ಮಲ ಹೊರುವ ಪದ್ಧತಿಯಲ್ಲಿ ರಾಜ್ಯಕ್ಕೆ ನಾಲ್ಕನೆ ಸ್ಥಾನ
-ಪ್ರಭಾಕರ ಟಿ. ಚೀಮಸಂದ್ರ
ಬೆಂಗಳೂರು, ಫೆ. 8: ಮಲ ಹೊರುವವರಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ನಡೆಸಿರುವ ಸಮೀಕ್ಷೆಯಲ್ಲಿ ರಾಜ್ಯ ನಾಲ್ಕನೆ ಸ್ಥಾನದಲ್ಲಿರುವ ಸಂಗತಿ ಬಹಿರಂಗವಾಗಿರುವ ಬೆನ್ನಲ್ಲೇ, ರಾಜ್ಯ ಸರಕಾರ ಗ್ರಾಮೀಣ ಪ್ರದೇಶದಲ್ಲಿನ ಮಲ ಹೊರುವ ಸಫಾಯಿ ಕರ್ಮಚಾರಿಗಳನ್ನು ಗುರುತಿಸಲು ಫೆ.29ರಿಂದ ಮರು ಸಮೀಕ್ಷೆ ನಡೆಸಲು ಸಿದ್ಧತೆ ನಡೆಸಿದೆ.
ದೇಶದಲ್ಲಿ ಮಲ ಹೊರುವ ಪದ್ಧತಿಯನ್ನು ನಿಷೇಧಿಸಿ 23 ವರ್ಷಗಳು ಕಳೆದಿವೆ. ಆದರೆ ಕೆಲ ಪ್ರದೇಶಗಳಲ್ಲಿ ಮಲ ಹೊರುವ ಪದ್ಧತಿ ಈಗಲೂ ಇನ್ನೂ ಜೀವಂತವಾಗಿದೆ ಎನ್ನಲು ಕೇಂದ್ರ ಸರಕಾರ 2015ರ ನವೆಂಬರ್‌ನಲ್ಲ್ಲಿ ಬಿಡುಗಡೆಗೊಳಿಸಿರುವ ಸಮೀಕ್ಷಾ ವರದಿಯೇ ಸಾಕ್ಷಿ. ಈ ವರದಿಯಲ್ಲಿ ಮಹಾರಾಷ್ಟ್ರ(63713 ಮಂದಿ) ಪ್ರಥಮ ಸ್ಥಾನವನ್ನು ಅಲಂಕರಿಸಿದರೆ, ತದನಂತರದ ಸ್ಥಾನಗಳು ಮಧ್ಯಪ್ರದೇಶ(23093 ಮಂದಿ), ಉತ್ತರ ಪ್ರದೇಶ(17619 ಮಂದಿ) ರಾಜ್ಯಗಳ ಪಾಲಾಗಿವೆ. ರಾಜ್ಯದಲ್ಲಿ 15375 ಮಂದಿ ಮಲಹೊತ್ತು ಜೀವನ ನಡೆಸುತ್ತಿರುವ ಪರಿಣಾಮ ಕರ್ನಾಟಕ 4ನೆ ಸ್ಥಾನದಲ್ಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಮಲ ಹೊರುವ ಪದ್ಧತಿಗೆ ಕಡಿವಾಣ ಹಾಕಲು ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ. ಹೀಗಾಗಿ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಮಲ ಹೊರುವವರನ್ನು ಗುರುತಿಸಲು ಸಮೀಕ್ಷೆಗಳನ್ನು ನಡೆಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ವಹಿಸಿದೆ. ಸಮೀಕ್ಷೆಗೆ ಸಮಾಜ ಕಲ್ಯಾಣ ಇಲಾಖೆ 25 ಲಕ್ಷ ರೂ.ಗಳನ್ನು ಬಿಡುಗಡೆಗೊಳಿಸಿದೆ. ಇಲಾಖೆ ಸಮೀಕ್ಷೆಯ ಪೂರ್ವ ಸಿದ್ಧತೆ ಮುಗಿಸಿದ್ದು, ಇದೇ ಫೆ.29ರಿಂದ ಸಮೀಕ್ಷೆ ಆರಂಭಿಸಲಿದೆ.
ಸಮೀಕ್ಷೆಗೆ ರಾಜ್ಯ ಮಟ್ಟದ ಉಸ್ತುವಾರಿ ಸಮಿತಿಯೊಂದನ್ನು ರಚಿಸಲಾಗಿದೆ. ಅಲ್ಲದೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಮತ್ತು ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದಲ್ಲಿ ಉಸ್ತುವಾರಿ ಸಮಿತಿಗಳನ್ನು ರಚಿಸಲಾಗಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮಲೆಕ್ಕಾಧಿಕಾರಿಗಳನ್ನು ಸಮೀಕ್ಷಾ ಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಲಾಗಿದೆ. ಸದ್ಯ ಸಮೀಕ್ಷೆಯ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ(ಗ್ರಾಮೀಣ) ಸಮೀಕ್ಷೆಯ ನೋಡಲ್ ಅಧಿಕಾರಿ ಎನ್.ಕೃಷ್ಣಪ್ಪ ತಿಳಿಸಿದರು.
ಕೇಂದ್ರ ಗಣತಿ ನಿರ್ದೇಶನಾಲಯದ ನಿವೃತ್ತ ಉಪ ನಿರ್ದೇಶಕ ಎಂ.ಜೆ. ಜಗದೀಶ್ ಮತ್ತು ಕಂದಾಯ ಇಲಾಖೆಯ ಹಿರಿಯ ಅಧಿಕಾರಿ ಚಂದ್ರವೌಳಿಯವರ ಮುಂದಾಳತ್ವದಲ್ಲಿ ಸಮೀಕ್ಷೆ ಫೆ.29ರಿಂದ ಮಾ. 12ರವರೆಗೆ ನಡೆಯಲಿದೆ. ನಂತರ ಸಮೀಕ್ಷೆಯ ನಮೂನೆಗಳು ಗ್ರಾ.ಪಂ. ಅಧ್ಯಕ್ಷರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮಾ. 19ರೊಳಗೆ ಸಲ್ಲಿಸಲಾಗುತ್ತದೆ. ಉಸ್ತುವಾರಿ ಸಮಿತಿ ನಮೂನೆಗಳನ್ನು ಪರಿಶೀಲಿಸಿ ಏ.13ರ ನಂತರ ರಾಜ್ಯದಲ್ಲಿರುವ ಸಫಾಯಿ ಕರ್ಮಚಾರಿಗಳ ಸಂಪೂರ್ಣ ವಿವರಗಳ ದತ್ತಾಂಶಗಳನ್ನು ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಅವರು ವಿವರಿಸಿದರು.
ಕೇಂದ್ರ ಸಮೀಕ್ಷೆ ವರದಿಯಲ್ಲಿ ರಾಜ್ಯದಲ್ಲಿ ಕೇವಲ 15375 ಮಂದಿಯನ್ನು ಮಾತ್ರ ಗುರುತಿಸಲಾಗಿದೆ. ಸಫಾಯಿ ಕರ್ಮಚಾರಿ ಆಯೋಗ ನಡೆ ಸಿರುವ ಸಮೀಕ್ಷೆಯ ಪ್ರಕಾರ ರಾಜ್ಯ ದಲ್ಲಿ 35 ಸಾವಿರಕ್ಕೂ ಅಧಿಕ ಮಲ ಹೊರು ವವರಿದ್ದಾರೆ. ಸಮೀಕ್ಷೆ ಸಂದರ್ಭದಲ್ಲಿ ಮಲ ಹೊರುವ ಪದ್ಧತಿಯನ್ನು ಆಚರಣೆ ಮಾಡದಂತೆ ಪ್ರತಿಯೊಂದು ಗ್ರಾಮಗಳಲ್ಲಿ ಗ್ರಾಮ ಸಭೆಗಳನ್ನು ಆಯೋಜಿಸಬೇಕು. ಮಲ ಹೊರುವವರನ್ನು ಗುರುತಿಸಿ ಪುನ ರ್ವಸತಿಯನ್ನು ಕಲ್ಪಿಸಿ, ಅವರಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಡಲು ಸರಕಾರ ಅಗತ್ಯ ಕ್ರಮಕೈಗೊಳ್ಳಬೇಕು.
ನಾರಾಯಣ, ಅಧ್ಯಕ್ಷ, ಸಫಾಯಿ ಕರ್ಮಚಾರಿ ಆಯೋಗ.







