ಸುಳ್ಯ : ಆನೆ ಹಿಂಡು ಕಾಡಿಗೆ - ಊರವರು ನಿರಾಳ

ಸುಳ್ಯ: ನಾರ್ಕೋಡಿನ ಕಾನತೋಟದಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳ ಹಿಂಡನ್ನು ಮತ್ತೆ ಕಾಡಿಗೆ ಅಟ್ಟಲು ಅರಣ್ಯ ಇಲಾಖಾ ಸಿಬ್ಬಂದಿ ಹಾಗೂ ಊರವರು ಸಫಲರಾಗಿದ್ದಾರೆ.
ಆಲೆಟ್ಟಿ ಗ್ರಾಮದ ನಾರ್ಕೋಡು ಸಮೀಪದ ಕಾನತೋಟ ಎಂಬಲ್ಲಿ ಕಾಡಾನೆ ಹಿಂಡು ಭಾನುವಾರ ರಾತ್ರಿ ದಾಂಧಲೆ ನಡೆಸಿ ಅಪಾರ ಪ್ರಮಾಣದ ಕೃಷಿ ಹಾನಿ ಮಾಡಿತ್ತು. ಕಾನತೋಟ ಎಂಬಲ್ಲಿಯ ಜನಾರ್ದನ ಭಟ್ ಹಾಗೂ ವಾಸುದೇವ ನಾರ್ಕೋಡು ಎಂಬವರ ತೋಟಕ್ಕೆ ನುಗ್ಗಿದ ಆನೆ ಹಿಂಡು ಅಲ್ಲಿ ಬಾಳೆ, ತೆಂಗು, ಕಂಗು ಸೇರಿದಂತೆ ಕೃಷಿಯನ್ನು ನಾಶ ಮಾಡಿತ್ತು. ಹಗಲು ಹೊತ್ತಿನಲ್ಲೂ ಇಲ್ಲಿ ಆನೆಗಳು ಸಂಚರಿಸುತ್ತಿದ್ದು, ನಾರ್ಕೋಡಿನಿಂದ ಅಜ್ಜಾವರ ಕಡೆಗೆ ಹೋಗುವ ರಸ್ತೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು. ಸೋಮವಾರ ಸ್ಥಳಕ್ಕೆ ತೆರಳಿದ ಗ್ರಾಮ ಪಂಚಾಯತ್ ಅಧ್ಯಕ್ಷ ಧನಂಜಯ ಕುಂಚಡ್ಕ, ಸದಸ್ಯ ಕೃಪಾಶಂಕರ ತುದಿಯಡ್ಕ ಮತ್ತಿತರರು ಆನೆಗಳನ್ನು ಓಡಿಸುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಸಂಜೆ ವೇಳೆಗೆ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಲ್ಲಿ ಸೇರಿದ್ದ ಸುಮಾರು 500ರಷ್ಟು ಗ್ರಾಮಸ್ಥರು ಪಟಾಕಿ ಸಿಡಿಸಿ ಆನೆಗಳನ್ನು ಮತ್ತೆ ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಅಜ್ಜಾವರ ಗ್ರಾಮದ ಪಡ್ಡಂಬೈಲು ಕಡೆಗೆ ಆನೆ ಹಿಂಡು ತೆರಳಿದೆ.





