ಪಠಾಣ್‌ಕೋಟ್ ದಾಳಿಯಲ್ಲಿ ಜೈಶ್ ಮುಖ್ಯಸ್ಥ ಶಾಮೀಲಾಗಿಲ್ಲ: ಪಾಕ್
ಸಾಬೀತುಪಡಿಸುವ ಪುರಾವೆ ಇಲ್ಲ
ಇಸ್ಲಾಮಾಬಾದ್, ಫೆ. 8: ಪಠಾಣ್‌ಕೋಟ್ ವಾಯು ಪಡೆ ನೆಲೆ ಮೇಲೆ ಕಳೆದ ತಿಂಗಳು ನಡೆದ ಭಯೋತ್ಪಾದಕ ದಾಳಿಯಲ್ಲಿ ಭಯೋತ್ಪಾದಕ ಗುಂಪು ಜೈಶೆ ಮುಹಮ್ಮದ್‌ನ ಮುಖ್ಯಸ್ಥ ವೌಲಾನಾ ಮಸೂದ್ ಅಝರ್ ಶಾಮೀಲಾಗಿರುವುದನ್ನು ಸಾಬೀತುಪಡಿಸುವ ಯಾವುದೇ ಪುರಾವೆ ಇಲ್ಲ ಎಂಬ ತೀರ್ಮಾನಕ್ಕೆ ಪಾಕಿಸ್ತಾನ ಬಂದಿದೆ.
ವಾಯುಪಡೆ ನೆಲೆಗೆ ನುಗ್ಗಿ ಗುಂಡಿನ ದಾಳಿ ನಡೆಸಿದ ಆರು ಭಯೋತ್ಪಾದಕರನ್ನು ಅಝರ್ ಕಳುಹಿಸಿದ್ದನು ಎಂದು ಭಾರತ ಆರೋಪಿಸಿದೆ. ಭಯೋತ್ಪಾದಕರನ್ನು ಸದೆಬಡಿದು ವಾಯುಪಡೆ ನೆಲೆಯನ್ನು ಅಪಾಯಮುಕ್ತಗೊಳಿಸಲು ಭಾರತೀಯ ಭದ್ರತಾ ಪಡೆಗಳು ಸುಮಾರು 80 ಗಂಟೆಗಳ ಕಾರ್ಯಾಚರಣೆ ನಡೆಸಿದ್ದವು.
ಪಠಾಣ್‌ಕೋಟ್ ಭಯೋತ್ಪಾದಕ ದಾಳಿಯಲ್ಲಿ ಏಳು ಸೇನಾ ಸಿಬ್ಬಂದಿ ಹತರಾಗಿದ್ದಾರೆ.
ಈ ಮೂಲಕ ಪಾಕಿಸ್ತಾನ ತನ್ನ ಎಂದಿನ ಚಾಳಿಯನ್ನು ಮುಂದುವರಿಸಿದೆ ಎಂದು ಆಪಾದಿಸಲಾಗಿದೆ. ತನ್ನ ಪ್ರಜೆಗಳು ಈ ದಾಳಿಯಲ್ಲಿ ಶಾಮೀಲಾಗಿದ್ದಾರೆ ಎಂಬುದನ್ನು ಪಾಕಿಸ್ತಾನ ತಕ್ಷಣಕ್ಕೆ ನಿರಾಕರಿಸಿಲ್ಲ. ಅದೂ ಅಲ್ಲದೆ, ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ಪ್ರಧಾನಿ ನರೇಂದ್ರ ಮೋದಿಗೆ ಕರೆ ಮಾಡಿ, ತನಿಖೆಯಲ್ಲಿ ಎಲ್ಲ ರೀತಿಯ ನೆರವು ಮತ್ತು ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದ್ದರು.
ಬಳಿಕ, ಭಾರತ ನೀಡಿರುವ ಪುರಾವೆಗಳ ಪರಿಶೀಲನೆಗೆ ಶರೀಫ್ ಸೇನೆ, ಗುಪ್ತಚರ ಸಂಸ್ಥೆ ಮತ್ತು ಸರಕಾರಿ ಅಧಿಕಾರಿಗಳನ್ನೊಳಗೊಂಡ ಉನ್ನತ ಮಟ್ಟದ ತಂಡವೊಂದನ್ನು ರಚಿಸಿದ್ದರು.
ಪಠಾಣ್‌ಕೋಟ್ ದಾಳಿಯ ಸೂತ್ರಧಾರರ ವಿರುದ್ಧ ಪಾಕಿಸ್ತಾನ ಕ್ರಮ ತೆಗೆದುಕೊಳ್ಳುವವರೆಗೆ ಭಾರತ ಮತ್ತು ಪಾಕಿಸ್ತಾನಗಳ ವಿದೇಶ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯನ್ನು ಭಾರತ ಅಮಾನತಿನಲ್ಲಿಟ್ಟಿತ್ತು. ಪಾಕಿಸ್ತಾನದ ಈ ನಿಲುವಿಗೆ ಭಾರತ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ.
ತನ್ನ ಆರೋಪವನ್ನು ಸಾಬೀತುಪಡಿಸಲು ಭಾರತ ಪಾಕಿಸ್ತಾನಕ್ಕೆ ಪುರಾವೆಗಳನ್ನು ಒದಗಿಸಿತ್ತು. ಆದರೆ, ಪಠಾಣ್‌ಕೋಟ್‌ನಲ್ಲಿದ್ದ ಭಯೋತ್ಪಾದಕರು ಮಾಡಿದ ಫೋನ್ ಕರೆಗಳ ದಾಖಲೆಗಳು ಸೇರಿದಂತೆ ಭಾರತ ಒದಗಿಸಿರುವ ಕೆಲವು ಪುರಾವೆಗಳು ತಾಳೆಯಾಗುವುದಿಲ್ಲ ಎಂದು ಇಸ್ಲಾಮಾಬಾದ್ ಹೇಳಿದೆ.





