ಚೀನಾ ಆರ್ಥಿಕ ಕಾರಿಡಾರ್‌ಗೆ 'ಉಗ್ರ' ಬೆದರಿಕೆ
ಗ್ವಾಡರ್ (ಪಾಕಿಸ್ತಾನ), ಫೆ. 8: ಪಾಕಿಸ್ತಾನದ ದಕ್ಷಿಣದ ಬಂದರು ನಗರ ಗ್ವಾಡರ್‌ನಲ್ಲಿ ಚೀನಾ ಸಾವಿರಾರು ಕೋಟಿ ರೂಪಾಯಿಗಳನ್ನು ಸುರಿದು ಆರ್ಥಿಕ ಕಾರಿಡಾರೊಂದನ್ನೇನೋ ನಿರ್ಮಿಸುತ್ತಿದೆ. ಆದರೆ, ಅದನ್ನು ಭಯೋತ್ಪಾದಕರಿಂದ ರಕ್ಷಿಸುವುದೇ ಪಾಕಿಸ್ತಾನಕ್ಕೆ ದೊಡ್ಡ ಸವಾಲಿನ ವಿಷಯವಾಗಿದೆ.
ಗ್ವಾಡರ್ ನಗರದಲ್ಲಿ ಈಗ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಹಾಗೂ ಹೊಸ ತಪಾಸಣಾ ಠಾಣೆಗಳನ್ನು ಸ್ಥಾಪಿಸಲಾಗಿದೆ. ಈ ಮೂಲಕ ಈ ನಗರವನ್ನು ದುರ್ಗಮ ಕೋಟೆಯನ್ನಾಗಿ ಪರಿವರ್ತಿಸಲಾಗಿದೆ. ಇಲ್ಲಿ ಚೀನಾ 46 ಬಿಲಿಯ ಡಾಲರ್ (ಸುಮಾರು 3,12,210 ಕೋಟಿ ರೂಪಾಯಿ) ವೆಚ್ಚದಲ್ಲಿ ವಾಯುವ್ಯ ಚೀನಾದಿಂದ ಪಾಕಿಸ್ತಾನದ ಅರಬ್ಬಿ ಸಮುದ್ರ ಕರಾವಳಿವರೆಗೆ ರಸ್ತೆಗಳು, ಮತ್ತು ರೈಲು ಹಳಿಗಳನ್ನು ನಿರ್ಮಿಸುತ್ತಿದೆ ಹಾಗೂ ಪೈಪ್‌ಲೈನ್‌ಗಳನ್ನು ಹಾಕುತ್ತಿದೆ.
ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಎಂದೇ ಕರೆಯಲಾಗುವ ವಲಯದ ದಕ್ಷಿಣದ ಕೇಂದ್ರಕ್ಕೆ ಸಶಸ್ತ್ರ ಪಡೆಗಳು ಮತ್ತು ಆಂತರಿಕ ಸಚಿವಾಲಯ ನೂರಾರು ಹೆಚ್ಚುವರಿ ಸೈನಿಕರು ಮತ್ತು ಪೊಲೀಸರನ್ನು ಕಳುಹಿಸಿವೆ ಹಾಗೂ ಇನ್ನಷ್ಟು ಭದ್ರತಾ ಸಿಬ್ಬಂದಿ ಅಲ್ಲಿಗೆ ಹೋಗಲಿದ್ದಾರೆ.
''ಚೀನಾ ಸೊತ್ತುಗಳ ಭದ್ರತೆಗೆಂದೇ ನಾವು ಪ್ರತ್ಯೇಕ ಭದ್ರತಾ ಘಟಕವೊಂದನ್ನು ಸ್ಥಾಪಿಸಲಿದ್ದು, ಅದಕ್ಕಾಗಿ ಶೀಘ್ರವೇ 700-800 ಪೊಲೀಸರನ್ನು ನೇಮಕ ಮಾಡಲಿದ್ದೇವೆ. ಮುಂದಿನ ದಿನಗಳಲ್ಲಿ ಇದಕ್ಕಾಗಿ ಪ್ರತ್ಯೇಕ ಭದ್ರತಾ ವಿಭಾಗವನ್ನೇ ತೆರೆಯಲಿದ್ದೇವೆ'' ಎಂದು ಗ್ವಾಡರ್‌ನ ಹಿರಿಯ ಪೊಲೀಸ್ ಅಧಿಕಾರಿ ಜಾಫರ್ ಖಾನ್ ಹೇಳಿದರು.





