ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿದ ಕೊರಗ ದಂಪತಿಗೆ ಸನ್ಮಾನ

ಶಿರ್ವ, ಫೆ.8: ಸಾಲ್ಮರ ಬಸ್ ನಿಲ್ದಾಣದ ಬಳಿ ಶನಿವಾರ ಜರಗಿದ ಶಂಕರಪುರ ಶ್ರೀದುರ್ಗಾ ಟೆಂಪೊ ಚಾಲಕರ ಮತ್ತು ಮಾಲಕರ ಸಂಘದ ವಾರ್ಷಿಕೋತ್ಸವ ಸಮಾರಂಭದಲ್ಲಿ ತಮ್ಮ ಮೂರೂ ಹೆಣ್ಣು ಮಕ್ಕಳಿಗೂ ಸ್ನಾತಕೋತ್ತರ ಶಿಕ್ಷಣ ನೀಡಿದ ಅಪೂರ್ವ ಸಾಧನೆಗಾಗಿ ಕೊರಗ ಸಮುದಾಯದ ಅನಕ್ಷರಸ್ಥ ದಂಪತಿ ಬಂಟಕಲ್ಲು ಅರಸೀಕಟ್ಟೆ ಬಾಬು ಕೊರಗ ಮತ್ತು ಶೀಲಾರನ್ನು ಸನ್ಮಾನಿಸಲಾಯಿತು. ದಂಪತಿಯನ್ನು ಸನ್ಮಾನಿಸಿದ ಶ್ರೀಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀಈಶವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಿ, ಈ ದಂಪತಿಯ ಮಕ್ಕಳು ಡಿಸ್ಟಿಂಕ್ಷನ್ ಅಂಕಗಳೊಂದಿಗೆ ಉತ್ತೀರ್ಣರಾದರೂ ಈವರೆಗೆ ಉದ್ಯೋಗ ದೊರಕದಿರುವುದು ದುರಂತ. ನಮ್ಮ ಸರಕಾರದ ಆಡಳಿತ ವ್ಯವಸ್ಥೆ, ಜನಪ್ರತಿನಿಧಿಗಳ ತಾತ್ಸಾರಕ್ಕೆ ಇದು ಜ್ವಲಂತ ಸಾಕ್ಷಿಯಾಗಿದೆ. ಹರಿಜನ ಗಿರಿಜನ ಉದ್ಧಾರ ಎನ್ನುವುದು ಕೇವಲ ಘೋಷಣೆಯಾಗಿಯೇ ಉಳಿದಿದೆ ಎಂದರು. ಈ ಸಂದರ್ಭದಲ್ಲಿ ಹಿರಿಯ ಟೆಂಪೊ ಚಾಲಕ ಬಾಬು ಕೊಟ್ಯಾನ್‌ರನ್ನು ಸನ್ಮಾನಿಸಲಾಯಿತು. ವಿಕಲಚೇತನ ಬಡ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಲಾಯಿತು. ಮುಖ್ಯ ಅತಿಥಿಗಳಾಗಿ ಹಿರಿಯ ಶಿಕ್ಷಕ ಬಿ.ಪುಂಡಲೀಕ ಮರಾಠೆ ಶಿರ್ವ, ಶಿರ್ವ ಆರಕ್ಷಕ ಠಾಣಾಧಿಕಾರಿ ಜಾನ್ಸನ್ ಡಿಸೋಜ ಹಾಗೂ ಶಂಕರಪುರ ಜಾಸ್ಮಿನ್ ಜೇಸಿಸ್ ಅಧ್ಯಕ್ಷೆ ಸಿಲ್ವಿಯಾ ಕ್ಯಾಸ್ತಲಿನೊ ಉಪಸ್ಥಿತರಿದ್ದರು.





