ಸ್ವಚ್ಛರಾಜಕೀಯಕ್ಕಾಗಿ ಕಾಂಗ್ರೆಸ್ ಬೆಂಬಲಿಸಿ: ಎಂ.ಸಿ. ಸುಧಾಕರ್

ಚಿಂತಾಮಣಿ, ಫೆ.8: ಜಿಲ್ಲಾ ಮತ್ತು ತಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲಿಸಿಕೊಳ್ಳುವುದರಿಂದ ತಾಲೂಕಿನಲ್ಲಿ ಹದಗೆಟ್ಟಿರುವ ರಾಜಕೀಯ ವ್ಯವಸ್ಥೆಯನ್ನು ಹತೋಟಿಗೆ ತರಲಾಗುವುದೆಂದು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಡಾ. ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.
ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಜಿಪಂ ಕ್ಷೇತ್ರದಲ್ಲಿ ಜಿಪಂ ಅಭ್ಯರ್ಥಿ ಸ್ಕೂಲ್ ಸುಬ್ಬಾರೆಡ್ಡಿ ಮತ್ತು ತಾಪಂ ಅಭ್ಯರ್ಥಿಗಳಾದ ಇರಗಂಪಲ್ಲಿ ಮಾನಸ ಶಿವಾನಂದ, ಮುಂಗಾನಹಳ್ಳಿ ಎಂ.ಸುಲೋಚನಮ್ಮ ನಾಗರಾಜ್, ಯನಮಲಪಾಡಿ ಎಸ್.ಎನ್.ಶಿಲ್ಪ ಕೇಶವರೆಡ್ಡಿ ಪರ ಬಟ್ಲಹಳ್ಳಿಯಲ್ಲಿ ಮತಯಾಚನೆ ನಡೆಸಿ ಮಾತನಾಡಿದ ಅವರು, ಕಾರ್ಯಕರ್ತರೆಲ್ಲರು ಒಗ್ಗಟ್ಟಿನಿಂದ ಅಭ್ಯರ್ಥಿಗಳ ಪರ ಮತಯಾಚಿಸಿ ಹೆಚ್ಚಿನ ಬಹುಮತದೊಂದಿಗೆ ಗೆಲ್ಲಿಸುವ ಕರ್ತವ್ಯ ತಮ್ಮದ್ದಾಗಿದ್ದು, ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಸದೃಢವಾಗಿದೆಯೆಂದು ತೋರ್ಪಡಿಸಲು ಈ ಚುನಾವಣೆಗಳು ಮುಖ್ಯವಾಗಿದೆ ಎಂದರು. ಶಾಸಕರ ಸಮಾಜ ಸೇವೆ ಹೆಸರಿನಲ್ಲಿ ರಾಜಕೀಯ ಕಲುಷಿತಗೊಂಡಿದ್ದು ಇದನ್ನು ಸ್ವಚ್ಛಗೊಳಿಸಲು ಕಾಂಗ್ರೆಸ್ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಬೇಕೆಂದರು. ಮುಖ್ಯಮಂತ್ರಿಗಳ ಅನುದಾನವನ್ನು ಕೋಟಿಗಳ ಲೆಕ್ಕಾಚಾರದಲ್ಲಿ ಬಡ ಬಗ್ಗರಿಗೆ ವಿತರಿಸಲಾಗಿದೆಯೆಂದು ಮುಗ್ಧ ಜನರನ್ನು ಬಲಿಪಶುಗಳನ್ನಾಗಿಸುತ್ತಿದ್ದು, ಈ ಒಂದು ಯೋಜನೆಯನ್ನು ಮಾತ್ರ ಮುಂದಿಟ್ಟುಕೊಂಡು ಜನರ ಮುಂದೆ ಹೋಗುವ ಇವರಿಗೆ ನೈತಿಕತೆಯಿಲ್ಲ ಎಂದರು.ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ವಿ.ಸುಬ್ಬಾರೆಡ್ಡಿ, ಬಟ್ಲಹಳ್ಳಿ ಜಿ.ಪಂ. ಅಭ್ಯರ್ಥಿ ಸ್ಕೂಲ್ ಸುಬ್ಬಾರೆಡ್ಡಿ, ಬೋರ್‌ವೆಲ್ ನಾರಾಯಣಸ್ವಾಮಿ, ಬಟ್ಲಹಳ್ಳಿ ಎಸ್.ಎಂ.ವೆಂಕಟರವಣಪ್ಪ, ಕಡದನಮರಿ ಭೈರಾರೆಡ್ಡಿ, ರಾಗುಟ್ಟಹಳ್ಳಿ ಬಾಲಾಜಿರೆಡ್ಡಿ ಎ.ಪಿ.ಎಂ.ಸಿ. ಸದಸ್ಯ ಯರ್ರಯ್ಯಗಾರಹಳ್ಳಿ ರವಿ, ನಗರ ಪ್ರಾಧಿಕಾರ ಅಧ್ಯಕ್ಷ ಅಶ್ವತ್ಥರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.





