ನೇಪಾಳ: ಮಧೇಸಿಗಳಿಂದ 5 ತಿಂಗಳ ಗಡಿ ಮುತ್ತಿಗೆ ವಾಪಸ್

ಕಠ್ಮಂಡು, ಫೆ. 8: ನೇಪಾಳದ ನೂತನ ಸಂವಿಧಾನದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಮಧೇಸಿಗಳು ಸೋಮವಾರ ತಮ್ಮ ಐದು ತಿಂಗಳ ಅವಧಿಯ ಭಾರತ-ನೇಪಾಳ ಗಡಿ ಮುತ್ತಿಗೆಯನ್ನು ಮುಕ್ತಾಯಗೊಳಿಸಿದ್ದಾರೆ. ಇದರೊಂದಿಗೆ, ಇಂಧನ, ಔಷಧ ಮತ್ತು ಇತರ ಆವಶ್ಯಕ ವಸ್ತುಗಳ ತೀವ್ರ ಕೊರತೆಯಿಂದ ಬಳಲುತ್ತಿದ್ದ ದೇಶ ನಿರಾಳವಾಗಿದೆ.
''ಪ್ರಸಕ್ತ ದೇಶ ಎದುರಿಸುತ್ತಿರುವ ಬಿಕ್ಕಟ್ಟು ಹಾಗೂ ಜನರ ಆವಶ್ಯಕತೆಗಳು ಮತ್ತು ಆಶೋತ್ತರಗಳನ್ನು ಗಮನದಲ್ಲಿರಿಸಿಕೊಂಡು, ಸಾಮಾನ್ಯ ಮುಷ್ಕರ, ಗಡಿ ಮುತ್ತಿಗೆ ಮತ್ತು ಸರಕಾರಿ ಕಚೇರಿಗಳ ಬಂದ್ ಮುಂತಾದ ಪ್ರತಿಭಟನಾ ಕಾರ್ಯಕ್ರಮಗಳನ್ನು ಸದ್ಯಕ್ಕೆ ಹಿಂದಕ್ಕೆ ಪಡೆದುಕೊಳ್ಳಲಾಗಿದೆ'' ಎಂದು 'ಸಂಯುಕ್ತ ಪ್ರಜಾಸತ್ತಾತ್ಮಕ ಮಧೇಸಿ ರಂಗ'ದ ನಾಯಕರ ಸಭೆಯ ಬಳಿಕ ಹೊರಡಿಸಲಾದ ಹೇಳಿಕೆಯೊಂದು ತಿಳಿಸಿದೆ.
ನೇಪಾಳದ ಪ್ರಧಾನಿ ಕೆ.ಪಿ. ಒಲಿ ಅವರ ಫೆಬ್ರವರಿ 19ರ ಭಾರತ ಭೇಟಿಗೆ ಪೂರ್ವಭಾವಿಯಾಗಿ ಗಡಿ ಮುತ್ತಿಗೆಯನ್ನು ಹಿಂದಕ್ಕೆ ಪಡೆದುಕೊಳ್ಳುವ ಘೋಷಣೆ ಹೊರಬಿದ್ದಿದೆ. ಇದು ನೇಪಾಳದ ನೂತನ ಪ್ರಧಾನಿಯ ಪ್ರಥಮ ವಿದೇಶ ಪ್ರವಾಸವಾಗಿದೆ.
''ಆದಾಗ್ಯೂ, ನಮ್ಮ ಬೇಡಿಕೆಗಳು ಈಡೇರುವವರೆಗೆ ಚಳವಳಿ ಮುಂದುವರಿಯ ಲಿದೆ'' ಎಂದು ಹೇಳಿಕೆ ತಿಳಿಸಿದೆ. ಜಿಲ್ಲಾ ಪ್ರಧಾನ ಕೇಂದ್ರಗಳಲ್ಲಿ ದೊಂದಿ ಮೆರವಣಿಗೆ, ಲಾಠಿ ಮೆರವಣಿಗೆ ಮತ್ತು ಜನಾಭಿಪ್ರಾಯ ಸಂಗ್ರಹ ಪ್ರತಿಭಟನಾ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಅದು ಹೇಳಿದೆ.
ನೇಪಾಳದ ಮಧೇಸಿ ಸಮುದಾಯದ ಸದಸ್ಯರು ಹೆಚ್ಚಾಗಿ ಭಾರತ ಮೂಲದವರಾಗಿದ್ದು ಭಾರತದೊಂದಿಗೆ ಬಲವಾದ ಸಾಂಸ್ಕೃತಿಕ ಹಾಗೂ ಕೌಟುಂಬಿಕ ನಂಟನ್ನು ಹೊಂದಿದ್ದಾರೆ. ನೂತನ ಸಂವಿಧಾನವು ತಮ್ಮ ಪೂರ್ವಿಕರ ಭೂಮಿಯನ್ನು ಹಲವು ರಾಜ್ಯಗಳಲ್ಲಿ ಹಂಚಿಹೋಗುವಂತೆ ವಿಭಜಿಸಿರುವುದು ಅವರ ಆಕ್ರೋಶಕ್ಕೆ ಕಾರಣವಾಗಿದೆ.





