ಶಾಸಕ ಝಮೀರ್ ಅಹ್ಮದ್‌ರನ್ನು ‘ಮೀರ್ ಸಾದಿಕ್’ಗೆ ಹೋಲಿಕೆ; ದೇವೇಗೌಡ ವಿರುದ್ಧ ಬೃಹತ್ ಪ್ರತಿಭಟನೆ

ಬೆಂಗಳೂರು, ಫೆ.9: ಶಾಸಕ ಝಮೀರ್ ಅಹ್ಮದ್ ಖಾನ್‌ರನ್ನು ‘ಮೀರ್ ಸಾದಿಕ್’ ಎಂದು ಕರೆದ ಜೆಡಿಎಸ್ ವರಿಷ್ಠ ಎಚ್. ಡಿ.ದೇವೇಗೌಡ ವಿರುದ್ಧ ಸಿಟಿ ಮಾರುಕಟ್ಟೆಯ ಜಾಮಿಯಾ ಮಸ್ಜಿದ್‌ನ ಖತೀಬ್-ಓ-ಇಮಾಮ್ ವೌಲಾನ ಮಖ್ಸೂದ್ ಇಮ್ರಾನ್ ನೇತೃತ್ವದಲ್ಲಿ ನೂರಾರು ಮಂದಿ ಪ್ರತಿಭಟನೆ ನಡೆಸಿದರು.
ಮಂಗಳವಾರ ನಗರದ ಪುರಭವನದ ಎದುರು ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ವೌಲಾನ ಮಖ್ಸೂದ್ ಇಮ್ರಾನ್, ಮುಸ್ಲಿಮ್ ಸಮುದಾಯದ ನಾಯಕ ಝಮೀರ್ ಅಹ್ಮದ್‌ರನ್ನು ‘ಮೀರ್ ಸಾದಿಕ್’ಗೆ ಹೋಲಿಕೆ ಮಾಡಿರುವ ದೇವೇಗೌಡರು ಕೂಡಲೇ ತಮ್ಮ ಹೇಳಿಕೆಯನ್ನು ವಾಪಸ್ ಪಡೆದು, ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
ರಾಜಕೀಯವಾಗಿ ಝಮೀರ್ ಅಹ್ಮದ್‌ರನ್ನು ದೇವೇಗೌಡರು ಏನು ಬೇಕಾದರೂ ಕರೆಯಲಿ. ಆದರೆ, ಅವರನ್ನು ಮೀರ್ ಸಾದಿಕ್, ದೇಶದ್ರೋಹಿಗಳಿಗೆ ಹೋಲಿಕೆ ಮಾಡುವುದು ಮಾಜಿ ಪ್ರಧಾನಿಯೊಬ್ಬರಿಗೆ ಶೋಭೆ ತರುವಂತದಲ್ಲ ಎಂದು ವೌಲಾನ ಮಖ್ಸೂದ್ ಇಮ್ರಾನ್ ಹೇಳಿದರು.ಝಮೀರ್ ಅಹ್ಮದ್ ಖಾನ್ ಕೇವಲ ಮುಸ್ಲಿಮ್ ಸಮುದಾಯದ ನಾಯಕರಲ್ಲ. ಸಮಾಜದ ಎಲ್ಲ ವರ್ಗಗಳು, ಬಡವರ ಪರವಾಗಿ ನಿರಂತರವಾಗಿ ಶ್ರಮಿಸುತ್ತಾ, ಅವರ ಸಮಸ್ಯೆಗಳಿಗೆ ಸ್ಪಂದಿಸಿಕೊಂಡು ಬರುತ್ತಿರುವ ನಾಯಕ. ರಾಜಕೀಯವಾದ ಅನುಕೂಲಕ್ಕಾಗಿ ಅವರನ್ನು ಬಳಸಿಕೊಂಡು ನಂತರ ಮೂಲೆಗುಂಪು ಮಾಡುತ್ತಿರುವ ಜೆಡಿಎಸ್ ಧೋರಣೆ ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಮಸೀದಿಗಳಲ್ಲಿ ಸೇವೆ ಸಲ್ಲಿಸುವ ಬಡ ವೌಲಾನ ಹಾಗೂ ವೌಝನ್‌ಗಳಿಗೆ ಝಮೀರ್‌ಅಹ್ಮದ್ ಪ್ರತೀ ವರ್ಷ ತಮ್ಮ ಖರ್ಚಿನಲ್ಲಿ ಹಜ್‌ಯಾತ್ರೆಗೆ ಕಳುಹಿಸುತ್ತಿದ್ದಾರೆ. ಈ ಯಾತ್ರೆಗೆ ತಗಲುವ ಹಣವನ್ನು ಝಮೀರ್‌ಅಹ್ಮದ್ ವಾಮಮಾರ್ಗದಿಂದ ಸಂಪಾದಿಸಿದ್ದು ಎಂದು ನೀಡಿರುವ ಹೇಳಿಕೆಯು ಅತ್ಯಂತ ಖಂಡನೀಯ ಎಂದು ಮಖ್ಸೂದ್ ಇಮ್ರಾನ್ ಆಕ್ರೋಶ ವ್ಯಕ್ತಪಡಿಸಿದರು.
ಝಮೀರ್ ಅಹ್ಮದ್ ಮಾಡುತ್ತಿರುವ ಸಾಮಾಜಿಕ ಕಾರ್ಯಗಳ ಬಗ್ಗೆ ದೇವೇಗೌಡರಿಗೆ ಸ್ಪಷ್ಟ ತಿಳುವಳಿಕೆಯಿದೆ. ಆದರೂ, ಇಂತಹ ನಿಂದನಾತ್ಮಕ ಹೇಳಿಕೆಗಳನ್ನು ನೀಡಿರುವುದು ಸರಿಯಲ್ಲ. ದೇವೇಗೌಡರು ಬಹಿರಂಗವಾಗಿ ಕ್ಷಮೆ ಕೋರುವ ವರೆಗೆ ರಾಜ್ಯದ ಎಲ್ಲ ಅಲ್ಪಸಂಖ್ಯಾತರು ಜೆಡಿಎಸ್ ಪಕ್ಷವನ್ನು ಬಹಿಷ್ಕರಿಸಲಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದರು.ಶಾವಲೀವಲ್ಲಾ ಮದ್ರಸದ ಮುಖ್ಯಸ್ಥ ವೌಲಾನ ಮುಹಮ್ಮದ್ ಝೈನುಲ್ ಆಬಿದೀನ್ ಮಾತನಾಡಿ, ದೇಶದ್ರೋಹಿ ಮೀರ್ ಸಾದಿಕ್‌ಗೆ ಝಮೀರ್ ಅಹ್ಮದ್‌ರನ್ನು ಹೋಲಿಕೆ ಮಾಡಿರುವುದು ಅತ್ಯಂತ ಖಂಡನೀಯ. ಹಿಂದು, ಮುಸ್ಲಿಮರ ನಡುವೆ ಯಾವುದೇ ತಾರತಮ್ಯ ಮಾಡದೆ, ಸಮಾಜದಲ್ಲಿನ ಬಡವರ ಪರವಾಗಿ ಝಮೀರ್ ಅಹ್ಮದ್ ಕೆಲಸ ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಟಿಪ್ಪುಸುಲ್ತಾನ್ ಸಂಯುಕ್ತ ರಂಗದ ಅಧ್ಯಕ್ಷ ಸರ್ದಾರ್ ಅಹ್ಮದ್ ಖುರೇಷಿ, ಮಂಗಳೂರಿನ ವೌಲಾನ ಅಬ್ದುಲ್ ಅಝೀಝ್, ವೌಲಾನ ಶಮೀಮ್ ಸಾಲಿಕ್, ಮರಿಯಮ್ ಫೌಂಡೇಷನ್ ಅಧ್ಯಕ್ಷ ವೌಲಾನ ಆಮಿಲ್ ನಿಸಾರ್ ಅಹ್ಮದ್, ಹಾಫಿಝ್ ಖುರ್ರಮ್ ಶಾಹಿ, ಅಬ್ದುಲ್ ಗಫೂರ್ ರಶಾದಿ, ವೌಲಾನ ಇಸ್ಮಾಯೀಲ್ ಸೇರಿದಂತೆ ಇನ್ನಿತರ ವೌಲ್ವಿಗಳು, ಝಮೀರ್‌ಅಹ್ಮದ್ ಅಭಿಮಾನಿಗಳು ಉಪಸ್ಥಿತರಿದ್ದರು.
ಪೊಲೀಸರು-ಪ್ರತಿಭಟನಾ ನಿರತರ ವಾಗ್ವಾದ: ಪ್ರತಿಭಟನೆ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಜರಗದಂತೆ ಮುನ್ನೆಚ್ಚರಿಕ ಕ್ರಮವಾಗಿ ಬಿಗಿ ಭದ್ರತೆ ಒದಗಿಸಲಾಗಿತ್ತು. ಪ್ರತಿಭಟನಾನಿರತರು ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ಕಿತ್ತು ಹಾಕಿದ ಪರಿಣಾಮ ಕೆಲಕಾಲ ಪೊಲೀಸರು ಹಾಗೂ ಪ್ರತಿಭಟನಾ ನಿರತರ ನಡುವೆ ವಾಗ್ವಾದ ನಡೆಯಿತು.
‘ದೇವೇಗೌಡರ ಹೇಳಿಕೆಗೆ ರಾಜಕೀಯ ಬಣ್ಣ’
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ನಮ್ಮ ಪಕ್ಷದ ಶಾಸಕ ಝಮೀರ್‌ಅಹ್ಮದ್ ಖಾನ್ ಕುರಿತು ನೀಡಿರುವ ಹೇಳಿಕೆಯನ್ನು ಕೆಲವರು ತಪ್ಪಾಗಿ ಭಾವಿಸಿ ಅನವಶ್ಯಕವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಅಶಾಂತಿಯನ್ನು ನಿರ್ಮಿಸಲು ಈ ಪ್ರತಿಭಟನೆ ನಡೆಯುತ್ತಿದೆ. ದೇವೇಗೌಡರು ಯಾವ ವ್ಯಕ್ತಿಯನ್ನು ವೈಯಕ್ತಿಕವಾಗಿ ಅವಮಾನ ಮಾಡುವ ದೃಷ್ಟಿಯಿಂದ ಹೇಳಿಕೆಯನ್ನು ನೀಡಿಲ್ಲ. ಆದರೂ ಕೆಲವರು ದೇವೇಗೌಡರ ಹೇಳಿಕೆಗೆ ರಾಜಕೀಯ ಬಣ್ಣ ಬಳಿದಿದ್ದಾರೆ.
ರಮೇಶ್‌ಬಾಬು, ಜೆಡಿಎಸ್ ವಕ್ತಾರ.







