ಸಮಾಜಕಾರ್ಯ ಶಿಕ್ಷಣವು ಕಾಲದ ಅಗತ್ಯ: ಡಾ.ಗುಂಜಾಲ್

ಪುತ್ತೂರು, ಫೆ.8: ಪ್ರತಿ ಕುಟುಂಬಕ್ಕೂ ಆಪ್ತ ಸಂವಾದ ನಡೆಸಿಕೊಡಲು ಸಾಮಾಜಿಕ ಕಾರ್ಯಕರ್ತರನ್ನು ನಿಯುಕ್ತಿಗೊಳಿಸಬೇಕಾದ ಸಾಮಾಜಿಕ ಅನಿವಾರ್ಯತೆ ಇಂದು ಸೃಷ್ಟಿಯಾಗಿದೆ. ಇಂತಹ ಬದಲಾದ ಕೌಟುಂಬಿಕ, ಸಾಮಾಜಿಕ ಪರಿಸರದಲ್ಲಿ ಸೋಶಿಯಲ್ ವರ್ಕ್ ಪದವೀಧರರಿಗೆ ಹೊಸ ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ. ತಮ್ಮ ಕೌಶಲಗಳೊಂದಿಗೆ ವಿದ್ಯಾರ್ಥಿಗಳು ಅವುಗಳಿಗೆ ತೆರೆದುಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ. ಬಿ.ಎಸ್.ಗುಂಜಾಲ್ ಅಭಿಪ್ರಾಯಪಟ್ಟರು.
ಪುತ್ತೂರು ತಾಲೂಕಿನ ಬೆಟ್ಟಂಪಾಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಕಾರ್ಯ ವಿಭಾಗದ ಆಶ್ರಯದಲ್ಲಿ ನಡೆದ ‘ಸಮಾಜಕಾರ್ಯ ಶಿಕ್ಷಣ-ಹೊಸ ದೃಷ್ಟಿ ಮತ್ತು ಆಯಾಮಗಳು’ ಎಂಬ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ವಲಯದ ಜಂಟಿ ನಿರ್ದೇಶಕ ಪ್ರೊ.ಶಿವಮೂರ್ತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿಶ್ವ ವಿದ್ಯಾನಿಲಯದ ಸಮಾಜಕಾರ್ಯ ವಿಭಾಗದ ಸಹ ಪ್ರಾಧ್ಯಾಪಕ ಡಾ.ಪಾಲ್ ಅಕ್ವಿನಸ್ ಉಪಸ್ಥಿತರಿದ್ದರು.





