ವೀಸಾ ಅವಧಿ ಮುಗಿದವರ ಬಗ್ಗೆ ವಿವರಣೆ ನೀಡಲು ಹೈಕೋರ್ಟ್ ಸೂಚನೆ
ಬೆಂಗಳೂರು, ಫೆ.8: ವೀಸಾ ಅವಧಿ ಮುಗಿದರೂ ಇಲ್ಲಿಯೇ ವಾಸಿಸುವ ವಿದೇಶಿಗರ ಬಗ್ಗೆ ವಿವರಗಳನ್ನು ನೀಡುವಂತೆ ಹೈಕೋರ್ಟ್ ಪೊಲೀಸ್ ಇಲಾಖೆಗೆ ಸೂಚಿಸಿದೆ. ಆನ್‌ಲೈನ್ ಕಾರು ವ್ಯಾಪಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ವಿಜಯ್ ಸೇರಿ ಇನ್ನಿತರರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಅವರಿದ್ದ ನ್ಯಾಯಪೀಠ, ಈ ಆದೇಶ ನೀಡಿದೆ. ನೈಜೀರಿಯಾ ದೇಶ ಸೇರಿ ಇನ್ನಿತರ ದೇಶಗಳ ವಿದೇಶಿಗರು ವೀಸಾ ಅವಧಿ ಮುಗಿದರೂ ತಮ್ಮ ದೇಶಗಳಿಗೆ ಹೋಗುತ್ತಿಲ್ಲ. ಈ ಸಂಬಂಧ ಏನು ಕ್ರಮಗಳನ್ನು ಕೈಗೊಂಡಿದ್ದೀರಿ ಎಂಬುದರ ಬಗ್ಗೆ ವಿವರಗಳನ್ನು ನೀಡುವಂತೆ ಹೈಕೋರ್ಟ್ ಪೊಲೀಸ್ ಇಲಾಖೆಗೆ ಸೂಚಿಸಿತು.
ವೀಸಾ ಅವಧಿ ಮುಗಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳಿಗೆ ಆರೋಪಿಗಳನ್ನು ಕರೆದುಕೊಂಡು ಹೋದರೆ ನ್ಯಾಯಾಲಯಗಳೂ ಆರೋಪಿಗಳಿಗೆ ಯಾವುದೇ ಶಿಕ್ಷೆಯನ್ನು ವಿಧಿಸದೆ ದಂಡವನ್ನು ಕಟ್ಟಿಸಿಕೊಂಡು ಬಿಟ್ಟು ಬಿಡುತ್ತಾರೆ. ಇದರಿಂದ, ರಾಜ್ಯದಲ್ಲಿ ವಿದೇಶಿಗರಿಂದ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ. ಹೀಗಾಗಿ, ಎಡಿಜಿಪಿ ಅವರು ಮಂಗಳವಾರ ಖುದ್ದಾಗಿ ಹೈಕೋರ್ಟ್‌ಗೆ ಹಾಜರಾಗಿ ವಿವರಣೆ ನೀಡಲು ಹೈಕೋರ್ಟ್ ಸೂಚಿಸಿತು. ವಿಜಯ್ ಸೇರಿ ನೈಜೀರಿಯಾದ ಮೂವರು ಆರೋಪಿಗಳು 2015ರಲ್ಲಿ ಓಲೆಕ್ಸ್‌ನಲ್ಲಿ ಕಾರಿನ ಫೋಟೊವನ್ನು ಡೌನ್‌ಲೋಡ್ ಮಾಡಿ ಈ ಕಾರನ್ನು ಮಾರಲಾಗುತ್ತಿದ್ದು, ಮುಂಚಿತವಾಗಿ 3,26,600 ಲಕ್ಷ ರೂ.ಹಣವನ್ನು ತಾವು ಹೇಳಿದ ಅಕೌಂಟ್ ನಂಬರ್‌ಗೆ ಹಾಕಬೇಕೆಂದು. ಆ ಬಳಿಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಬಂದು ಕಾರನ್ನು ತೆಗೆದುಕೊಂಡು ಹೋಗುವಂತೆಯೂ ಸೂಚಿಸಿದ್ದರು. ಅದರಂತೆ ಕಾರು ತೆಗೆದುಕೊಳ್ಳಲು ಇಚ್ಛಿಸಿದ ವ್ಯಕ್ತಿಯೊಬ್ಬರು ಆ ಅಕೌಂಟ್ ನಂಬರ್‌ಗೆ 3,26,600 ಲಕ್ಷ ರೂ.ಹಣವನ್ನು ಹಾಕಿ ಆ ಸ್ಥಳಕ್ಕೆ ಹೋಗಿ ನೋಡಿದಾಗ ಕಾರು ಮಾರಲು ಇಚ್ಛಿಸಿದ್ಧ ವ್ಯಕ್ತಿಗಳು ಹಾಗೂ ಆ ಸ್ಥಳದಲ್ಲಿ ಕಾರೂ ಇಲ್ಲದಿರುವುದು ಬೆಳಕಿಗೆ ಬಂದಿದೆ.
ತಕ್ಷಣ ವಂಚನೆಗೊಳಗಾದ ವ್ಯಕ್ತಿಗಳು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಪೊಲೀಸರು ಈ ನಾಲ್ವರು ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದು, ಸದ್ಯ ಆರೋಪಿಗಳು ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.





