ಜಾಸ್ತಿ ಗ್ರೀನ್ ಟೀ ಕುಡಿದರೆ ಲಿವರ್‌ಗೆ ಹಾನಿ, ರಕ್ತಹೀನತೆ ಸಮಸ್ಯೆ... !

ಹೊಸದಿಲ್ಲಿ, ಫೆ.9: ಭಾರತದಲ್ಲಿ ಈಗ ಬಳಕೆ ಜಾಸ್ತಿಯಾಗಿರುವ ಗ್ರೀನ್ ಟೀಗೆ ಕುತ್ತು ಬಂದಿದೆ, ಗ್ರೀನ್ ಟೀ ಜಾಸ್ತಿ ಸೇವಿಸುವುದರಿಂದ ಲಿವರ್‌ಗೆ ಹಾನಿಯಾಗುತ್ತದೆ ಮತ್ತು ರಕ್ತಹೀನತೆ ಸಮಸ್ಯೆಗೆ ಕಾರಣವಾಗಬಹುದೆಂದು ತಜ್ಞರು ಎಚ್ಚರಿಸಿದ್ದಾರೆ.
ತಲೆ ನೋವು, ಮೈ ಕೈ ನೋವು ನಿವಾರಣೆ ಮತ್ತು ಆಯುರಾರೊಗ್ಯ ಸಹಕಾರಿ ಎಂದು ಹೇಳಲಾಗುತ್ತಿರುವ ಗ್ರೀನ್ ಟೀ ಸೇವಿಸುವುದರಿಂದ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುವ ಸಾಧ್ಯತೆಯೂ ಇದೆ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಇಂಗ್ಲೆಂಡ್‌ನಲ್ಲಿ ಹದಿನಾರರ ಹರೆಯದ ಬಾಲಕಿ ಹೊಟ್ಟೆ ನೋವು , ಮೈಕೈ ನೋವು ಕಾರಣಕ್ಕಾಗಿ ವೈದ್ಯರಲ್ಲಿಗೆ ತೆರಳಿದಳು. ಔಷಧಿ ತೆಗೆದುಕೊಂಡು ಎರಡು ದಿನ ಕಳೆಯುವ ಹೊತ್ತಿಗೆ ಆಕೆಯ ಆರೋಗ್ಯದ ಸ್ಥಿತಿ ಇನ್ನಷ್ಟು ಹದಗಟ್ಟಿತು. ವೈದ್ಯರು ಪರೀಕ್ಷಿಸಿದಾಗ ಆಕೆಯ ಲಿವರ್‌ಗೆ ಹಾನಿಯಾಗಿರುವುದು ಗೊತ್ತಾಯಿತು. ಬಾಲಕಿ ಆಲ್ಕೋಹಾಲ್, ಡ್ರಗ್ಸ್ ಅಥವಾ ಯಾವುದೇ ಅಡ್ಡ ಪರಿಣಾಮ ಬೀರುವ ಔಷಧಿಯನ್ನು ತೆಗೆದುಕೊಂಡಿರಲಿಲ್ಲ. ದಿನದಲ್ಲಿ ಮೂರು ಕಪ್ ಗ್ರೀನ್ ಟೀ ಕುಡಿಯುತ್ತಿದ್ದಳು. ಇದು ಆಕೆಯ ಅನಾರೋಗ್ಯದ ಸಮಸ್ಯೆಗೆ ಕಾರಣವಾಗಿತ್ತು.
ಬಾಲಕಿ ವೈದ್ಯರ ಸಲಹೆ ಮೇರೆಗೆ ಗ್ರೀನ್ ಟೀ ಕುಡಿಯುವುದನ್ನು ನಿಲ್ಲಿಸಿದಳು. ಇದರಿಂದ ಆಕೆಯ ಆರೋಗ್ಯದಲ್ಲಿ ಬದಲಾವಣೆ ಕಂಡು ಬಂತು.
ಕ್ಯಾಮೆರಲಿಯಾ ಸೈನೆನ್ಸಿಸ್ ಎಂಬ ಜಾತಿಯ ಟೀ ಗಿಡವೇ ಗ್ರೀನ್ ಟೀ ಮೂಲ. ಈ ಹಿಂದೆ ಔಷಧಿಯಂತೆ ಬಳಸಲಾಗುತ್ತಿದ್ದ ಈ ಎಲೆಗಳನ್ನು ಈಗ ಟೀಯಂತೆ ಉಪಯೋಗಿಸಿಕೊಳ್ಳಲಾಗುತ್ತಿದೆ.ಅತಿ ಹೆಚ್ಚು ಆ್ಯಂಟಿಯಾಕ್ಸಿಡೆಂಟ್, ಅಮಿನೊ ಆಸಿಡ್, ಕಾರ್ಬೊಹೈಡ್ರೇಟ್, ಲಿಪಿಡ್ ಅಂಶಗಳನ್ನು ಹೊಂದಿರುವ ಗ್ರೀನ್ ಟೀಯನ್ನು ರಕ್ತ ಹೆಪ್ಪುಗಟ್ಟುವಿಕೆ, ಗಾಯ ಗುಣಪಡಿಸಲು, ಜೀರ್ಣಕ್ರಿಯೆಗೆ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು, ಹೃದಯ ಸ್ವಾಸ್ಥ್ಯಕ್ಕೆ ಹಾಗೂ ದೇಹದ ಉಷ್ಣವನ್ನು ಸಮತೋಲನವಾಗಿಸಲು ಬಳಸಲಾಗುತ್ತಿತ್ತು. ಆದರೆ ಕಾಲಕ್ರಮೇಣ ಔಷಧದಂತಿದ್ದ ಗ್ರೀನ್ ಟೀ ಸೇವನೆ ಕೆಲವರಿಗೆ ಇತ್ತೀಚಿನ ದಿನಗಳಲ್ಲಿ ಚಟವಾಗಿ ಪರಿಣಮಿಸಿದೆ.





