ಸಿ.ಎಂ.ಇಬ್ರಾಹೀಂ ವಿರುದ್ಧ ಭೂ-ಕಬಳಿಕೆ ಆರೋಪ: ಸಿಬಿಐ ತನಿಖೆಗೆ ಒತ್ತಾಯ
ಬೆಂಗಳೂರು, ಫೆ. 9: ಬಿಬಿಎಂಪಿ ವ್ಯಾಪ್ತಿಯಲ್ಲಿರುವ 19.33 ಎಕರೆ ಜಮೀನನ್ನು ಕಾನೂನುಬಾಹಿರವಾಗಿ ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಸಿ.ಎಂ. ಇಬ್ರಾಹೀಂ ಪಡೆದಿದ್ದು, ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಒತ್ತಾಯಿಸಿದ್ದಾರೆ.
ನಗರದಲ್ಲಿಂದು ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಮೇಶ್, ಬೆಂಗಳೂರು ಉತ್ತರ ತಾಲೂಕಿನ ನಾಗವಾರ ವ್ಯಾಪ್ತಿಯಲ್ಲಿರುವ 400 ಕೋಟಿ ರೂ. ಮೌಲ್ಯದ 13.23 ಎಕರೆ ಸರಕಾರಿ ಜಮೀನು ಹಾಗೂ 175 ಕೋಟಿ ರೂ. ಮೌಲ್ಯದ 6.10 ಎಕರೆ ಜಮೀನಿಗೆ ಸಂಬಂಧಿಸಿದಂತೆ ಕೂಡಲೇ ಸರ್ವೇ ಕಾರ್ಯ ಕೈಗೆತ್ತಿಕೊಳ್ಳುವಂತೆ ರಾಜ್ಯ ಸರಕಾರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಬೇಕು. ಅದೇ ರೀತಿ, ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಬೇಕೆಂದು ಆಗ್ರಹಿಸಿದರು.
8 ಮಂದಿ ರೈತರಿಂದ 13.23 ಎಕರೆಗಳಷ್ಟು ಜಮೀನನ್ನು ಅತೀ ಕಡಿಮೆ ಬೆಲೆಗೆ ಸಿ.ಎಂ.ಇಬ್ರಾಹೀಂ ಪಡೆಯುವ ಜೊತೆಗೆ ಹಣವನ್ನು ನಂತರ ನೀಡುವುದಾಗಿ ಹೇಳಿ ಬಲವಂತವಾಗಿ ಪತ್ರ ಬರೆಸಿಕೊಂಡಿದ್ದಾರೆ. ಅದೇ ರೀತಿ, ಇಬ್ರಾಹೀಂ ಅವರ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ ಎಂದು ರಮೇಶ್ ಆರೋಪಿಸಿದರು.
ಕರ್ನಾಟಕ ಸ್ಟೇಟ್ ಮುಸ್ಲಿಮ್ ಫೆಡರೇಷನ್ ಅಧ್ಯಕ್ಷರಾಗಿರುವ ಸಿ.ಎಂ.ಇಬ್ರಾಹೀಂರವರು ಈ ಸಂಸ್ಥೆಯ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಬೆಂಗಳೂರು ಉತ್ತರ ತಾಲೂಕಿನ ವಿಶೇಷ ತಹಶೀಲ್ದಾರ್ ಅವರಿಗೆ ಒತ್ತಡ ಹಾಕಿದ್ದರು ಎಂದು ದೂರಿದ ಅವರು, ಬ್ಯಾಟರಾಯನಪುರ ನಗರಸಭೆ ಬಿಬಿಎಂಪಿಗೆ ವಿಲೀನಗೊಳ್ಳುವ ಸಂದರ್ಭದಲ್ಲಿ ಅಲ್ಲಿನ ನಗರಸಭೆ ಕಂದಾಯ ಅಧಿಕಾರಿಗಳಿಂದ 13.23 ಎಕರೆ ಪ್ರದೇಶಕ್ಕೆ ಎಕರೆಗಳ ಲೆಕ್ಕದಲ್ಲಿ ಎಕತಾ ಖಾತೆ ಮಾಡಿಸಿಕೊಂಡಿದ್ದರೂ, ಅಭಿವೃದ್ಧಿ ಶುಲ್ಕ ಮತ್ತು ಸುಧಾರಣಾ ಶುಲ್ಕ 10 ಕೋಟಿ ರೂ.ಗಳನ್ನು ಪಾವತಿಸಿಲ್ಲ ಎಂದು ಆಪಾದಿಸಿದರು.
ಬೆಂಗಳೂರು ಜಿಲ್ಲಾಧಿಕಾರಿ ಮತ್ತು ಉತ್ತರ ತಾಲೂಕು ತಹಶೀಲ್ದಾರ್ ತಮ್ಮ ಆದೇಶದಲ್ಲಿ ಸಿ.ಎಂ.ಇಬ್ರಾಹೀಂ ಅವರು ನೀಡಿರುವ ಆರ್ಟಿಸಿಗಳು ನಕಲಿಯಾಗಿವೆ. ಅದೇ ರೀತಿ, ಈ ಸ್ಥಳದಲ್ಲಿ ನಿರ್ಮಿಸಿರುವ ಎಚ್‌ಕೆಬಿಕೆ ಇಂಜಿನಿಯರಿಂಗ್ ಕಾಲೇಜಿಗೆ ಸೇರಿದ ಕಟ್ಟಡಗಳು ಅನಧಿಕೃತ ಹಾಗೂ ನಕ್ಷೆ ಮಂಜೂರಾತಿ ಪಡೆದಿಲ್ಲ. ಹಾಗಾಗಿ, ಈ ಕಟ್ಟಡಗಳನ್ನು ನೆಲಸಮಗೊಳಿಸುವಂತೆ ಆದೇಶ ನೀಡಿದ್ದಾರೆ ಎಂದು ವಿವರಿಸಿದರು.
ಸಿ.ಎಂ.ಇಬ್ರಾಹೀಂ ಅವರು ಬರೆಯಿಸಿಕೊಂಡಿರುವ ಎಲ್ಲ ಮಾಹಿತಿಗಳು ತಪ್ಪುಮಾಹಿತಿಗಳಿಂದ ಕೂಡಿವೆ ಹಾಗೂ ವರ್ಗಾವಣೆಯ ಆಸ್ತಿ ಕಾಯ್ದೆಗೆ ವಿರುದ್ಧವಾಗಿದೆ ಎಂದ ಎನ್.ಆರ್.ರಮೇಶ್, ಬೆಂಗಳೂರು ಉತ್ತರ ವಿಭಾಗಾಧಿಕಾರಿಗಳ ನ್ಯಾಯಾಲಯವು ಸಿ.ಎಂ.ಇಬ್ರಾಹೀಂ ಅವರು ತಪ್ಪಿತಸ್ಥರು ಎಂದು ತೀರ್ಪು ನೀಡಿದೆ ಎಂದು ಹೇಳಿದರು.
ಸಿ.ಎಂ.ಇಬ್ರಾಹೀಂ ಅವರು ಹಿಂದಿನ ಮೇ ತಿಂಗಳಲ್ಲಿ ಈ ಆಸ್ತಿಯನ್ನು ಕರ್ನಾಟಕ ರಾಜ್ಯ ಮುಸ್ಲಿಮ್ ಫೆಡರೇಷನ್ ಹೆಸರಿಗೆ ಖಾತೆ ಮಾಡಿಕೊಡಬೇಕೆಂದು ಮನವಿ ಸಲ್ಲಿಸಿರುವುದಲ್ಲದೆ, ರಾಜಕೀಯ ಒತ್ತಡವನ್ನೂ ಹೇರಿದ್ದಾರೆ ಎಂದು ರಮೇಶ್ ತಿಳಿಸಿದರು.
ಪಾಲಿಕೆಯ ಪೂರ್ವ ವಲಯದ ಜಂಟಿ ಆಯುಕ್ತರು ಕಳೆದ ನವೆಂಬರ್‌ನಲ್ಲಿ ಈ ಸ್ವತ್ತುಗಳಿಗೆ ಖಾತಾ ನೋಂದಣಿ ಮಾಡಿಕೊಳ್ಳುವ ಬಗ್ಗೆ ಅಗತ್ಯ ದಾಖಲಾತಿಗಳನ್ನು ಒದಗಿಸುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ಹೇಳಿದರು.





