ಐಸಿಸಿ ಅಂಡರ್-19 ವಿಶ್ವಕಪ್: ಭಾರತ ಫೈನಲ್‌ಗೆ;ಮತ್ತೊಮ್ಮೆ ಮಿಂಚಿದ ಸರ್ಫರಾಝ್ ಖಾನ್

ಮೀರ್ಪುರ, ಫೆ.9: ಐಸಿಸಿ ಅಂಡರ್-19 ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ಮುಂದುವರಿಸಿರುವ ಮೂರು ಬಾರಿಯ ಚಾಂಪಿಯನ್ ಭಾರತ ತಂಡ ಐದನೆ ಬಾರಿ ಫೈನಲ್‌ಗೆ ತಲುಪಿದೆ.
ಮಂಗಳವಾರ ಇಲ್ಲಿ ನಡೆದ ಸೆಮಿಫೈನಲ್‌ನಲ್ಲಿ ರಾಹುಲ್ ದ್ರಾವಿಡ್ ಕೋಚಿಂಗ್‌ನಲ್ಲಿ ಪಳಗಿರುವ ಭಾರತದ ಜೂನಿಯರ್ ತಂಡ ಶ್ರೀಲಂಕಾವನ್ನು 97 ರನ್‌ಗಳ ಅಂತರದಿಂದ ಮಣಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿತು. ಫೆ.14 ರಂದು ನಡೆಯಲಿರುವ ಫೈನಲ್‌ನಲ್ಲಿ ವೆಸ್ಟ್‌ಇಂಡೀಸ್ ಅಥವಾ ಆತಿಥೇಯ ಬಾಂಗ್ಲಾದೇಶವನ್ನು ಎದುರಿಸಲಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಕಳಪೆ ಆರಂಭದ ಹೊರತಾಗಿಯೂ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 267 ರನ್ ಗಳಿಸಲು ಸಮರ್ಥವಾಯಿತು. ಗೆಲುವಿಗೆ ಕಠಿಣ ಸವಾಲು ಪಡೆದ ಶ್ರೀಲಂಕಾ 42.4 ಓವರ್‌ಗಳಲ್ಲಿ 170 ರನ್‌ಗೆ ಆಲೌಟಾಯಿತು.
ಟೂರ್ನಿಯಲ್ಲಿ ಆಡಿರುವ ಐದನೆ ಇನಿಂಗ್ಸ್‌ನಲ್ಲಿ ನಾಲ್ಕನೆ ಬಾರಿ ಫಿಫ್ಟಿ ಪ್ಲಸ್ ಸ್ಕೋರ್ ದಾಖಲಿಸಿದ ಸರ್ಫರಾಝ್ ಖಾನ್(59 ರನ್, 71 ಎಸೆತ) ಹಾಗೂ ಅನ್ಮೋಲ್‌ಪ್ರೀತ್ ಸಿಂಗ್(72 ರನ್, 92 ಎಸೆತ) ಭಾರತದ ಬ್ಯಾಟಿಂಗ್ ಸ್ಟಾರ್‌ಗಳಾಗಿ ಮೂಡಿ ಬಂದರು.
ಬೆಳಗ್ಗಿನ ಮೋಡ ಕವಿದ ವಾತಾವರಣದಲ್ಲಿ ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಭಾರತ ಫಾರ್ಮ್‌ನಲ್ಲಿರುವ ಆರಂಭಿಕ ಆಟಗಾರರಾದ ರಿಷಭ್ ಪಂತ್(14) ಹಾಗೂ ನಾಯಕ ಐಶಾನ್ ಕಿಶನ್‌ರನ್ನು(7) ಅಲ್ಪ ಮೊತ್ತಕ್ಕೆ ಕಳೆದುಕೊಂಡಿತು. ಆಗ ಭಾರತ 27 ರನ್‌ಗೆ 2 ವಿಕೆಟ್ ಕಳೆದುಕೊಂಡಿತು.
ಆಗ ಜೊತೆಯಾದ ಅನ್ಮೋಲ್ ಪ್ರೀತ್ ಹಾಗೂ ಸರ್ಫರಾಝ್ ಖಾನ್ ಮೂರನೆ ವಿಕೆಟ್‌ಗೆ 96 ರನ್ ಸೇರಿಸಿ ತಂಡವನ್ನು ಆಧರಿಸಿದರು. ಅನ್ಮೋಲ್ ಅಗ್ರ ಸ್ಕೋರರ್ (72 ರನ್, 92 ಎಸೆತ, 6 ಬೌಂಡರಿ, 1 ಸಿಕ್ಸರ್)ಎನಿಸಿಕೊಂಡರು. 18ರ ಹರೆಯದ ಮುಂಬೈ ಬ್ಯಾಟ್ಸ್‌ಮನ್ ಸರ್ಫ್‌ರಾಝ್ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ಮುಂದುವರಿಸಿದರು. ಈಗಾಗಲೇ 76, ಔಟಾಗದೆ 21, 74 ಹಾಗೂ 74 ರನ್ ಗಳಿಸಿದ್ದ ಪವರ್-ಹಿಟ್ಟರ್ ಸರ್ಫ್‌ರಾಝ್ ಮಂಗಳವಾರದ ಸೆಮಿಫೈನಲ್‌ನಲ್ಲಿ 71 ಎಸೆತಗಳನ್ನು ಎದುರಿಸಿ 6 ಬೌಂಡರಿ, 1 ಸಿಕ್ಸರ್‌ಗಳ ಸಹಿತ 59 ರನ್ ಬಾರಿಸಿದರು.
ಸರ್ಫ್‌ರಾಝ್ ಔಟಾದ ನಂತರ ವಿ. ಸುಂದರ್(43 ರನ್, 45 ಎಸೆತ) ಅವರೊಂದಿಗೆ ಇನಿಂಗ್ಸ್ ಬೆಳೆಸಿದ ಅನ್ಮೋಲ್ ಉಪಯುಕ್ತ 70 ರನ್ ಜೊತೆಯಾಟ ನಡೆಸಿದರು.
ಕೊನೆಯ 10 ಓವರ್‌ಗಳಲ್ಲಿ ಸುಂದರ್, ಅರ್ಮಾನ್ ಜಾಫರ್(29 ರನ್, 16 ಎಸೆತ) ಹಾಗೂ ಮಯಾಂಕ್ ದಾಗಾರ್(17 ರನ್, 10 ಎಸೆತ) ಸಂದರ್ಭೋಚಿತವಾಗಿ ಬ್ಯಾಟಿಂಗ್ ಬೀಸುವ ಮೂಲಕ ಭಾರತ ಸ್ಪರ್ಧಾತ್ಮಕ ಸ್ಕೋರ್ ಗಳಿಸಲು ನೆರವಾದರು.
ಗೆಲ್ಲಲು ಕಠಿಣ ಸವಾಲು ಪಡೆದ ಶ್ರೀಲಂಕಾ ದಾಂಡಿಗರಿಗೆ ಎಡಗೈ ಸ್ಪಿನ್ನರ್ ದಾಗಾರ್ (3-21)ನೇತೃತ್ವದ ಭಾರತದ ಬೌಲರ್‌ಗಳು ಸವಾಲಾಗಿ ಪರಿಣಮಿಸಿದರು. ಟೂರ್ನಿಯಲ್ಲಿ ಗರಿಷ್ಠ ವಿಕೆಟ್‌ಗಳನ್ನು ಪಡೆದಿರುವ ವೇಗದ ಬೌಲರ್ ಆವೇಶ್‌ಖಾನ್(2-41) ಮೊದಲ ಓವರ್‌ನಲ್ಲಿ ಅವಿಷ್ಕಾ ಫೆರ್ನಾಂಡೊ ವಿಕೆಟ್ ಉರುಳಿಸಿ ಶ್ರೀಲಂಕಾಕ್ಕೆ ಶಾಕ್ ನೀಡಿದರು.
ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿದ ಶ್ರೀಲಂಕಾ 35ನೆ ಓವರ್‌ಗಳಲ್ಲಿ 133 ರನ್‌ಗೆ 6 ವಿಕೆಟ್ ಕಳೆದುಕೊಂಡಿತ್ತು. ಎರಡನೆ ಬಾರಿ ಫೈನಲ್‌ಗೆ ತಲುಪುವ ಅವಕಾಶವನ್ನು ಕೈಚೆಲ್ಲಿತು. ಕಮಿಂಡು ಮೆಂಡಿಸ್(39) ಹಾಗೂ ಶಮ್ಮು ಅಶಾನ್(38) ಲಂಕಾದ ಪರ ಎರಡಂಕೆ ಸ್ಕೋರ್ ದಾಖಲಿಸಿದರು.
ಸಂಕ್ಷಿಪ್ತ ಸ್ಕೋರ್
ಭಾರತ ಅಂಡರ್-19 ತಂಡ: 50 ಓವರ್‌ಗಳಲ್ಲಿ 267/9
(ಅನ್ಮೋಲ್‌ಪ್ರೀತ್ ಸಿಂಗ್ 72, ಎಸ್‌ಎನ್ ಖಾನ್ 59, ವಿ. ಸುಂದರ್ 43, ಫೆರ್ನಾಂಡೊ(4-43), ಕುಮಾರ 2-50, ನಿಮೇಶ್ 2-50)
ಶ್ರೀಲಂಕಾ ಅಂಡರ್-19 ತಂಡ: 42.4 ಓವರ್‌ಗಳಲ್ಲಿ 170 ರನ್‌ಗೆ ಆಲೌಟ್
(ಕಮಿಂಡು ಮೆಂಡಿಸ್ 39, ಶಮ್ಮು ಅಶಾನ್ 38, ಮಯಾಂಕ್ ದಾಗಾರ್ 3-21, ಆವೇಶ್ ಖಾನ್ 2-41)
ಪಂದ್ಯಶ್ರೇಷ್ಠ: ಅನ್ಮೋಲ್‌ಪ್ರೀತ್ ಸಿಂಗ್.
..........







