ನೀರಿನ ಶುದ್ಧೀಕರಣಕ್ಕೆ ‘ನ್ಯಾನೋ’ ತಂತ್ರಜ್ಞಾನ ಬಳಕೆಗೆ ಪ್ರೊ.ಸಿಎನ್ನಾರ್

ಬೆಂಗಳೂರು, ಫೆ. 8: ನೀರಿನ ಶುದ್ಧೀಕರಣಕ್ಕೆ ‘ನ್ಯಾನೋ’ ತಂತ್ರಜ್ಞಾನವನ್ನು ಬಳಕೆಮಾಡಿಕೊಂಡರೆ ದೇಶದ ಎಲ್ಲ ಜನರಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಸಾಧ್ಯವಾಗಲಿದೆ ಎಂದು ಭಾರತ ರತ್ನ ಪುರಸ್ಕೃತ, ಹಿರಿಯ ವಿಜ್ಞಾನಿ ಪ್ರೊ.ಸಿ.ಎನ್.ಆರ್. ರಾವ್ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಕರ್ನಾಟಕ ವಿಷನ್‌ಗ್ರೂಪ್ ಏರ್ಪಡಿಸಿದ್ದ ‘ನ್ಯಾನೋಟೆಕ್’ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರು ಕಲುಷಿತಗೊಳ್ಳುತ್ತಿದ್ದು, ದೇಶದ ಎಲ್ಲ ಕಡೆಗಳಲ್ಲಿ ಶೇ.40ರಷ್ಟು ಜನ ಕ್ಯಾನ್ಸರ್ ಸೇರಿ ಇನ್ನಿತರ ಗಂಭೀರ ಸ್ವರೂಪದ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.
ಆದುದರಿಂದ ನ್ಯಾನೋ ತಂತ್ರಜ್ಞಾನದ ಮೂಲಕ ನೀರನ್ನು ಶುದ್ಧೀಕರಿಸಿ ಮತ್ತು ಸಂಸ್ಕರಣೆ ಮಾಡುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಲು ಸಾಧ್ಯ ಎಂದ ಅವರು, ನ್ಯಾನೋ ತಂತ್ರಜ್ಞಾನದ ಮೂಲಕ ಕಡಿಮೆ ವಿಸ್ತೀರ್ಣದ ಭೂಮಿಯಲ್ಲಿ ಹೆಚ್ಚಿನ ಕೃಷಿ ಉತ್ಪಾದನೆ ಸಾಧ್ಯ. ಬಿತ್ತನೆ ಬೀಜ ಮತ್ತು ಗೊಬ್ಬರ ಸೇರಿ ಹಲವು ಕ್ಷೇತ್ರಗಳಲ್ಲಿ ನ್ಯಾನೋ ತಂತ್ರಜ್ಞಾನ ಬಳಸಬಹುದು ಎಂದರು.
ಹೊಸ-ಹೊಸ ಬದಲಾವಣೆಗಳಿಗೆ ಪರಿಹಾರ ಕಂಡುಕೊಳ್ಳುವುದು ನಿಜಕ್ಕೂ ಸವಾಲಿನ ಕೆಲಸವೇ ಸರಿ. ಹೀಗಾಗಿ ಹೊಸ ರೂಪದ ಜ್ಞಾನ, ಹೊಸ ಆವಿಷ್ಕಾರಗಳ ಮೂಲಕ ಪರಿವರ್ತನೆ ಆಗಬೇಕು ಎಂದ ಅವರು. ನ್ಯಾನೋ ತಂತ್ರಜ್ಞಾನ ಆಧರಿತ ಕೈಗಾರಿಕೆಗಳು ಹೆಚ್ಚಾಗಬೇಕು ಎಂದು ಸಿಎನ್ನಾರ್ ರಾವ್ ಸಲಹೆ ನೀಡಿದರು.
ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಜಪಾನ್ ಮತ್ತು ಬ್ರಿಟನ್ ಕ್ರಮವಾಗಿ ಮೊದಲ ಮತ್ತು ಎರಡನೆ ಸ್ಥಾನದಲ್ಲಿದ್ದರೆ, ಭಾರತ ಮೂರನೆ ಸ್ಥಾನದಲ್ಲಿದೆ. ನ್ಯಾನೋ ತಂತ್ರಜ್ಞಾನದ ಬಳಕೆಯಿಂದ ಮತ್ತಷ್ಟು ಅಭಿವೃದ್ಧಿ ಸಾಧ್ಯ ಎಂದ ಅವರು, ಇಂಡಿಯಾ ನ್ಯಾನೋ ಸಮ್ಮೇಳನ ಮಾ.3ರಿಂದ ಮೂರು ದಿನಗಳ ಕಾಲ ನಗರದ ಅಶೋಕ ಹೊಟೇಲ್‌ನಲ್ಲಿ ನಡೆಯಲಿದೆ ಎಂದರು.
ದೇಶ-ವಿದೇಶಗಳ 60 ತಜ್ಞರು, 13ಕ್ಕೂ ಹೆಚ್ಚು ಕ್ಷೇತ್ರಗಳ ಉದ್ಯಮಿಗಳು, 500 ಗಣ್ಯರು, ಬ್ರಿಟನ್, ಅಮೆರಿಕ, ಜರ್ಮನಿ ಸೇರಿದಂತೆ ವಿವಿಧ ದೇಶಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, 120ಕ್ಕೂ ಅಧಿಕ ಪ್ರಬಂಧಗಳು ಮಂಡನೆಯಾಗಲಿವೆ ಎಂದು ಸಿಎನ್ನಾರ್ ರಾವ್ ಮಾಹಿತಿ ನೀಡಿದರು. ಸುದ್ಧಿಗೋಷ್ಠಿಯಲ್ಲಿ ಮಾಹಿತಿ ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಇ.ಮಂಜುಳಾ, ಐಐಎಸ್‌ನ ಹಿರಿಯ ಪ್ರಾಧ್ಯಾಪಕರಾದ ಅಜಯ್ ಕೆ.ಸೂಗ್, ಡಾ. ಜಗದೀಶ್, ಡಾ.ಹೊನ್ನೇಗೌಡ ಮತ್ತಿತರರು ಭಾಗವಹಿಸಿದ್ದರು.







