ದಕ್ಷಿಣ ಏಷ್ಯನ್ ಗೇಮ್ಸ್: ಅಗ್ರ ಸ್ಥಾನ ಕಾಯ್ದುಕೊಂಡ ಭಾರತ

ಗುವಾಹಟಿ, ಫೆ.8: ಆರ್ಚರಿಗಳು, ಕುಸ್ತಿಪಟುಗಳು ಹಾಗೂ ವೇಟ್‌ಲಿಫ್ಟರ್‌ಗಳ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ದಕ್ಷಿಣ ಏಷ್ಯನ್ ಗೇಮ್ಸ್‌ನ 3ನೆ ದಿನವಾದ ಸೋಮವಾರ ಭಾರತ ಪದಕಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದೆ.
ಭಾರತ 48 ಚಿನ್ನ, 18 ಬೆಳ್ಳಿ, 6 ಕಂಚು ಸಹಿತ ಒಟ್ಟು 72 ಪದಕಗಳನ್ನು ಜಯಿಸಿ ಪದಕ ಪಟ್ಟಿಯಲ್ಲಿ ನಂ.1 ಸ್ಥಾನ ಉಳಿಸಿಕೊಂಡಿದೆ. ಶ್ರೀಲಂಕಾ(59 ಪದಕ) 2ನೆ ಹಾಗೂ ಪಾಕಿಸ್ತಾನ(29) 3ನೆ ಸ್ಥಾನದಲ್ಲಿದೆ.
ಸೆಜ್ವಾಲ್‌ಗೆ ಹ್ಯಾಟ್ರಿಕ್ ಚಿನ್ನ: ಭಾರತದ ಈಜುಪಟು ಸಂದೀಪ್ ಸೆಜ್ವಾಲ್ ಗೇಮ್ಸ್‌ನ ಮೂರನೆ ದಿನವಾದ ಸೋಮವಾರ ಮೂರನೆ ಚಿನ್ನದ ಪದಕವನ್ನು ಜಯಿಸಿದ್ದಾರೆ. ಭಾರತ ಹಾಗೂ ಶ್ರೀಲಂಕಾ ತಲಾ 3 ಚಿನ್ನದ ಪದಕ ಜಯಿಸಿದವು. ಈಗಾಗಲೇ 2 ಚಿನ್ನದ ಪದಕ ಜಯಿಸಿರುವ ಸೆಜ್ವಾಲ್ 50 ಮೀ.ಬ್ರೀಸ್ಟ್‌ಸ್ಟ್ರೋಕ್‌ನಲ್ಲಿ 28.79 ಸೆಕೆಂಡ್‌ನಲ್ಲಿ ಗುರಿ ತಲುಪಿ ಕೂಟ ದಾಖಲೆಯೊಂದಿಗೆ ಚಿನ್ನ ಜಯಿಸಿದರು.
ವಿ. ಮಾಳವಿಕಾ 800ಮೀ. ಮಹಿಳೆಯರ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದರು. 100ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಪಿಎಸ್ ಮಧು ಭಾರತಕ್ಕೆ 3ನೆ ಚಿನ್ನ ಗೆದ್ದುಕೊಟ್ಟರು.
ಜೋಶ್ನಾ ಚಿನ್ನಪ್ಪಗೆ ಚಿನ್ನ
ಗುವಾಹಟಿ, ಫೆ.8: ಭಾರತದ ಸ್ಟಾರ್ ಆಟಗಾರ್ತಿ ಜೋಶ್ನಾ ಚಿನ್ನಪ್ಪ ದಕ್ಷಿಣ ಏಷ್ಯನ್ ಗೇಮ್ಸ್‌ನ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಪಾಕಿಸ್ತಾನದ ಮರಿಯಾ ಟೂರ್‌ಪಕಿ ವಝೀರ್‌ರನ್ನು ಮಣಿಸಿ ಚಿನ್ನದ ಪದಕವನ್ನು ಜಯಿಸಿದ್ದಾರೆ.
ಸೋಮವಾರ ನಡೆದ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಚಿನ್ನಪ್ಪ ಪಾಕಿಸ್ತಾನದ ಎರಡನೆ ಶ್ರೇಯಾಂಕದ ಆಟಗಾರ್ತಿ ವಝೀರ್‌ರನ್ನು 10-12, 11-7, 11-9, 11-7 ಗೇಮ್‌ಗಳ ಅಂತರದಿಂದ ಮಣಿಸಿದರು.
ಚಿನ್ನಪ್ಪ ಚಿನ್ನ ಜಯಿಸುವುದರೊಂದಿಗೆ ಭಾರತ ಸ್ಕ್ವಾಷ್ ವಿಭಾಗದಲ್ಲಿ ಒಟ್ಟು 3 ಪದಕ ಜಯಿಸಿದಂತಾಗಿದೆ. ಹರಿಂದರ್‌ಪಾಲ್ ಹಾಗೂ ಸೌರವ್ ಘೋಷಾಲ್ ರವಿವಾರ ಫೈನಲ್‌ನಲ್ಲಿ ಸೋಲುವುದರೊಂದಿಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದರು.
ಕುಸ್ತಿಗಳ ಪಟುಗಳಿಗೆ ಇನ್ನೂ 5 ಚಿನ್ನ: ದಕ್ಷಿಣ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಕುಸ್ತಿಪಟುಗಳು 16 ಚಿನ್ನದ ಪದಕಗಳ ಪೈಕಿ 14 ಚಿನ್ನವನ್ನು ಜಯಿಸುವ ಮೂಲಕ ಕೂಟದಲ್ಲಿ ತಮ್ಮ ಅಭಿಯಾನವನ್ನು ಕೊನೆಗೊಳಿಸಿದ್ದಾರೆ.
ಭಾರತದ ಕುಸ್ತಿಪಟುಗಳು ಸೋಮವಾರ 5 ಚಿನ್ನದ ಪದಕ ಬಾಚಿಕೊಂಡರು. ವನಿತೆಯರ 63 ಕೆಜಿ ಫೈನಲ್‌ನಲ್ಲಿ ಶಿಲ್ಪಿ ಶೆರೊನ್ ಬಾಂಗ್ಲಾದೇಶದ ಫರ್ಝಾನಾ ಶರ್ಮಿನ್‌ರನ್ನು ಮಣಿಸಿ ಚಿನ್ನದ ಪದಕ ಜಯಿಸಿದರು. ಕ್ರಮವಾಗಿ 69 ಕೆಜಿ ಹಾಗೂ 75 ಕೆಜಿ ವಿಭಾಗಗಳಲ್ಲಿ ಬಾಂಗ್ಲಾದೇಶದ ಶಿರಿನ್ ಸುಲ್ತಾನಾ ಹಾಗೂ ಶ್ರೀಲಂಕಾದ ವೀರಾಸಿಂಗ್‌ರನ್ನು ಮಣಿಸಿದ ಭಾರತದ ರಜನಿ ಹಾಗೂ ನಿಕ್ಕಿ ಚಿನ್ನದ ಪದಕ ಗೆದ್ದುಕೊಂಡರು.
ಪುರುಷರ ವಿಭಾಗದಲ್ಲಿ ವೌಸಮ್ ಖತ್ರಿ ಹಾಗೂ ಪ್ರದೀಪ್ ಕ್ರಮವಾಗಿ 97 ಕೆಜಿ ಹಾಗೂ 74 ಕೆಜಿ ವಿಭಾಗದಲ್ಲಿ ಸ್ವರ್ಣದ ಪದಕ ಸಂಪಾದಿಸಿದರು.
ಆರ್ಚರಿಗಳಿಂದ ಕ್ಲೀನ್‌ಸ್ವೀಪ್
ಶಿಲ್ಲಾಂಗ್, ಫೆ.8: ದಕ್ಷಿಣ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಕಂಪೌಂಡ್ ಆರ್ಚರಿಗಳು ಸ್ಪರ್ಧೆಯಲ್ಲಿದ್ದ ಎಲ್ಲ ಐದೂ ಚಿನ್ನದ ಪದಕಕ್ಕೆ ಗುರಿ ಇಡುವ ಮೂಲಕ ಕ್ಲೀನ್‌ಸ್ವೀಪ್ ಸಾಧಿಸಿದ್ದಾರೆ.
ದಕ್ಷಿಣ ಏಷ್ಯನ್ ಗೇಮ್ಸ್‌ನಲ್ಲಿ ಮೊದಲ ಬಾರಿ ನಡೆಯುತ್ತಿರುವ ಕಂಪೌಂಡ್ ವಿಭಾಗದಲ್ಲಿ ಭಾರತದ ಬಿಲ್ಗಾರರು ಲಭಿಸಿದ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡರು. ಕಂಪೌಂಡ್ ವಿಭಾಗದಲ್ಲಿ ಭಾಗವಹಿಸಿದ್ದ ಪೂರ್ವಶಾ ಶಿಂಧೆ, ಜ್ಯೋತಿ ವೆನ್ನಮ್ ಹಾಗೂ ಲಿಲಿ ಚಾನು ಬಾಂಗ್ಲಾದೇಶವನ್ನು 228-217 ರನ್‌ಗಳ ಅಂತರದಿಂದ ಮಣಿಸಿ ಚಿನ್ನದ ಪದಕ ತನ್ನದಾಗಿಸಿಕೊಂಡರು.
ಪೂರ್ವಶಾ ಕೂಟದಲ್ಲಿ ಹ್ಯಾಟ್ರಿಕ್ ಚಿನ್ನ ಜಯಿಸಿದರು. ವೈಯಕ್ತಿಕ ವಿಭಾಗದಲ್ಲಿ ಚಾಂಪಿಯನ್ ಆಗಿದ್ದ ಪೂರ್ವಶಾ ಮಿಶ್ರ ಡಬಲ್ಸ್‌ನಲ್ಲಿ ಅಭಿಷೇಕ್ ವರ್ಮರೊಂದಿಗೆ ಚಿನ್ನದ ಪದಕ ಜಯಿಸಿದ್ದರು.
ವೈಯಕ್ತಿಕ ವಿಭಾಗದ ಫೈನಲ್‌ನಲ್ಲಿ ಅಭಿಷೇಕ್ ವರ್ಮ ಸಹ ಆಟಗಾರ ರಜತ್ ಚೌಹಾಣ್ ವಿರುದ್ಧ ಕೇವಲ 2 ಅಂಕದಿಂದ ಸೋತರು. ಮತ್ತೊಂದು ಮಹಿಳೆಯರ ಫೈನಲ್‌ನಲ್ಲಿ ಪೂರ್ವಶಾ ಸಹ ಆಟಗಾರ್ತಿ ಜ್ಯೋತಿ ವಿರುದ್ಧ 138-133 ಅಂತರದಿಂದ ಗೆಲುವು ಸಾಧಿಸಿ ಚಿನ್ನ ಜಯಿಸಿದರು.







