ಅಕ್ಷರಸಂತ ಹಾಜಬ್ಬರೊಂದಿಗೆ ಸಂವಾದ

ಮಂಗಳೂರು, ಫೆ.9: ‘‘ನನ್ನ ಊರಿನ ಮಕ್ಕ ಳಿಗೆ ಉತ್ತಮ ಶಿಕ್ಷಣ ದೊರೆಯಬೇಕು ಎನ್ನುವುದು ನನ್ನ ಕನಸಾಗಿತ್ತು. ನನ್ನ ಬಳಿ ಅದಕ್ಕೆ ಬೇಕಾದ ಹಣ ಇರಲಿಲ್ಲ. ಇದೆಲ್ಲಾ ಸಾಧ್ಯವಾಗಹುದಾ? ಅಂದುಕೊಂಡಿದ್ದೆ. ಆದರೆ ಮಾಧ್ಯಮದವರು ನನಗೆ ಬೆಂಬಲ ನೀಡಿ ದರು. ಜನತೆ ಸಹಕಾರ ನೀಡಿದರು. ಇದೆಲ್ಲದರ ಫಲವಾಗಿ ನನ್ನ ಊರಿನಲ್ಲಿ ಸರಕಾರಿ ಶಾಲೆ ಆರಂಭವಾಗಿ ಇದೀಗ ಪ್ರೌಢ ಶಾಲೆಯಾಗಿದೆ. ಇನ್ನು ಮುಂದಕ್ಕೆ ಕಾಲೇಜ್ ಆಗಿ ಬೆಳೆಯಬೇಕು ಎನ್ನುವುದು ನನ್ನ ಆಸೆ’’ ಎನ್ನುವುದು ಅಕ್ಷರಸಂತ ಹರೇಕಳ ಹಾಜಬ್ಬರ ಮನದಾಳದ ಮಾತು.
ನಗರದ ಬಲ್ಮಠ ಯೆನೆಪೊಯ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಕನ್ನಡ ವಿಭಾಗದ ವತಿಯಿಂದ ಹಮ್ಮಿಕೊಂಡ ‘ಅಕ್ಷರ ಸಂತ ಹರೇಕಳ ಹಾಜಬ್ಬರೊಂದಿಗಿನ ಸಂವಾದ ಗೋಷ್ಠಿ’ಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಲೇಖಕ ಇಸ್ಮತ್ ಪಜೀರ್ ಹಾಜಬ್ಬರ ಬಗ್ಗೆ ಇಂದು ವಿಶ್ವ ವಿದ್ಯಾನಿಲ ಯಗಳು ಪಠ್ಯ ಪುಸ್ತಕ ರಚಿಸಿವೆ. ಅವರ ಬಗ್ಗೆ ಬರೆದ ನನ್ನ ಪುಸ್ತಕವನ್ನು ಜನ ಗೌರವಿಸಿದ್ದಾರೆ. ಹಾಜಬ್ಬ ಶಿಕ್ಷಣಕ್ಕಾಗಿ ಏನು ಮಾಡಬಹುದು ಎನ್ನುವುದನ್ನು ತೋರಿಸಿ, ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ. ಶಾಲೆಯೊಂದನ್ನು ಆರಂಭಿಸಬೇಕು ಎಂದು ಸರಕಾರಿ ಕಚೇರಿಗೆ ಅಲೆದು ಅದರಲ್ಲಿ ಯಶಸ್ಸು ಸಾಧಿಸಿದ ಹಾಜಬ್ಬ, ನಿಜವಾಗಿಯೂ ಒಬ್ಬ ಅಕ್ಷರಸಂತ ಎಂದರು.
ಯೆನೆಪೊಯ ಪದವಿ ಕಾಲೇಜಿನ ಪ್ರಾಚಾರ್ಯ ಮುಹಮ್ಮದ್ ಆರಿಫ್ ಮಾತನಾಡಿ, ಹಾಜಬ್ಬರ ವ್ಯಕ್ತಿತ್ವದ ಮಾದರಿ ಗುಣಗಳನ್ನು ನಮ್ಮ ಜೀವನದಲ್ಲಿಂದು ಅಳ ವಡಿಸಿಕೊಳ್ಳಬೇಕು ಎಂದರು. ಕಾಲೇಜಿನ ಕನ್ನಡ ಉಪನ್ಯಾಸಕ ನಿಯಾಝ್ ಮಾತನಾಡಿ, ಹಾಜಬ್ಬರಂತಹ ವ್ಯಕ್ತಿಗಳು ಭ್ರಷ್ಟಾಚಾರದಲ್ಲಿ ಮುಳುಗಿರುವವರಿಗೆ, ನಿಷ್ಕ್ರಿಯರಾಗಿರುವ ಸುಶಿಕ್ಷಿತರಿಗೆ ಮಾದರಿಯಾಗಿದ್ದಾರೆ ಎಂದರು. ವಿದ್ಯಾರ್ಥಿ ತಸ್ಲೀಮಾ ಸ್ವಾಗತಿಸಿ, ಮೂನಿಸಾ ವಂದಿಸಿದರು. ರಿಯಾಝ್ ಹಾಜಬ್ಬರನ್ನು ಪರಿಚಯಿಸಿದರು. ನಿಶಾನಾ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭ ವಿದ್ಯಾರ್ಥಿಗಳು ಹಾಜಬ್ಬ ರೊಂದಿಗೆ ಸೆಲ್ಫಿ ತೆಗೆಸಿಕೊಂಡರು.
‘‘ನನಗೀಗ 61 ವರ್ಷ. ನಾನು ಮಂಗಳೂರು ವಿವಿಯಿಂದ 3 ಕಿ.ಮೀ. ಅಂತರದಲ್ಲಿ ವಾಸಿಸುತ್ತಿದ್ದೇನೆ. ಇಂದು ಅದೇ ವಿಶ್ವವಿದ್ಯಾನಿಲಯದ ಮಕ್ಕಳು ನನ್ನ ಕಥೆ ಓದುತ್ತಾರೆ ಎಂದು ಹೇಳುತ್ತಾರೆ. ಇಂತಹ ಘಟನೆಗಳು ನನ್ನ ಬದುಕಿನಲ್ಲಿ ನಡೆಯುತ್ತದೆ ಎಂದು ನಾನು ಯೋಚಿಸಿ ಯೂ ಇರಲಿಲ್ಲ. ನನ್ನ ಊರಿನ ಶಾಲೆ ಇನ್ನಷ್ಟು ಉನ್ನತಿಗೇರಬೇಕು ಎನ್ನುವುದು ನನ್ನ ಆಸೆ. ಹಣ, ಶಿಕ್ಷಣ, ಆಸ್ತಿ ಯಾವುದೂ ಇಲ್ಲದ ನನ್ನನ್ನು ಸಮಾಜದಲ್ಲಿ ಎತ್ತರಕ್ಕೆ ನೀವು ತಂದು ನಿಲ್ಲಿಸಿದ್ದೀರಿ. ನಿಮಗೆ ನನ್ನ ಕೃತಜ್ಞತೆಗಳು’’ ಎಂದು ಹಾಜಬ್ಬ ನುಡಿದರು.







