ರಾಜ್ಯದಲ್ಲಿ ವಿಶೇಷ ನ್ಯಾಯಾಲಯಗಳ ಸ್ಥಾಪನೆಗೆ ವಿಳಂಬ: ಹೈಕೋರ್ಟ್ ಗರಂ
ಬೆಂಗಳೂರು, ಫೆ.8: ಬೆಂಗಳೂರು ಸೇರಿ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ವಿಶೇಷ ನ್ಯಾಯಾಲಯಗಳನ್ನು ಏಕೆ ಸ್ಥಾಪಿಸಿಲ್ಲ ಎಂದು ಹೈಕೋರ್ಟ್ ರಾಜ್ಯ ಸರಕಾರವನ್ನು ಪ್ರಶ್ನಿಸಿದೆ.
ಪ್ರಕರಣವೊಂದರ ಸಂಬಂಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆಯಲ್ಲಿ ನ್ಯಾಯಮೂರ್ತಿ ವೇಣುಗೋಪಾಲಗೌಡ ಅವರಿದ್ದ ನ್ಯಾಯಪೀಠವು ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಎಸ್‌ಪಿಪಿ ಹುದ್ದೆಗಳೂ ಖಾಲಿ ಇವೆ. ಆದರೂ ರಾಜ್ಯ ಸರಕಾರ ಎಸ್‌ಪಿಪಿ ಹುದ್ದೆಗಳನ್ನು ತುಂಬಿಲ್ಲ. ಹಾಗೂ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಿಲ್ಲವೆಂದು ಪ್ರಶ್ನಿಸಿತು.
ಬೆಂಗಳೂರು ಲೋಕಾಯುಕ್ತ ಪ್ರಕರಣಗಳಿಗೆ ಸಂಬಂಧ ಪಟ್ಟಂತೆ ವಕೀಲರು ಹೈಕೋರ್ಟ್‌ಗೆ ಎರಡು ದಿನಗಳು ಮಾತ್ರ ಬರುತ್ತೇವೆಂದು ಹೇಳುತ್ತಾರೆ. ಆದರೆ, ಲೋಕಾಯುಕ್ತದವರಿಗೆ ಬೇರೆ ವಕೀಲರು ಸಿಗುವುದಿಲ್ಲವೆಯೆಂದು ಪ್ರಶ್ನಿಸಿತು. ಫೆ.18ಕ್ಕೆ ಯಾವ ಇಲಾಖೆಗಳಿಗೆ ಐಎಎಸ್, ಐಎಫ್‌ಎಸ್, ಐಪಿಎಸ್ ಅಧಿಕಾರಿಗಳು ಬೇಕೆಂಬ ವಿವರಣೆಯನ್ನು ಸರಕಾರ ಹೈಕೋರ್ಟ್‌ಗೆ ನೀಡಬೇಕು. ಅಲ್ಲದೆ, ಪಿಸಿ ಕಾಯ್ದೆ ಅನುಗುಣವಾಗಿ ಜಿಲ್ಲಾ ನ್ಯಾಯಾಲಯಕ್ಕೆ ಹಾಗೂ ಹೈಕೋರ್ಟ್‌ಗೆ ಎಷ್ಟೆಷ್ಟು ನ್ಯಾಯಮೂರ್ತಿಗಳು ಬೇಕೆಂಬುದನ್ನು ಸರಕಾರ ಹೈಕೋರ್ಟ್ ಹಾಗೂ ಜಿಲ್ಲಾ ಕೋರ್ಟ್‌ಗಳ ರಿಜಿಸ್ಟ್ರಾರ್‌ಗಳಿಗೆ ವರದಿಯನ್ನು ನೀಡಬೇಕೆಂಬ ಸೂಚನೆಯನ್ನು ನೀಡಿತು.





