ಎನ್‌ಸಿಸಿಯಿಂದ ಆತ್ಮಸ್ಥೈರ್ಯ ಹೆಚ್ಚಳ: ಮೆನನ್

ಉಡುಪಿ, ಫೆ.8: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪೈಪೋಟಿಗಳು ಹೆಚ್ಚಾಗುತ್ತಿದ್ದು, ಎನ್‌ಸಿಸಿಯು ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತದೆ. ಸ್ಪರ್ಧೆಗಳು ಬದುಕಿನಲ್ಲಿ ಎದುರಾಗುವ ಕಷ್ಟ ಹಾಗೂ ಜನರನ್ನು ಎದುರಿಸುವಂತಹ ಕಲೆಗಳನ್ನು ಹೇಳಿಕೊಡುತ್ತವೆ ಎಂದು 21ನೆ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಉಡುಪಿ ಕಮಾಂಡಿಂಗ್ ಅಧಿಕಾರಿ ಪಿ.ಎನ್. ಮೆನನ್ ಹೇಳಿದ್ದಾರೆ.
ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಎನ್‌ಸಿಸಿ ಘಟಕ ಹಾಗೂ 21 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಉಡುಪಿ ಇದರ ಸಹಯೋಗದೊಂದಿಗೆ ಕಾಲೇಜಿನ ಮೈದಾನದಲ್ಲಿ ಇತ್ತೀಚೆಗೆ ಏರ್ಪಡಿಸಲಾದ ಎನ್‌ಸಿಸಿ ಅಂತರ್ ಕಂಪೆನಿ ಚಾಂಪಿಯನ್‌ಶಿಪ್‌ನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು
ಕಾಲೇಜಿನ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್, ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಗದೀಶ್ ಶೆಟ್ಟಿ, ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ರಮೇಶ್, ಎನ್‌ಸಿಸಿ ಅಧಿಕಾರಿ ಪ್ರಕಾಶ್ ರಾವ್, ಉಪನ್ಯಾಸಕ ಡಾ.ಎ.ಪಿ.ಭಟ್ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ 21ನೆ ಬೆಟಾಲಿಯನ್ ವ್ಯಾಪ್ತಿಯ ಉಡುಪಿ ಪಿಪಿಸಿ, ಎಂಜಿಎಂ, ಸರಕಾರಿ ಮಹಿಳಾ ಕಾಲೇಜು, ಕಲ್ಯಾಣಪುರ ಮಿಲಾಗ್ರಿಸ್, ಬ್ರಹ್ಮಾವರ ಎಸ್‌ಎಂಎಸ್, ಬಸ್ರೂರು ಶಾರದಾ, ಕುಂದಾಪುರ ಭಂಡಾರ್ಕರ್ಸ್, ಕಾರ್ಕಳ ಭುವನೇಂದ್ರ, ಶಿರ್ವ ಸೈಂಟ್ ಮೇರಿಸ್, ಶೃಂಗೇರಿ ಜೆಸಿಬಿಎಂ ಕಾಲೇಜಿನ ಎನ್‌ಸಿಸಿ ತಂಡಗಳು ಭಾಗವಹಿಸಿದ್ದವು.





