ಆಝಂ ಖಾನ್ ಅವಿವೇಕದ ಆರೋಪ
‘‘ನರೇಂದ್ರ ಮೋದಿಯವರು ಪಾಕಿಸ್ತಾನದಲ್ಲಿ ದಾವೂದ್ ಇಬ್ರಾಹೀಂನನ್ನು ಭೇಟಿ ಮಾಡಿ ಬಂದಿದ್ದಾರೆ. ನವಾಝ್ ಶರೀಫ್ ಭೇಟಿಯ ಸಂದರ್ಭದಲ್ಲಿ ಮೋದಿಯವರು ದಾವೂದ್ ಜೊತೆಗೂ ಮಾತುಕತೆ ನಡೆಸಿದ್ದಾರೆ’’ ಈ ಮಾತನ್ನು ಯಾವನೋ ಒಬ್ಬ ಹಾದಿಬೀದಿಯಲ್ಲಿ ಹೋಗುವ ಬೇಜವಾಬ್ದಾರಿ ಮನುಷ್ಯ ಆಡಿದ್ದರೆ ಅದನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿರಲಿಲ್ಲ. ಈ ದೇಶದ ಪ್ರಧಾನಿಯ ಕುರಿತಂತೆ ಇಂತಹದೊಂದು ಗಂಭೀರ ಆರೋಪವನ್ನು ಮಾಡಿರುವವರು ಒಂದು ರಾಜ್ಯದ ಸಚಿವರಾಗಿದ್ದಾರೆ. ಉತ್ತರ ಪ್ರದೇಶದ ನಗರಾಭಿವೃದ್ಧಿ ಸಚಿವ ಆಝಂಖಾನ್ ಇಂತಹದೊಂದು ಗಂಭೀರ ಹೇಳಿಕೆಯನ್ನು ನೀಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಆಝಂಖಾನ್ ಎಂಬ ಸ್ವಯಂಘೋಷಿತ ಮುಸ್ಲಿಮ್ ನೇತಾರರ ವಾಚಾಳಿತನದ ಬಗ್ಗೆ ಅರಿವಿರುವ ಯಾರೇ ಆಗಿದ್ದರೂ, ಇದನ್ನು ಗಂಭೀರವಾಗಿ ಸ್ವೀಕರಿಸಲು ಸಾಧ್ಯವಿಲ್ಲ. ಇದೀಗ ಆಝಂ ಖಾನ್ ಅವರು ಮೋದಿಯ ವಿರುದ್ಧ ಮಾಡಿರುವ ಈ ಬೇಜವಾಬ್ದಾರಿ ಆರೋಪ, ಅವರದೇ ವ್ಯಕ್ತಿತ್ವವನ್ನು ಇನ್ನಷ್ಟು ದುರ್ಬಲಗೊಳಿಸಿದೆಯೇ ಹೊರತು, ಅದು ಪ್ರಧಾನಿ ನರೇಂದ್ರ ಮೋದಿಯ ಮೇಲೆ ಪರಿಣಾಮ ಬೀರಿಲ್ಲ. ಒಬ್ಬ ರಾಜ್ಯ ಸಚಿವನಾಗಿ, ಉತ್ತರ ಪ್ರದೇಶದ ಮುಸ್ಲಿಮರಿಗೆ, ದಲಿತರಿಗೆ ಅಪಾರ ಕೆಲಸ ಮಾಡುವ ಅವಕಾಶವಿರುವಾಗಲೂ, ಅದನ್ನೆಲ್ಲ ಗಾಳಿಗೆ ತೂರಿ, ಹೀಗೆ ಮಾಧ್ಯಮಗಳಲ್ಲಿ ಚಿತ್ರ ವಿಚಿತ್ರ ಹೇಳಿಕೆ ನೀಡುತ್ತಾ ದಿನಕಳೆಯುತ್ತಿರುವ ಆಝಂ ಖಾನ್‌ರಂತಹ ನಾಯಕರೇ ವರ್ತಮಾನದಲ್ಲಿ ಮುಸ್ಲಿಮರ ಪಾಲಿನ ಅತಿ ದೊಡ್ಡ ದುರಂತವಾಗಿದ್ದಾರೆ.
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಬಹುಮತದಿಂದ ಅಧಿಕಾರ ಹಿಡಿದಾಗ, ಅದರ ಕುರಿತಂತೆ ದಲಿತರು, ಅಲ್ಪಸಂಖ್ಯಾತರ ಸಹಿತ ಶೋಷಿತ ವರ್ಗ ಅಪಾರ ನಿರೀಕ್ಷೆಗಳನ್ನಿಟ್ಟುಕೊಂಡಿತ್ತು. ಅಖಿಲೇಶ್ ಯಾದವ್ ಎನ್ನುವ ಯುವನಾಯಕ ಮುಖ್ಯಮಂತ್ರಿಯಾಗಿ ಘೋಷಣೆಯಾದಾಗ ಆ ನಿರೀಕ್ಷೆ ಇನ್ನೂ ಎತ್ತರಕ್ಕೇರಿತ್ತು. ಆದರೆ ಕಳೆದ ಮೂರು ವರ್ಷಗಳಲ್ಲಿ ಉತ್ತರಪ್ರದೇಶದಲ್ಲಿ ನಡೆಯುತ್ತಿರುವುದನ್ನು ನಾವು ನೋಡುತ್ತಲೇ ಇದ್ದೇವೆ. ಕೋಮುಗಲಭೆಯನ್ನು, ದಲಿತರ ಮೇಲಿನ ದೌರ್ಜನ್ಯಗಳನ್ನು ನಿಯಂತ್ರಿಸುವುದಕ್ಕೆ ಸರಕಾರ ಸಂಪೂರ್ಣ ವಿಫಲವಾಗಿದೆ. ಅಖಿಲೇಶ್ ಯಾದವ್ ಆಡಳಿತದ ದೌರ್ಬಲ್ಯಗಳನ್ನು ಬಳಸಿಕೊಂಡು ಬಿಜೆಪಿ, ಸಂಘಪರಿವಾರ ತಮ್ಮ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳುವಲ್ಲಿ ಸಂಪೂರ್ಣ ಯಶಸ್ವಿಯಾಗಿವೆ. ಪದೇ ಪದೇ ಕೋಮುದಳ್ಳುರಿಗಳನ್ನು ಎಬ್ಬಿಸುತ್ತಾ, ಅಲ್ಪಸಂಖ್ಯಾತರು ಮತ್ತು ದಲಿತರಲ್ಲಿ ಅಭದ್ರತೆಯನ್ನು ಬಿತ್ತುವುದನ್ನು ಅವು ಮುಂದುವರಿಸಿದೆ. ಜೊತೆ ಜೊತೆಗೇ ರಾಮಮಂದಿರ ನಿರ್ಮಾಣವನ್ನು ಮುಂದಿಟ್ಟುಕೊಂಡು, ಮುಂದಿನ ವಿಧಾನಸಭೆ ಚುನಾವಣೆಯನ್ನು ಗೆಲ್ಲುವುದಕ್ಕೆ ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಬಿಜೆಪಿ ಮತ್ತುಸಂಘಪರಿವಾರಗಳ ಕಾರ್ಯಜಾಲದ ಮುಂದೆ ಅಖಿಲೇಶ್ ಯಾದವ್ ನೇತೃತ್ವದ ಸರಕಾರ ಅಸಹಾಯಕವಾಗಿದೆ. ಇಂತಹ ಸಂದರ್ಭದಲ್ಲಿ ಆಝಂಖಾನ್‌ರಂತಹ ನಾಯಕರ ಹೊಣೆಗಾರಿಕೆ ದೊಡ್ಡದಿತ್ತು. ಆದರೆ, ಅವರು ತಮ್ಮ ಹೊಣೆಗಾರಿಕೆಯಿಂದ ಸಂಪೂರ್ಣ ನುಣು ಚಿಕೊಂಡಿದ್ದಾರೆ. ತಮ್ಮ ಸ್ಥಾನವನ್ನು ಬಳಸಿಕೊಂಡು ದುರ್ಬಲರಿಗೆ ಭರವಸೆಯಾಗುವ ಅವಕಾಶವನ್ನು ಸಂಪೂರ್ಣ ಕಳೆದುಕೊಂಡಿದ್ದಾರೆ. ಇದು ಅಖಿಲೇಶ್ ಯಾದವ್‌ಗೂ ಮನವರಿಕೆಯಾಗಿದೆ. ಇಂತಹ ನಾಯಕರನ್ನು ಕಟ್ಟಿಕೊಂಡು ಯಶಸ್ವಿಯಾಗಿ ಆಡಳಿತ ನೀಡುವುದು ಕಷ್ಟ ಎನ್ನುವುದನ್ನು ಅರಿತು ಕೊಂಡು, ಆಝಂಖಾನ್‌ರಂತಹ ನಾಯಕರನ್ನು ದೂರ ಸರಿಸುವ ನಿರ್ಧಾರಕ್ಕೆ ಬಂದಿದ್ದಾರೆ. ತನ್ನ ಹೊಣೆಗಾರಿಕೆಯನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲರಾಗಿರುವ ಆಝಂಖಾನ್, ಇದೀಗ ಅದನ್ನು ತುಂಬಿಕೊಳ್ಳುವ, ಆ ಮೂಲಕ ತನ್ನ ಅಸ್ತಿತ್ವವನ್ನು ಸಾಬೀತು ಪಡಿಸುವ ಹುನ್ನಾರದಲ್ಲಿದ್ದಾರೆ. ಮೋದಿಯ ವಿರುದ್ಧ ಮಾಧ್ಯಮಗಳಿಗೆ ಅತಿರೇಕದ ಹೇಳಿಕೆ ನೀಡುವುದರಿಂದಲೇ ತನ್ನನ್ನು ತಾನು ಮುಸ್ಲಿಮರ ನಾಯಕನೆಂದು ಬಿಂಬಿಸುವ ಹವಣಿಕೆ ಅವರದು.
ಕೇಂದ್ರ ಸರಕಾರ ಮತ್ತು ಮೋದಿ ವಿರುದ್ಧ ಟೀಕೆ ಮಾಡಲು ವಿಷಯಗಳಿಗೆ ಕೊರತೆಯೇನೂ ಇಲ್ಲ. ಆದರೆ ರಾಜ್ಯ ಸಚಿವನಾಗಿ ಕಾರ್ಯ ನಿಭಾಯಿಸುವುದೆಂದರೆ ಬರೇ ಟೀಕೆಗಳನ್ನು ಮಾಡುವುದಷ್ಟೇ ಅಲ್ಲ. ಮೊದಲು ತನಗೆ ನೀಡಿದ ಹುದ್ದೆಯನ್ನು ಎಷ್ಟರ ಮಟ್ಟಿಗೆ ಯಶಸ್ವಿಯಾಗಿ ನಿಭಾಯಿಸಿದ್ದೇನೆ ಎನ್ನುವುದರ ಬಗ್ಗೆಯೂ ಆಝಂಖಾನ್ ಸ್ಪಷ್ಟನೆಯನ್ನು ನೀಡಬೇಕಾಗಿದೆ. ಇದರ ಜೊತೆ ಜೊತೆಗೇ ಯಾವುದೇ ಟೀಕೆ, ಆರೋಪ ಒಂದಿಷ್ಟು ವಿಶ್ವಾಸಾರ್ಹತೆಯನ್ನು ಹೊಂದಿರಬೇಕು. ಇಲ್ಲವಾದರೆ ಅದು ಟೀಕೆ ಮಾಡಿದವನಿಗೇ ತಿರುಗುಬಾಣವಾಗುತ್ತದೆ. ಮೋದಿಯವರು ಪಾಕಿಸ್ತಾನಕ್ಕೆ ಭೇಟಿ ನೀಡಿರುವುದರ ವಿರುದ್ಧ ಹಲವರು ಟೀಕೆ ಮಾಡಿದ್ದಾರೆ. ಒಂದೆಡೆ ಭಾರತದ ಮೇಲೆ ಪಾಕ್ ಸೈನಿಕರು ಪರೋಕ್ಷ ದಾಳಿ ನಡೆಸುತ್ತಾ ಬರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮೋದಿಯವರು ನವಾಝ್ ಶರೀಫ್ ಅವರ ಮೊಮ್ಮಗಳ ಮದುವೆಯಲ್ಲಿ ಭಾಗವಹಿಸಿರುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಸಾಕಷ್ಟು ಜನರು ಎತ್ತಿದ್ದಾರೆ. ಆ ಟೀಕೆಯಲ್ಲಿ ಕೆಲವು ಸತ್ಯಗಳೂ ಇವೆ. ಇದೇ ಸಂದರ್ಭದಲ್ಲಿ, ದಾವೂದ್ ಇಬ್ರಾಹೀಂ ಕರಾಚಿಯಲ್ಲಿ ಅಡಗಿದ್ದಾನೆ ಎನ್ನುವ ವದಂತಿ ಇರುವಾಗ, ಮೋದಿ ಪಾಕಿಸ್ತಾನಕ್ಕೆ ಭೇಟಿ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರೂ ಅದಕ್ಕೂ ಅರ್ಥವಿದೆ. ಆದರೆ ಪ್ರಧಾನಿ ಮೋದಿಯವರು ದಾವೂದ್ ಇಬ್ರಾಹೀಂನನ್ನು ಪಾಕಿಸ್ತಾನದಲ್ಲಿ ಭೇಟಿ ಮಾಡಿ, ಮಾತುಕತೆ ನಡೆಸಿದರು ಎಂದು ಹೇಳುವುದು ಒಬ್ಬ ರಾಜ್ಯ ಸಚಿವನಾಗಿ, ಒಬ್ಬ ರಾಜಕೀಯ ನಾಯಕನಾಗಿ ಯಾವ ರೀತಿಯಲ್ಲಿ ಆಝಂ ಖಾನ್‌ಗೆ ಭೂಷಣವಲ್ಲ. ಅಂತಹ ಆರೋಪ ವಿಶ್ವಾಸಾರ್ಹತೆಯನ್ನು ಹೊಂದಿರುವುದಿಲ್ಲ, ಮಾತ್ರವಲ್ಲ ಅವರ ಇತರ ಟೀಕೆ, ಆರೋಪಗಳೂ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತದೆ. ಮೋದಿಯವರು ದಾವೂದ್ ಇಬ್ರಾಹೀಂನನ್ನು ಭೇಟಿ ಮಾಡಿದ ಕುರಿತಂತೆ ತನ್ನಲ್ಲಿ ದಾಖಲೆ ಇದೆ ಎನ್ನುವ ಆಝಂ ಆರೋಪ ಬರೇ ಹತಾಶೆ ಮತ್ತು ಹುಂಬತನದಿಂದ ಕೂಡಿದೆಯೇ ಹೊರತು, ಅದರಲ್ಲಿ ಯಾವುದೇ ರಾಜಕೀಯ ಮುತ್ಸದ್ದಿತನ ಇಲ್ಲ. ಇಂತಹ ಆರೋಪದಿಂದ ತನಗೆ ತಾನೇ ಧಕ್ಕೆ ಮಾಡಿಕೊಂಡಿದ್ದಾರೆ ಆಝಂ ಖಾನ್. ಒಬ್ಬ ಅಲ್ಪಸಂಖ್ಯಾತ ನಾಯಕನಾಗಿ ಉತ್ತರ ಪ್ರದೇಶದ ಆಗು ಹೋಗುಗಳ ಬಗ್ಗೆ ಆಝಂಖಾನ್ ಅವರು ಗಮನ ಕೊಡುವುದು ಒಳ್ಳೆಯದು. ಮೋದಿಯ ಹೊಂಡವನ್ನು ಸ್ವತಃ ಮೋದಿಯೇ ತೋಡಿಕೊಳ್ಳುತ್ತಿದ್ದಾರೆ. ಅದಕ್ಕೆ ಆಝಂ ಖಾನ್‌ಸಹಾಯ ಬೇಕಾಗಿಲ್ಲ. ಉತ್ತರ ಪ್ರದೇಶದಲ್ಲಿ ತನಗೆ ಸಿಕ್ಕಿರುವ ಅವಕಾಶವನ್ನು ಎಷ್ಟರ ಮಟ್ಟಿಗೆ ಬಳಸಿಕೊಂಡಿದ್ದೇನೆ ಎನ್ನುವ ಆತ್ಮವಿಮರ್ಶೆಗೆ ಇದು ಸೂಕ್ತ ಸಮಯ. ಈಗಾಗಲೇ ತನ್ನ ಬೇಜವಾಬ್ದಾರಿಯ ಹೇಳಿಕೆಗಳಿಂದ ಪಕ್ಷಕ್ಕೂ, ವೈಯಕ್ತಿಕವಾಗಿಯೂ ಸಾಕಷ್ಟು ನಷ್ಟ ಮಾಡಿಕೊಂಡಿರುವ ಆಝಂ ಖಾನ್, ತನ್ನ ಬೇಜವಾಬ್ದಾರಿ ಹೇಳಿಕೆಗಳನ್ನು ಹೀಗೆಯೇ ಮುಂದುವರಿಸಿದರೆ ಮುಂದಿನ ವಿಧಾನಸಭಾ ಚುನಾವಣೆಯ ಹೊತ್ತಿಗೆ ಕಸದ ಬುಟ್ಟಿ ಸೇರುವುದು ಖಂಡಿತ.







