ರಾಜಕಾರಣಿಗಳಲ್ಲಿ ಬದ್ಧತೆ, ನೈತಿಕ ಮೌಲ್ಯ ಕಣ್ಮರೆ: ದೊರೆಸ್ವಾಮಿ ಆತಂಕ

‘ಮಹಾಯಾನ’ ಲೋಕಾರ್ಪಣೆ
ಬೆಂಗಳೂರು, ಫೆ. 8: ಹಿಂದಿನ ರಾಜಕಾರಣಿಗಳಲ್ಲಿದ್ದ ರಾಜಕೀಯ ಬದ್ಧತೆ, ನೈತಿಕ ವೌಲ್ಯ ಇಂದಿನ ರಾಜಕಾರಣಿಗಳಲ್ಲಿ ಕಾಣುತ್ತಿಲ್ಲ ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಗರದ ಕಸಾಪದಲ್ಲಿ ಜಾಣಗೆರೆ ಪತ್ರಿಕೆ ಪ್ರಕಾಶನ ಮತ್ತು ಅನಿಕೇತನ ಕನ್ನಡ ಬಳಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ ರಚಿಸಿರುವ ‘ಮಹಾಯಾನ’ ಬೃಹತ್ ಕಾದಂಬರಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಸ್ವಾತಂತ್ರಾನಂತರದ ದಿನಗಳ ರಾಜಕಾರಣಿಗಳಲ್ಲಿದ್ದ ರಾಜಕೀಯ ಬದ್ಧತೆ, ನೈತಿಕತೆ ಇಂದಿನ ರಾಜಕಾರಣಿ ಗಳಲ್ಲಿ ಕಾಣಸಿಗುವುದಿಲ್ಲ. ಇವತ್ತಿನ ರಾಜಕೀಯ ಭ್ರಷ್ಟಾಚಾರದ ಹೊಲಸಿನಿಂದ ಹದಗಟ್ಟಿದೆ. ಪಕ್ಷಗಳ ನಾಯಕರು ಕಾಲು ಎಳೆಯುವ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಅಧಿವೇಶನಗಳಲ್ಲಿ ಜನರ ಸಮಸ್ಯೆಗಳು ಸಮರ್ಪಕವಾಗಿ ಚರ್ಚೆಯಾಗಲು ರಾಜಕೀಯ ನಾಯಕರು ಅಡ್ಡಗಾಲಾಗಿ ಸಮಯ ವ್ಯರ್ಥಮಾಡುತ್ತಿದ್ದಾರೆ. ಇಂತಹ ಅವಿವೇಕಿಗಳು ನಮ್ಮನ್ನು ಆಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಜನರ ಮಧ್ಯೆ ಇದ್ದು, ಸಮಸ್ಯೆಗಳನ್ನು ಆಲಿಸುವವರಿಗೆ ಇಂದು ಜನ ಬೆಂಬಲ ಸಿಗುತ್ತಿಲ್ಲ. ಖಂಡ ಮತ್ತು ಹೆಂಡ ತಿನ್ನಿಸುವವರಿಗೆ ಮಾತ್ರ ಅಧಿಕಾರ ದೊರೆಯುತ್ತಿದೆ. ಇದು ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ರಾಜಕೀಯ ಗೂಂಡಾ ಸಾಮ್ರಾಜ್ಯವಾಗುವ ಭಯ ನನ್ನಲ್ಲಿ ಆವರಿಸಿದೆ ಎಂದು ಎಚ್.ಎಸ್.ದೊರೆಸ್ವಾಮಿ ಆತಂಕ ವ್ಯಕ್ತಪಡಿಸಿದರು.
ಜಾಣಗೆರೆ ವೆಂಕಟರಾಮಯ್ಯ ಮಹಾಯಾನದಲ್ಲಿ ಹಿಂದಿನ ರಾಜಕಾರಣದ ಸಿದ್ಧಾಂತಗಳನ್ನು ಮತ್ತು ಆಡಳಿತ ವೈಖರಿಯನ್ನು ಹಿಡಿ ಹಿಡಿಯಾಗಿ ಬಿಂಬಿಸಿದ್ದಾರೆ. ಹಿಂದಿನ ರಾಜಕಾರಣಿಗಳ ಸೇವಾ ಮನೋಭಾವ ಇಂದಿನ ರಾಜಕಾರಣಿಗಳ ಸೇವೆಗೆ ತುಲನೆ ಮಾಡಿದ್ದಾರೆ ಎಂದು ತಿಳಿಸಿದರು.
ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮಿ ಮಾತನಾಡಿ, ನಾವು ಹಿಂದಿನ ಶತಮಾನ ಗಳಲ್ಲಿ ಅಪೂರ್ವವಾದ ಮಾನವನ ವಿಕಾಸವನ್ನು ಗುರುತಿಸು ವಂತಹ ಕಾಲಘಟ್ಟಗಳನ್ನು ಕಂಡಿದ್ದೇವೆ. ಆದರೆ 20ನೆ ಶತಮಾನ ವಿಕಾಶದ ಜೊತೆಗೆ ವಿನಾಶದ ಸಂಕೇತಗಳು ಪ್ರತಿಬಿಂಬಿಸುತ್ತಿವೆ. ದೇಶದಲ್ಲಿ ಗಾಂಧಿವಾದದ ಪ್ರಭಾವ ಕಡಿಮೆಯಾಗುತ್ತಿರುವ ಪರಿಣಾಮ ಮಾನವೀಯ ವೌಲ್ಯಗಳ ಅಂಧಃಪತನ ಕ್ರಮೇಣ ಜಾಸ್ತಿಯಾಗುತ್ತಿವೆ ಎಂದು ವರು ಕಳವಳಪಟ್ಟರು.
ಇಂದು ಶಾಂತಿ-ಪ್ರೀತಿಯನ್ನು ಸಾರಬೇಕಿದ್ದ ಕೇಂದ್ರಗಳು ಸ್ಥಾನಪಲ್ಲಟಗೊಂಡು ದ್ವೇಷ- ಅಸೂಯೆ ಯನ್ನು ಪ್ರಚೋದಿಸುವ ಕಾರ್ಯ ಮಾಡುತ್ತಿವೆ. ಈ ಪರಿಣಾಮ ಸಮಾಜ ಯಾವುದನ್ನು ಸ್ವೀಕರಿಸಬೇಕು, ಯಾವುದನ್ನ ತಿರಸ್ಕರಿಸಬೇಕು ಎಂಬ ಗೊಂದಲದಲ್ಲಿ ಸಿಲುಕಿದೆ. ಈ ಗೊಂದಲ ಯುವ ಸಮುದಾಯವನ್ನೂ ಬಿಟ್ಟಿಲ್ಲ. ನಾವು ಮಾರ್ಗದರ್ಶಕರನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಪದೇ ಪದೇ ಮೋಸಹೋಗುತ್ತಿರುವುದೇ ಇದಕ್ಕೆಲ್ಲ ಕಾರಣ ಎಂದು ವಿಷಾದಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್, ಕಸಾಪದ ಮಾಜಿ ಅಧ್ಯಕ್ಷ ಪುಂಡಲೀಕ ಹಾಲಂಬಿ, ಸಾಹಿತಿ ಜಾಣಗೆರೆ ವೆಂಕಟರಾಮಯ್ಯ, ಲೇಖಕ ಡಾ. ಭೈರಮಂಗಲ ರಾಮೇಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.





