ಹೆಬ್ಬಾಳ ಉಪ ಚುನಾವಣೆ; 70 ಅತಿಸೂಕ್ಷ್ಮ, 69 ಸೂಕ್ಷ್ಮ ಸೇರಿ 237 ಮತಗಟ್ಟೆಗಳ ಸ್ಥಾಪನೆ
ಬೆಂಗಳೂರು, ಫೆ. 8: ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಫೆ.13ರಂದು ನಡೆಯಲಿದ್ದು, ಅತಿಸೂಕ್ಷ್ಮ-70, ಸೂಕ್ಷ್ಮ -69, ಸಾಮಾನ್ಯ-98 ಸೇರಿದಂತೆ ಒಟ್ಟು 237 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಬಿಬಿಎಂಪಿಯ 8 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಚುನಾವಣೆ ನಡೆಯಲಿದ್ದು, ಕ್ಷೇತ್ರದಲ್ಲಿ ಒಟ್ಟು 2, 43,703 ಮಂದಿ ಮತದಾರರಿದ್ದು, ಆಪೈಕಿ 1,26,313 ಮಂದಿ ಪುರುಷರು ಹಾಗೂ 1,17,376 ಮಹಿಳಾ ಮತದಾರರಿದ್ದಾರೆಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಮುಕ್ತ -ನ್ಯಾಯ ಸಮ್ಮತ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ-1, ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ-1, ಸಹಾಯಕ ಚುನಾವಣಾಧಿಕಾರಿ-1, ಚುನಾವಣಾ ನೋಂದಣಾಧಿಕಾರಿ-1, ಸಹಾಯಕ ಚುನಾವಣಾ ನೋಂದಣಾಧಿಕಾರಿ-2, ಸಾಮಾನ್ಯ ವೀಕ್ಷಕರು, ವೆಚ್ಚ ವೀಕ್ಷಕರು ತಲಾ ಒಬ್ಬರನ್ನು ಹಾಗೂ 15 ಮಂದಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ಸಹಾಯವಾಣಿ: ಹೆಬ್ಬಾಳ ವಿಧಾನಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಸಹಾಯವಾಣಿ ಸಂಖ್ಯೆ-080- 2237 4740 ಹಾಗೂ 080-2222 1188 ಅನ್ನು ಆರಂಭಿಸಲಾಗಿದೆ.





