ಇದು ಇರಾನ್ ನ ಕರುಣೆಯ ಗೋಡೆ !
ಚೀನಾದ ಮಹಾಗೋಡೆಯ ಕುರಿತು ಬಹಳಷ್ಟು ಕೇಳಿದ್ದೇವೆ , ಜರ್ಮನಿಯ ಬರ್ಲಿನ್ ಗೋಡೆಯ ಬಗ್ಗೆಯೂ ನಮಗೆ ಗೊತ್ತು . ಆದರೆ ಇರಾನ್ ನ "ಕರುಣೆಯ ಗೋಡೆ " ಈ ರೀತಿಯ ಐತಿಹಾಸಿಕ ಗೋಡೆ ಅಲ್ಲ . ಆದರೆ ಮುಂದೊಂದು ದಿನ ಒಂದು ಮಾನವೀಯ ಇತಿಹಾಸದ ಅವಿಭಾಜ್ಯ ಅಂಗವಾಗುವ ಗೋಡೆ ಇದು. ಇರಾನ್ ನ ಹಲವೆಡೆ ಖಾಲಿ ಇರುವ ಗೋಡೆಗಳನ್ನು ಮಾನವೀಯ ಉದ್ದೇಶಕ್ಕಾಗಿ ಸುಂದರಗೊಳಿಸಿದ ಕರುಣೆಯ ಕಥೆಯಿದು. ಖಾಲಿ ಇರುವ ಗೋಡೆಗಳಿಗೆ ಸ್ವಲ್ಪ ಬಣ್ಣ ಬಳಿದು ಅಲ್ಲೇ ಕೆಲವು ಕೊಕ್ಕೆಗಳನ್ನು ನೇತು ಹಾಕಲಾಗಿದೆ. " ನೀವು ಬಳಸದೆ ಇರುವುದನ್ನು ಇಲ್ಲಿ ಬಿಟ್ಟು ಹೋಗಿ ಅಥವಾ ನಿಮಗೆ ಅಗತ್ಯವಿರುವುದನ್ನು ತೆಗೆದುಕೊಳ್ಳಿ " ಎಂದು ಅಲ್ಲಿ ಬರೆಯಲಾಗಿದೆ. ಅಷ್ಟೇ ವಿಷಯ . ನಿಮ್ಮಲ್ಲಿ ನಿಮಗೆ ಬೇಡವಾಗಿರುವ ಆದರೆ ಇತರ ಯಾರಿಗಾದರೂ ಅತ್ಯಂತ ಅಗತ್ಯವಾಗಿ ಬೇಕಾಗಿರುವ ವಸ್ತು ( ಬಟ್ಟೆ ಬರೆ ಅಥವಾ ಇತರ ಯಾವುದೇ ವಸ್ತು ) ಇದ್ದಾರೆ ಅದನ್ನು ಅಲ್ಲಿ ಬಿಟ್ಟು ಹೋಗಬಹುದು. ಬೇಕಾದವರು ಅದನ್ನು ಅಲ್ಲಿಂದ ಎತ್ತಿಕೊಳ್ಳುತ್ತಾರೆ. ನೀವೇ ಯಾವುದಾದರು ವಸ್ತುವಿನ ಅಗತ್ಯದಲ್ಲಿದ್ದರೆ ಅದು ಅಲ್ಲಿದ್ದರೆ ನೀವು ಅದನ್ನು ಎತ್ತಿಕೊಳ್ಳಬಹುದು. ಎಷ್ಟು ಸುಂದರ ಐಡಿಯಾ. ಗೋಡೆಯ ಅಂದವೂ ಹೆಚ್ಚಿತು. ಅಗತ್ಯವಿರುವವರಿಗೆ ಸಹಾಯವೂ ತಲುಪಿತು. ವಿಶೇಷವೆಂದರೆ ಇದನ್ನು ಯಾರು ಪ್ರಾರಂಭಿಸಿದ್ದಾರೆ ಎಂದೇ ಸರಿಯಾಗಿ ಗೊತ್ತಿಲ್ಲ. ಆದರೆ ಇರಾನ್ ನೆಲ್ಲೆಡೆ ಇದು ವ್ಯಾಪಕವಾಗಿ ಹರಡುತ್ತಿದೆ. ಇದರ ಕೆಲವು ಚಿತ್ರಗಳು ಇಲ್ಲಿವೆ . ನೋಡಿ ನಿಮ್ಮಲ್ಲೂ ಇದನ್ನು ಪ್ರಾರಂಭಿಸಿ !





