿಮಯ ಮಾಡಿಕೊಳ್ಳುವುದು. ಈ ರೀತಿಯ ನಿರಂತರ ಪ್ರಯತ್ನದಿಂದ ನಿಯಮ ಬಾಹಿರ ಚಟುವಟಿಕೆಗಳಲ್ಲಿ ಒಳಗೊಂಡಿರುವ ವ್ಯಕ್ತಿಗಳ ಮೇಲೆ ನಿಗಾ ಇರಿಸಿಕೊಳ್ಳಲು ಸಹಾಯಕವಾಗುತ್ತದೆ. ಅಲ್ಲದೆ ನೋಡಲ್ ಅಧಿಕಾರಿಗಳು ಸಭೆಯಲ್ಲಿ ಚರ್ಚಿಸಲಾಗಿರುವ ವಿಷಯಗಳ ಬಗ್ಗೆ ಕ್ರಮಕೈಗೊಂಡು ಪ್ರತಿ ಸಭೆಯಲ್ಲಿ ಕೈಗೊಂಡ ನಿರ್ಣಯಗ ಪ್ರಗತಿಯನ್ನು ಪರಿಶೀಲಿಸುವುದು.







