ಉದ್ಯೋಗಿಗಳ ವಿಳಂಬ ಆಗಮನ ತಡೆಯಲು ವಾಟ್ಸ್‌ಆ್ಯಪ್ ಬಳಕೆ
ಚೆನ್ನೈ,ಫೆ.8: ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ ಕ್ಲಪ್ತ ಸಮಯಕ್ಕೆ ಹಾಜರಾಗುವುದು ತೀರಾ ಅಪರೂಪವಾಗಿದೆ. ಹೀಗಾಗಿ, ಚೆನ್ನೈ ಮಹಾನಗರಪಾಲಿಕೆಯು ನಗರ ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರ (ಯುಪಿಎಚ್‌ಸಿ)ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ, ಸಮಯಕ್ಕೆ ಸರಿಯಾಗಿ ಹಾಜರಾಗುವಂತೆ ಮಾಡಲು ವಿನೂತನ ಉಪಾಯವೊಂದನ್ನು ಕಂಡುಹಿಡಿದಿದೆ.
ಯುಪಿಎಚ್‌ಸಿಯ ಸಿಬ್ಬಂದಿ ತಡವಾಗಿ ಕೆಲಸಕ್ಕೆ ಹಾಜರಾಗುವುದನ್ನು ನಿಲ್ಲಿಸಲು, ಚೆನ್ನೈ ಬೃಹನ್ನಗರಪಾಲಿಕೆಯು, ‘ವಾಟ್ಸ್‌ಆ್ಯಪ್’ ಮೆಸೆಜಿಂಗ್ ಅಪ್ಲಿಕೇಶನ್ ಅನ್ನು ಬಳಸಲಾರಂಭಿಸಿದೆ. ಮಹಾನಗರಪಾಲಿಕೆಯ ಎಲ್ಲ ವಲಯ ಅಧಿಕಾರಿಗಳು ಪ್ರತಿದಿನವೂ 15 ವಲಯಗಳಲ್ಲಿ ಕನಿಷ್ಠ ಬೆಳಗ್ಗೆ 8:00 ಗಂಟೆಯಿಂದ 8:30ರೊಳಗೆ ಕನಿಷ್ಠ ಎರಡು ಆಸ್ಪತ್ರೆಗಳಿಗೆ ಭೇಟಿ ನೀಡಿ, ಹಾಜರಿರುವ ಸಿಬ್ಬಂದಿಯ ಫೋಟೋ ತೆಗೆದು, ಅವರ ಹಾಜರಾತಿ ವಿವರಗಳ ಸಮೇಪ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಕಳುಹಿಸಿಕೊಡಬೇಕಾಗುತ್ತದೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹಲವಾರು ವೈದ್ಯರು,ನರ್ಸ್‌ಗಳು, ಫಾರ್ಮಾಸಿಸ್ಟ್‌ಗಳು ಹಾಗೂ ಲ್ಯಾಬ್ ತಂತ್ರಜ್ಞರು, ತಡವಾಗಿ ಬರುತ್ತಾರೆಂದು ಹಾಗೂ ಬೇಗ ನಿರ್ಗಮಿಸುತ್ತಾರೆಂದು ರೋಗಿಗಳು ದೂರು ನೀಡಿದ ಬಳಿಕ ಈ ಕ್ರಮಕ್ಕೆ ಮುಂದಾಗಿದೆ. ಚೆನ್ನೈನಲ್ಲಿ 140 ಯುಪಿಎಚ್‌ಸಿಗಳಿದ್ದು, ಅವು ಬೆಳಗ್ಗೆ 8:00 ಗಂಟೆಯಿಂದ ಮಧ್ಯಾಹ್ನ 3:00 ಗಂಟೆಯ ನಡುವೆ ಕಾರ್ಯನಿರ್ವಹಿಸುತ್ತವೆ. ಪ್ರತಿಯೊಂದು ಕೇಂದ್ರವೂ ಪ್ರತಿದಿನ ಸರಾಸರಿ 150 ರೋಗಿಗಳಿಗೆ ಚಿಕಿತ್ಸೆ ನೀಡುತ್ತದೆ.
ಯುಪಿಎಚ್‌ಸಿಗಳಲ್ಲಿ ಮಾತ್ರವಲ್ಲದೆ,ಚೆನ್ನೈ ಮಹಾನಗರಪಾಲಿಕೆಯು, ತ್ಯಾಜ್ಯ ನಿರ್ವಹಣೆ ಹಾಗೂ ರಸ್ತೆ ಕಾಮಗಾರಿ ಚಟುವಟಿಕೆಗಳ ಮೇಲೂ ಕಣ್ಗಾವಲಿರಿಸಲು ವಾಟ್ಸ್‌ಆ್ಯಪ್‌ನ್ನು ಬಳಸಿಕೊಳ್ಳುತ್ತಿದೆ. ಆದಾಗ್ಯೂ, ತನ್ನ 26 ಇಲಾಖೆಗಳ 30 ಸಾವಿರಕ್ಕೂ ಅಧಿಕ ಉದ್ಯೋಗಿಗಳ ಹಾಜರಾತಿ ದಾಖಲಿಸಲು ಬಯೋಮೆಟ್ರಿಕ್‌ವ್ಯವಸ್ಥೆಯನ್ನು ಅಳವಡಿಸುವ ನಗರಪಾಲಿಕೆಯ ಯೋಜನೆಯು ಇನ್ನೂ ಕಡತಗಳಲ್ಲಷ್ಟೇ ಬಾಕಿಯುಳಿದಿದೆ.





