ಚುಟಕು ಸುದ್ದಿಗಳು
ಫೆ.21: ಕುಂದಾಪುರಕ್ಕೆ ಗಾಯಕಿ ವಾಣಿ ಜಯರಾಮ್
ಕುಂದಾಪುರ, ಫೆ.8: ಕೋಟದ ಮನಸ್ಮಿತ ಫೌಂಡೇಶನ್‌ನ ಆಶ್ರಯದಲ್ಲಿ ಸಹನಾ ಗ್ರೂಪ್ ಕೋಟೇಶ್ವರ ಸಹಭಾಗಿತ್ವದಲ್ಲಿ ಮಾನಸಿಕ ಅಸ್ವಸ್ಥರ ಸಹಾಯಾರ್ಥ ಕರ್ನಾಟಕದ ಹೆಸರಾಂತ ಗಾಯಕರ ಸಮ್ಮಿಲನದಲ್ಲಿ ಸಂಗೀತ ರಸಸಂಜೆ ‘ವಾಣಿಯ ಸ್ವರ ಝೇಂಕಾರ’ ಕಾರ್ಯಕ್ರಮ ಫೆ.21ರಂದು ಸಂಜೆ 6:30ರಿಂದ ಜರಗಲಿದೆ. ಈ ಕಾರ್ಯಕ್ರಮದಲ್ಲಿ ಹೆಸರಾಂತ ಗಾಯಕಿ ವಾಣಿ ಜಯರಾಮ್ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಸರಕಾರಿ ನೌಕರರ ಕ್ರೀಡಾಕೂಟ: ರಾಜ್ಯಮಟ್ಟಕ್ಕೆ ಆಯ್ಕೆ
ಮಂಗಳೂರು, ಫೆ.8: ಸರಕಾರಿ ಐಟಿಐ, ಕದ್ರಿಹಿಲ್ಸ್ ಇದರ ಪ್ರಾಂಶುಪಾಲ ಗಿರಿಧರ್ ಸಾಲ್ಯಾನ್ ಇತ್ತೀಚೆಗೆ ಮಂಗಳಾ ಕ್ರೀಡಾಂಗಣದಲ್ಲಿ ಜರಗಿದ ಸರಕಾರಿ ನೌಕರರ ಕ್ರೀಡಾಕೂಟದ ಪುರುಷರ ವಿಭಾಗದ ಜಾವೆಲಿನ್ ಥ್ರೊ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, 45 ವರ್ಷ ಮೇಲ್ಪಟ್ಟ ಪುರುಷರ ವಿಭಾಗದ ಡಿಸ್ಕಸ್ ಥ್ರೊ ಮತ್ತು ಶಾಟ್‌ಫುಟ್ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಶಿವಮೊಗ್ಗದಲ್ಲಿ ಜರಗಲಿರುವ ರಾಜ್ಯ ಮಟ್ಟದ ಸಿವಿಲ್ ಸರ್ವಿಸಸ್ ಕ್ರೀಡಾಕೂಟಕ್ಕೆ ದ.ಕ ಜಿಲ್ಲೆಯನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
ರಾಜ್ಯಮಟ್ಟದ ಕರಾಟೆಯಲ್ಲಿ ಅದೀಶ್ ಕೂಜುಗೋಡುಗೆ ಪ್ರಶಸ್ತಿ
ಸುಬ್ರಹ್ಮಣ್ಯ, ಫೆ.8: ದಕ್ಷಿಣ ಕನ್ನಡ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕರಾಟೆ ಅಸೋಸಿಯೋಶನ್ಸ್ ವತಿಯಿಂದ ಪುತ್ತೂರು ಸುಭದ್ರ ಸಭಾ ಮಂದಿರದಲ್ಲಿ ಇತ್ತೀಚೆಗೆ ಜರಗಿದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ 16 ವರ್ಷದ ಕೆಳಗಿನ ಬ್ಲೂ ಮತ್ತು ಪರ್ಪಲ್ ಬೆಲ್ಟ್‌ನ ವಿಭಾಗದಲ್ಲಿ ದ್ವಿತೀಯ ಹಾಗೂ ಬ್ರೌನ್ ಬೆಲ್ಟ್ ಕಟಾ ವಿಭಾಗದಲ್ಲಿ ಅದೀಶ್ ಕೂಜುಗೋಡು ತೃತೀಯ ಸ್ಥಾನ ಪಡೆದಿರುತ್ತಾರೆ. ಈತ ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ 9ನೆ ತರಗತಿ ವಿದ್ಯಾರ್ಥಿ, ಇವನು ಶಶಿಕಲಾ ಮತ್ತು ಸುರೇಶ್ ಕೂಜುಗೋಡು ಇವರ ಪುತ್ರ.
ಸಾಣೂರು ಯುವಕ ಮಂಡಲದ ಪದಾಧಿಕಾರಿಗಳ ಆಯ್ಕೆ
ಕಾರ್ಕಳ, ಫೆ.8: ಸಂಘ ಸಂಸ್ಥೆಗಳು ಸಮಾಜದ ನೋವು ನಲಿವುಗಳಿಗೆ ಸ್ಪಂದಿಸಬೇಕು. ಸೇವಾ ಮನೋಭಾವದಿಂದ ಯುವಕ ಸಂಘಗಳು ಕೆಲಸ ಮಾಡಿದಾಗ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಕಾರ್ಕಳ ಸ.ಪ.ಪೂ. ಕಾಲೇಜಿನ ಉಪನ್ಯಾಸಕ ಬಿ.ಕೆ.ಈಶ್ವರಮಂಗಲ ಹೇಳಿದರು.
ಅವರು ಶನಿವಾರ ಸಾಣೂರು ಗ್ರಾಪಂನ ಸುವರ್ಣ ಗ್ರಾಮೋದಯ ಸಭಾಭವನದಲ್ಲಿ ಸಾಣೂರು ಯುವಕ ಮಂಡಲದ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಜಾನ್ ಆರ್.ಡಿಸಿಲ್ವ, ತಾಲೂಕು ಯುವಜನ ಸೇವೆ ಮತ್ತು ಕ್ರೀಡಾ ಅಧಿಕಾರಿ ನಾರಾಯಣ ರಾವ್ ಮಾತನಾಡಿದರು. ನಿರ್ಗಮನ ಅಧ್ಯಕ್ಷ ಶಂಕರ್ ಶೆಟ್ಟಿ ಕೊಲ್ದ್ರೂಟ್ಟು ನೂತನ ಅಧ್ಯಕ್ಷ ಪ್ರಕಾಶ್ ಮಡಿವಾಳ ಇವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಚೆನ್ನೈಯಲ್ಲಿ ನಡೆದ ರಾಷ್ಟ್ರಮಟ್ಟದ ಶಟ್ಲ್ ಬ್ಯಾಡ್ಮಿಂಟನ್ ಸ್ಪಧೆರ್ಯಲ್ಲಿ ಚಿನ್ನದ ಪದಕ ಪಡೆದಸಾಣೂರಿನ ಆಯುಷ್ ಆರ್.ಶೆಟ್ಟಿ ಹಾಗೂ ಕಾರವಾರದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪ್ರಖ್ಯಾತ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಮಾಳ ಗ್ರಾಪಂ ಪಿ.ಡಿ.ಒ ಸಾಣೂರು ಸುಧಾಕರ್ ಶೆಟ್ಟಿ ಪ್ರತಿಜ್ಞಾ ಫಲಕವನ್ನು ಮಂಡಲಕ್ಕೆ ತಮ್ಮ ಕೊಡುಗೆಯಾಗಿ ಹಸ್ತಾಂತರಿಸಿದರು
ವೇದಮೂರ್ತಿ ಶ್ರೀರಾಮ ಭಟ್ ಅವರು ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ವೇದಿಕೆಯಲ್ಲಿ ಉದ್ಯಮಿ ದೀಪಕ್ ಬಾಳಿಗಾ, ಮಂಡಲದ ಮಾಜಿ ಅಧ್ಯಕ್ಷರುಗಳಾದ ಕೆ.ಪಿ.ಶೆಟ್ಟಿಗಾರ್, ಏಕನಾಥ್ ಜಿ.ಪ್ರಭು, ಕೃಷ್ಣ ಎಲ್.ಪೂಜಾರಿ, ರಾಘು ಪೂಜಾರಿ, ಪ್ರವೀಣ್ ಶೆಟ್ಟಿ, ಗಣೇಶ್ ನಾಯಕ್ ಸಾಣೂರು, ಮಹೇಶ್ ಕುಮಾರ್ ಉಪಸ್ಥಿತರಿದ್ದರು. ಪ್ರವೀಣ್ ಶೆಟ್ಟಿ ಮುದಲಾಡಿ ಸ್ವಾಗತಿಸಿದರು. ಪ್ರೀತಂ ಡಿಸೋಜ ನೂತನ ತಂಡದ ಸದಸ್ಯರನ್ನು ಪರಿಚಯಿಸಿದರು. ಚಂದ್ರಹಾಸ ಪೂಜಾರಿ ಹಾಗೂ ಪ್ರಣೀತ್ ಸನ್ಮಾನಪತ್ರ ವಾಚಿಸಿದರು. ಶಿಕ್ಷಕ ಸಚ್ಚರಿಪೇಟೆ ಸುಧೀರ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಮೋಹನ್ ಶೆಟ್ಟಿ ವಂದಿಸಿದರು.
ತರಬೇತಿ
ಮಂಗಳೂರು, ಫೆ. 8: ಜಿಲ್ಲಾ ಸಣ್ಣ ಕೈಗಾರಿಕಾ ಸಂಘ ಯೆಯ್ಯಡಿ ಇದರ ಮಹಿಳಾ ಉಪಸಮಿತಿಯಿಂದ ಮಹಿಳೆಯರಿಗಾಗಿ ೆ.15ರಿಂದ ಎರಡು ದಿನಗಳ ಕಾಲ ಗಾರ್ಮೆಂಟ್ ಮೇಕಿಂಗ್ ತರಬೇತಿ ಸಂಘದ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಪೂರ್ವಾಹ್ನ 10 ರಿಂದ ಅಪರಾಹ್ನ 1 ರವರೆಗೆ ಉಚಿತ ತರಬೇತಿ ನೀಡಲಾಗುವುದು. ಆಸಕ್ತರು ದೂರವಾಣಿ ಸಂ. 9242981578 ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಪಿ.ಎ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಡಾ.ಎಸ್.ಎ. ಖಾನ್‌ರಿಂದ ಅತಿಥಿ ಉಪನ್ಯಾಸ
ಕೊಣಾಜೆ, ಫೆ.8: ಮಲೇಶ್ಯಾದ ಕೌಲಾಲಂಪುರ ಅಂತಾರಾಷ್ಟ್ರೀಯ ಇಸ್ಲಾಮಿಕ್ ವಿಶ್ವವಿದ್ಯಾನಿಲಯದ ಪ್ರೊ.ಡಾ.ಎಸ್.ಎ.ಖಾನ್ ಇತ್ತೀಚೆಗೆ ಪಿ.ಎ. ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ರಕ್ಷಣೆ ಮತ್ತು ಸೌರ ಸಂಪನ್ಮೂಲಗಳಲ್ಲಿ ಇತ್ತೀಚಿನ ಬೆಳವಣಿಗೆ’ ಎಂಬ ವಿಚಾರದಲ್ಲಿ ಅತಿಥಿ ಉಪನ್ಯಾಸ ನೀಡಿದರು. ಈ ಹಿಂದೆ ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದ ಡಾ.ಖಾನ್, ಜೆಟ್ ಇಂಜಿನ್, ಜೆಟ್ ನೊಯಿಸ್, ಮಿಸೈಲ್ ತಂತ್ರಜ್ಞಾನ, ರಾಕೆಟ್‌ಗಳ ಬಗ್ಗೆ ತಮ್ಮ ವಿಚಾರ ಮಂಡಿಸಿದರು. ಈ ಸಂದರ್ಭ ಸಂಸ್ಥೆಯ ಪ್ರಾಂಶುಪಾಲ ಡಾ.ಅಬ್ದುಲ್ ಶರೀಫ್, ಶೈಕ್ಷಣಿಕ ನಿರ್ದೇಶಕ ಪ್ರೊ.ಸರ್ಫರಾಝ್ ಹಾಶಿಂ, ಸಂಶೋಧನಾ ವಿಭಾಗದ ಡೀನ್ ಡಾ.ಝಹೀದ್ ಅನ್ಸಾರಿ ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲ ಡಾ.ರಮೀಝ್ ಎಂ.ಕೆ. ವಂದಿಸಿದರು.
ಎಸ್‌ಎಫ್‌ಸಿ ಉಡುಪಿ ತಂಡಕ್ಕೆ ವೆಂಕಟರಮಣ ಟ್ರೋಫಿ
ಕಾಪು, ಫೆ.8: ವೆಂಕಟರಮಣ ಕ್ರಿಕೆಟರ್ಸ್ ಪಿತ್ರೋಡಿ ಆಶ್ರಯದಲ್ಲಿ ಕಟಪಾಡಿ ನೆಹರೂ ಮೈದಾನದಲ್ಲಿ ಇತ್ತೀಚೆಗೆ ಏರ್ಪಡಿಸಲಾದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಉಡುಪಿಯ ಎಸ್‌ಎಫ್‌ಸಿ ತಂಡ ವೆಂಕಟರಮಣ ಟ್ರೋಫಿ ಹಾಗೂ 50 ಸಾವಿರ ರೂ. ನಗದು ಬಹುಮಾನ ಗೆದ್ದುಕೊಂಡಿದೆ.
ಫೈನಲ್ ಪಂದ್ಯಾಟದಲ್ಲಿ ಸೋಲುಂಡ ಉಡುಪಿ ಎ.ಕೆ.ಸ್ಪೊರ್ಟ್ಸ್ ರನ್ನರ್ ಅಪ್ ಟ್ರೋಫಿ ಜೊತೆಗೆ 25 ಸಾವಿರ ರೂ. ನಗದು ಬಹುಮಾನ ತನ್ನದಾಗಿಸಿದೆ. ಉಡುಪಿ ಆಭರಣ ಮೋಟಾರ್ಸ್ ತಂಡ ಉತ್ತಮ ಶಿಸ್ತು ಬದ್ಧ ತಂಡ ಪ್ರಶಸ್ತಿ, ಎಸ್‌ಎಫ್‌ಸಿಯ ಪ್ರದೀಪ್ ಕಿದಿಯೂರು ಸರಣಿ ಶ್ರೇಷ್ಠ ಎ.ಕೆ ಸ್ಪೋರ್ಟ್ಸ್‌ನ ರಾಘು ಬೆಸ್ಟ್ ಬೌಲರ್, ಆಭರಣ ಮೋಟಾರ್ಸ್ ತಂಡದ ರೋಹನ್ ಕೀತ್ ಉತ್ತಮ ದಾಂಡಿಗ, ಎಸ್‌ಎಫ್‌ಸಿಯ ನಾಗಾ ಫೈನಲ್‌ನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.ಸಮಾರೋಪ ಸಮಾರಂಭದಲ್ಲಿ ಅಶಕ್ತರಿಗೆ ಸಹಾಯಧನವನ್ನು ವಿತರಿಸ ಲಾಯಿತು. ಸಮಾಜ ಸೇವಕ ರತ್ನಾಕರ ಕಟಪಾಡಿ, ಮಹಿಳಾ ಕ್ರಿಕೆಟ್‌ಪಟು ಚೈತ್ರಾ ಉಡುಪಿ, ಯುಎಇ ರಾಷ್ಟ್ರೀಯ ತಂಡದ ಆಟಗಾರ ನಿತಿನ್ ಮುಲ್ಕಿ, ನೃತ್ಯಪಟು ಧನುಶ್ರೀ ಅವರನ್ನು ಸನ್ಮಾನಿಸಲಾಯಿತು. ಪಂದ್ಯಾಟದ ವಿಜೇತರುಗಳಿಗೆ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ ಬಹುಮಾನ ವಿತರಿಸಿದರು.
ಶಿಕ್ಷಣದಿಂದ ಜೀವನ ಅರ್ಥಪೂರ್ಣ
ಬೆಳ್ತಂಗಡಿ, ಫೆ.8: ಕಪುಚಿನ್ ಕೃಷಿಕ ಸೇವಾ ಕೇಂದ್ರ ದಯಾಳ್ ಬಾಗ್ ಗ್ರಾಮಾಭಿವೃದ್ಧಿ ಯೋಜನೆ ವಿಮುಕ್ತಿ ವತಿಯಿಂದ ಚೈಲ್ಡ್ ಫಂಡ್ ಇಂಡಿಯಾದ ಸಹಭಾಗಿತ್ವದಲ್ಲಿ ಹೆಣ್ಣುಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸೈಕಲ್ ಜಾಥಾವನ್ನು ಬಂಗಾಡಿ ವಲಯದಲ್ಲಿ ಹಮ್ಮಿಕೊಳ್ಳಲಾಯಿತು ಸಂಸ್ಥೆಯ ನಿರ್ದೇಶಕರಾದ ವಂ.ಫಾ.ವಿನೋದ್ ಮಾಸ್ಕರೇನ್ಹಸ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಇಂದಬೆಟ್ಟು ಗ್ರಾಪಂ ಕಾರ್ಯದರ್ಶಿಯಾದ ಕೊರಗಪ್ಪ ನಾಕ್, ಶಾಲಾ ಮುಖ್ಯ ಶಿಕ್ಷಕರಾದ ರೋಶನ್ ಡಿಸೋಜ ಮತ್ತಿತರರು ಭಾಗವಹಿಸಿದ್ದರು.
ನವೀಕೃತ ಕೂಡುರಸ್ತೆ ಉದ್ಘಾಟನೆ
ಮೂಡುಬಿದಿರೆ, ಫೆ.8: ಪುರಸಭೆಯ ವತಿಯಿಂದ 22 ಲಕ್ಷ ರೂ. ವೆಚ್ಚದಲ್ಲಿ ನವೀಕೃತಗೊಂಡ ವಿದ್ಯಾಗಿರಿ-ಮಾಸ್ತಿಕಟ್ಟೆ ಕೂಡುರಸ್ತೆಯನ್ನು ಸಚಿವ ಕೆ. ಅಭಯಚಂದ್ರ ಜೈನ್ ಶನಿವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸರಕಾರದ ಸಹಕಾರದೊಂದಿಗೆ ಪುರಸಭೆಯು ವಿದ್ಯಾಗಿರಿ-ಮಾಸ್ತಿಕಟ್ಟೆಯ ಕೂಡುರಸ್ತೆಗೆ ಮರು ಡಾಮರೀಕರಣವನ್ನು ಮಾಡಿಸಲಾಗಿದೆ ಎಂದರು. ಪುರಸಭಾಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ, ಉಪಾಧ್ಯಕ್ಷೆ ಶಕುಂತಲಾ ದೇವಾಡಿಗ, ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಸದಸ್ಯ ಸುರೇಶ್ ಪ್ರಭು, ಕೌನ್ಸಿಲರ್‌ಗಳಾದ ನಾಗರಾಜ ಪೂಜಾರಿ, ರತ್ನಾಕರ ದೇವಾಡಿಗ, ಸುಪ್ರಿಯಾ ಡಿ. ಶೆಟ್ಟಿ, ಪಿ.ಕೆ ತೋಮಸ್, ಬಾಹುಬಲಿ ಪ್ರಸಾದ್, ಲಕ್ಷ್ಮಣ್ ಪೂಜಾರಿ, ಪ್ರಸಾದ್, ವನಿತಾ, ಕಂದಾಯ ನಿರೀಕ್ಷಕ ಧನಂಜಯ, ಇಂಜಿನಿಯರ್ ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.
ಶೋಷಣೆ ವಿರುದ್ಧ ಮಹಿಳೆಯರು ಎಚ್ಚೆತ್ತುಕೊಳ್ಳಬೇಕು
ಕಿನ್ನಿಗೋಳಿ, ಫೆ.8: ಮಹಿಳೆ ಶೈಕ್ಷಣಿಕವಾಗಿ ಆರ್ಥಿಕವಾಗಿ ಮುಂದುವರಿದರೂ ಶೋಷಣೆ, ಕಿರುಕುಳ ನಡೆಯುತ್ತಿದೆ ಈ ಬಗ್ಗೆ ಮಹಿಳೆಯರು ಎಚ್ಚೆತ್ತು ಕೊಳ್ಳಬೇಕಾಗಿದೆ ಎಂದು ಪತ್ರಕರ್ತ ಶರತ್ ಶೆಟ್ಟಿ ಹೇಳಿದರು. ಅವರು ಎಸ್. ಕೋಡಿಯಲ್ಲಿ ಸಂಗಮ ಮಹಿಳಾ ಮಂಡಲ ಹಾಗೂ ಯುವತಿ ಮಂಡಲ ಇದರ 13ನೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಕಿನ್ನಿಗೋಳಿ ಗ್ರಾಪಂ ಅಧ್ಯಕ್ಷೆ ಫಿಲೊಮಿನಾ ಸಿಕ್ವೇರ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿಕಲಚೇತನ ಮಕ್ಕಳಿಗೆ ಅರ್ಥಿಕ ಸಹಾಯ ನೀಡಲಾಯಿತು. ಹಳೆಯಂಗಡಿ ಮಹಿಳಾ ಮಂಡಲದ ಅಧ್ಯಕ್ಷೆ ಜ್ಯೋತಿ ರಾಮಚಂದ್ರ, ಶಿಕ್ಷಕಿ ಮಮತಾ ಶರತ್ ಶೆಟ್ಟಿ, ಗೌರವಾಧ್ಯಕ್ಷೆ ಶಾಲೆಟ್ ಪಿಂಟೊ, ಸಂಘದ ಅಧ್ಯಕ್ಷೆ ದಮಯಂತಿ, ಕಾರ್ಯದರ್ಶಿ ಶೋಭಾ ರಾವ್, ಕೋಶಾಧಿಕಾರಿ ಸಂಜೀವಿ ಜೆ. ಶೆಟ್ಟಿ, ಸಂಘಟಕಿ ನಂದಾ ಪಾಯಸ್ ಉಪಸ್ಥಿತರಿದ್ದರು. ಶಶಿಸುರೇಶ್ ಸ್ವಾಗತಿಸಿದರು.







