ಮುಂಡಾಸು ತೆಗೆಯದ ಸಿಖ್‌ಗೆ ವಿಮಾನ ಹತ್ತಲು ನಿಷೇಧ

ಮೆಕ್ಸಿಕೊ ಸಿಟಿ, ಫೆ. 9: ಭದ್ರತಾ ತಪಾಸಣೆಯ ವೇಳೆ ತನ್ನ ಮುಂಡಾಸನ್ನು ತೆಗೆಯಲು ನಿರಾಕರಿಸಿದ ಸಿಖ್-ಅಮೆರಿಕನ್ ನಟ ಹಾಗೂ ವಿನ್ಯಾಸಕಾರನೋರ್ವನನ್ನು ಮೆಕ್ಸಿಕೊ ಸಿಟಿಯಲ್ಲಿ ವಿಮಾನ ಹತ್ತದಂತೆ ನಿರ್ಬಂಧಿಸಲಾಗಿದೆ.
ಅಮೆರಿಕದ ಮ್ಯಾನ್‌ಹಟನ್‌ನಲ್ಲಿ ನೆಲೆಸಿರುವ ವಾರಿಸ್ ಅಹ್ಲುವಾಲಿಯ (41) ಮೆಕ್ಸಿಕೊ ಸಿಟಿಯಿಂದ ನ್ಯೂಯಾರ್ಕ್‌ಗೆ ವಿಮಾನದಲ್ಲಿ ಪ್ರಯಾಣಿಸಬೇಕಾಗಿತ್ತು.
ಮೆಕ್ಸಿಕೊ ರಾಜಧಾನಿ ಮೆಕ್ಸಿಕೊ ಸಿಟಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಏರೋಮೆಕ್ಸಿಕೊ ಏರ್‌ಲೈನ್‌ನ ಕೌಂಟರ್‌ಗೆ ಸೋಮವಾರ ಸಂಜೆ 5.30ಕ್ಕೆ ಬಂದಾಗ ತನಗೆ ಪ್ರಥಮ ದರ್ಜೆಯ ‘ಬೋರ್ಡಿಂಗ್ ಪಾಸ್’ ನೀಡಲಾಯಿತು ಎಂದು ಅಹ್ಲುವಾಲಿಯ ತಿಳಿಸಿದರು.
‘‘ನನ್ನ ಮುಂಡಾಸಿನ ಕಾರಣದಿಂದಾಗಿ ನಾನು ಏರೋಮೆಕ್ಸಿಕೊ ವಿಮಾನವನ್ನು ಹತ್ತುವಂತಿಲ್ಲ ಎಂದು ಮಂಗಳವಾರ ಬೆಳಗ್ಗೆ ನನಗೆ ತಿಳಿಸಲಾಯಿತು’’ ಎಂದು ಅವರು ತನ್ನ ‘ಇನ್‌ಸ್ಟಾಗ್ರಾಂ’ ಖಾತೆಯಲ್ಲಿ ಬರೆದಿದ್ದಾರೆ.
ಅವರು ಆಸ್ಕರ್ ನಾಮನಿರ್ದೇಶಿತ ಚಿತ್ರ ‘ದ ಗ್ರಾಂಡ್ ಬುಡಾಪೆಸ್ಟ್ ಹೊಟೇಲ್’ ಮತ್ತು ಅಮೆರಿಕದ ಟೆಲಿವಿಶನ್ ಧಾರಾವಾಹಿ ‘ದ ಕ್ಯಾರೀ ಡಯರೀಸ್’ನಲ್ಲಿ ನಟಿಸಿದ್ದಾರೆ.
ಇಂದು ಬೆಳಗ್ಗೆ ನ್ಯೂಯಾರ್ಕ್ ನಗರಕ್ಕೆ ಹೋಗುವ ವಿಮಾನವನ್ನು ಹತ್ತಲು ಅದರ ಬಾಗಿಲ ಬಳಿ ಬಂದಾಗ, ಬದಿಗೆ ನಿಂತು ಇತರ ಪ್ರಯಾಣಿಕರು ಹತ್ತುವವರೆಗೆ ಕಾಯಿರಿ ಎಂದು ಅವರಿಗೆ ವಿಮಾನ ಸಿಬ್ಬಂದಿ ಸೂಚಿಸಿದರು.
ಬಳಿಕ ಅವರ ಪಾದಗಳು ಮತ್ತು ಚೀಲವನ್ನು ಶೋಧಿಸಿದರು. ಸ್ವೆಟ್‌ಶರ್ಟ್ ತೆಗೆಯುವಂತೆ ಅವರಿಗೆ ಸೂಚಿಸಲಾಯಿತು ಹಾಗೂ ಮೇಲಿನಿಂದ ಕೆಳಗಿನವರೆಗೆ ದೇಹವನ್ನು ತಟ್ಟಿ ತಡಕಾಡಲಾಯಿತು ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.
ಬಳಿಕ ತನ್ನ ಮುಂಡಾಸನ್ನು ತೆಗೆಯುವಂತೆ ಸೂಚಿಸಿದರು ಎಂದು ಅಹ್ಲುವಾಲಿಯ ಹೇಳಿದರು.
‘‘ನನ್ನ ಮುಂಡಾಸನ್ನು ನಾನು ತೆಗೆಯುವುದಿಲ್ಲ ಎಂದು ನಾನು ಅವರಿಗೆ ಹೇಳಿದೆ’’ ಎಂದರು.
‘‘ಅವರವರೊಳಗೆ ಮಾತನಾಡಿಕೊಂಡ ಸಿಬ್ಬಂದಿ, ‘ಸರಿ, ಹಾಗಾದರೆ ನೀವು ವಿಮಾನದ ಒಳಗೆ ಹೋಗಲು ಸಾಧ್ಯವಿಲ್ಲ’ ಎಂದರು’’ ಎಂದು ನುಡಿದರು.
ತಾನು ಮುಂಡಾಸನ್ನು ಯಾಕೆ ತೆಗೆಯಲಿಲ್ಲ ಎಂಬುದಕ್ಕೆ ವಿವರಣೆ ನೀಡಿದ ಅಹ್ಲುವಾಲಿಯ, ‘‘ಅದು ನನ್ನ ಧರ್ಮದ ಕುರುಹು’’ ಎಂದು ಹೇಳಿದರು.
12 ಗಂಟೆಗಳ ಬಳಿಕವೂ ಅಹ್ಲುವಾಲಿಯ ಮೆಕ್ಸಿಕೊ ವಿಮಾನ ನಿಲ್ದಾಣದಲ್ಲೇ ಇದ್ದಾರೆ. ಸಿಖ್ ಸಂಘಟನೆ ‘ಸಿಖ್ ಕೋಯಲೀಶನ್’ನ ವಕೀಲರು ಮತ್ತು ಏರೋಮೆಕ್ಸಿಕೊ ಅಧಿಕಾರಿಗಳು ಫೋನ್‌ನಲ್ಲಿ ಮಾತುಕತೆ ನಡೆಸಿದ್ದಾರೆ.
ಇನ್ನೊಂದು ವಿಮಾನ ಹತ್ತಿ ನ್ಯೂಯಾರ್ಕ್‌ಗೆ ಬರುವ ತಕ್ಷಣದ ಯೋಜನೆ ತನಗಿಲ್ಲ ಎಂದು ಅಹ್ಲುವಾಲಿಯ ಹೇಳಿದ್ದಾರೆ.





