ಗುಜರಾತ್‌ನಲ್ಲಿ ದೇಶದ ಮೊದಲ ವೈಮಾನಿಕ ಪಾರ್ಕ್
ಅಹ್ಮದಾಬಾದ್, ಫೆ.8: ಗುಜರಾತ್‌ನಲ್ಲಿ ವಿಮಾನಯಾನ ವಲಯವನ್ನು ಬಲಪಡಿಸುವ ಪ್ರಯತ್ನವಾಗಿ, ದೇಶದ ಮೊತ್ತಮೊದಲ ವಿಮಾನಯಾನ ಪಾರ್ಕನ್ನು ರಾಜ್ಯದಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ.
ವಿಮಾನನೆಲೆ, ತರಬೇತಿ ಶಾಲೆ, ಹೆಲಿಪ್ಯಾಡ್, ಸಣ್ಣ ಉತ್ಪಾದನಾ ಘಟಕಗಳಿಗೆ ಸ್ಥಳಾವಕಾಶ ಮತ್ತಿತರ ಸೌಲಭ್ಯಗಳು ಇಲ್ಲಿರುತ್ತವೆ. ಈ ಸಮಗ್ರ ಪಾರ್ಕ್‌ನಲ್ಲಿ ವಿದ್ಯಾರ್ಥಿಗಳು, ವೃತ್ತಿಪರರು, ನೀತಿ ನಿರೂಪಕರು ಹಾಗೂ ಉದ್ಯಮ ವಲಯದಲ್ಲಿ ವಿಮಾನಯಾನ ಕ್ಷೇತ್ರದ ಅವಕಾಶಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಗುಜರಾತ್ ರಾಜ್ಯ ವಿಮಾನಯಾನ ಮೂಲಸೌಕರ್ಯ ಕಂಪನಿ (ಜಿಯುಜೆಎಸ್‌ಎಐಎಲ್) ಹೇಳಿದೆ.
ಈ ಕಾರ್ಯವನ್ನು ಸರಕಾರ ಗುಜರಾತ್ ರಾಜ್ಯ ವಿಮಾನಯಾನ ಮೂಲಸೌಕರ್ಯ ಕಂಪೆನಿಗೆ ವಹಿಸಿಕೊಟ್ಟಿದ್ದು, ಅಹ್ಮದಾಬಾದ್‌ನಿಂದ 30 ಕಿಲೋಮೀಟರ್ ದೂರದ ಬಗೋದರ ಗ್ರಾಮದಲ್ಲಿ ಇದಕ್ಕೆ ಭೂಮಿಯನ್ನು ಗುರುತಿಸಿದೆ.
ಜಿಯುಜೆಎಸ್‌ಎಐಎಲ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕ್ಯಾಪ್ಟನ್ ಅಜಯ್ ಚೌಹಾಣ್ ಅವರ ಪ್ರಕಾರ, ಈ ಪಾರ್ಕ್‌ನ ಮುಖ್ಯ ಉದ್ದೇಶವೆಂದರೆ ಹೂಡಿಕೆದಾರರಲ್ಲಿ, ವಿದ್ಯಾರ್ಥಿಗಳಲ್ಲಿ ಮತ್ತು ಸಮಾಜದಲ್ಲಿ ವಿಮಾನಯಾನ ವಲಯದ ಬಗ್ಗೆ ಜಾಗೃತಿ ಮೂಡಿಸುವುದು. ಇಲ್ಲಿ ಉತ್ಪಾದನಾ ಚಟುವಟಿಕೆಗಳಿಗೆ ಸ್ಥಳಾವಕಾಶ ಒದಗಿಸಿಕೊಡುವ ಜತೆಗೆ, ಇದಕ್ಕೆ ಅಗತ್ಯವಾದ ಮಾನವ ಸಂಪನ್ಮೂಲ ತರಬೇತಿಗೆ ಅನುಕೂಲ ಮಾಡಿಕೊಡಲಾಗುವುದು.
ಇದು ದೇಶದ ಮೊದಲ ವಿಮಾನಯಾನ ಪಾರ್ಕ್ ಆಗಲಿದೆ. ವಿಶ್ವದಲ್ಲೇ ಕೇವಲ 3ರಿಂದ ನಾಲ್ಕು ಇಂಥ ಪಾರ್ಕ್‌ಗಳಿವೆ. ಬಗೋದರ ಗ್ರಾಮದಲ್ಲಿ ಇದಕ್ಕೆ 60 ಎಕರೆ ಜಾಗ ಗುರುತಿಸಲಾಗಿದೆ. ಇದೀಗ ಸಾಧ್ಯತಾ ಅಧ್ಯಯನವನ್ನು ನಡೆಸಿ, ಅಂತಿಮಪಡಿಸಲಾಗುವುದು. ಬಳಿಕ ಪ್ರಸ್ತಾವನೆಯನ್ನು ಈ ಹಣಕಾಸು ಅಂತ್ಯದ ಒಳಗಾಗಿ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಚೌಹಾಣ್ ವಿವರಿಸಿದರು.
ಇದು ವಿಮಾನಯಾನ ತರಬೇತಿ, ಸಂಶೋಧನೆ, ಮನೋರಂಜನೆ ಹಾಗೂ ಉತ್ಪಾದನೆ ಹೀಗೆ ಎಲ್ಲ ಅವಕಾಶಗಳನ್ನೂ ಹೊಂದಿರುವ ಕೇಂದ್ರವಾಗಲಿದೆ. ವಿಮಾನಯಾನಕ್ಕೆ ಸಂಬಂಧಿಸಿದ ಎಲ್ಲ ಅಂಶಗಳೂ ಒಂದೇ ಸೂರಿನಡಿ ಸಿಗುವಂತೆ ಮಾಡುವುದು ಇದರ ಉದ್ದೇಶ ಎಂದು ನಾಗರಿಕ ವಿಮಾನಯಾನದ ನಿರ್ದೇಶಕರೂ ಆಗಿರುವ ಅವರು ಸ್ಪಷ್ಟಪಡಿಸಿದರು.
ಮೊದಲ ಹಂತದಲ್ಲಿ ವಿಮಾನಯಾನದ ಬಗ್ಗೆ ನಾಗರಿಕರಿಗೆ ತಿಳಿವಳಿಕೆ ನೀಡುವ ಉದ್ದೇಶವಿದೆ. ಥಿಯೇಟರ್ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಹೊರತಾಗಿ, ವೈಮಾನಿಕ ಪ್ರದರ್ಶನಗಳನ್ನು ಆಯೋಜಿಸಲು ಮತ್ತು ಇದಕ್ಕೆ ಸಂಬಂಧಿಸಿದ ಸಾಹಸ ಕ್ರೀಡೆಗಳಿಗೆ ಅವಕಾಶವನ್ನೂ ಕಲ್ಪಿಸಲಿದೆ. ವೃತ್ತಿಪರರಿಗೆ ಈ ಸಂಕೀರ್ಣದಲ್ಲಿ ವಿಮಾನ ಸಿಮ್ಯುಲೇಟರ್‌ಗಳು, ವಿಮಾನಯಾನ ಹಾಗೂ ವಾಯುಪ್ರದೇಶ ನಿರ್ವಹಣಾ ಶಾಲೆ, ವಿಮಾನಸಿಬ್ಬಂದಿ ತರಬೇತಿ ಶಾಲೆ, ಹೆಲಿಪ್ಯಾಡ್, ಚಿಕ್ಕ ವಿಮಾನಗಳು ಇಳಿಯಲು ವಾಯು ನೆಲೆ ಸೌಲಭ್ಯ ಕಲ್ಪಿಸಲಾಗುವುದು ಎಂದು ವಿವರಿಸಿದರು.





