ದೇಶಪ್ರೇಮಿಗಳ ಸೃಷ್ಟಿಯೇ ಮದ್ರಸಗಳ ಗುರಿ: ಅಬ್ದುರ್ರಶೀದ್ ಝೈನಿ

ಉಡುಪಿ, ಫೆ.9: ಮದ್ರಸ ಶಿಕ್ಷಣ ಎಂಬುದು ವ್ಯಕ್ತಿಯ ಸಮಗ್ರ ಅಭಿವೃದ್ಧಿಯೇ ಹೊರತು ಕೋಮುವಾದ, ಉಗ್ರವಾದವನ್ನು ಕಲಿಸುವುದಲ್ಲ. ಸಮಾಜದಲ್ಲಿ ಸ್ವಾಸ್ಥ ಸಂಸ್ಥಾಪನೆ ಹಾಗೂ ದೇಶಪ್ರೇಮಿಗಳನ್ನು ಸೃಷ್ಟಿಸುವುದು ಮದ್ರಸಗಳ ಗುರಿಯಾಗಿದೆ ಎಂದು ಕರ್ನಾಟಕ ರಾಜ್ಯ ಎಸ್‌ವೈಎಸ್ ಕಾರ್ಯದರ್ಶಿ ಅಬ್ದುರ್ರಶೀದ್ ಝೈನಿ ಅಲ್ ಕಾಮಿಲ್ ಹೇಳಿದ್ದಾರೆ.
ಸುನ್ನಿ ಎಜುಕೇಶನಲ್ ಡೆವಲಪ್‌ಮೆಂಟ್ ಕಮಿಟಿ ಆಫ್ ಕರ್ನಾಟಕ ಇದರ ಸ್ಫಟಿಕ ಸಂಭ್ರಮದ ಪ್ರಯುಕ್ತ ಉಡುಪಿ ಜಿಲ್ಲಾ ಸುನ್ನಿ ಮದ್ರಸ ಅಧ್ಯಾಪಕರ ಒಕ್ಕೂಟದ ವತಿಯಿಂದ ಉಡುಪಿಯ ದುರ್ಗಾ ಇಂಟರ್‌ನ್ಯಾಶನಲ್ ಹೊಟೇಲ್ ಸಭಾಂಗಣದಲ್ಲಿ ಇಂದು ನಡೆದ ‘ಜಾತ್ಯತೀತ ಸಮಾಜದಲ್ಲಿ ಮದ್ರಸ ವ್ಯವಸ್ಥೆ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ವಿಷಯ ಮಂಡಿಸಿದರು.
ಮದ್ರಸವು ಜಾತ್ಯತೀತ ಸಿದ್ಧಾಂತಕ್ಕೆ ದೊಡ್ಡ ಕೊಡುಗೆ ನೀಡುತ್ತಿದ್ದು, ಜಗತ್ತಿನ ಕ್ಷೇಮಾಭಿವೃದ್ಧಿ ಹಾಗೂ ಮಾನವೀಯ ಪಾಠವನ್ನು ಇಲ್ಲಿ ಕಲಿಸಲಾಗುತ್ತದೆ. ಪ್ರಸ್ತುತ ಮದ್ರಸ ಶಿಕ್ಷಣ ಸಂಪೂರ್ಣ ಕನ್ನಡದಲ್ಲೇ ಇದ್ದು, ಯಾರಿಗೆ ಯಾವುದೇ ಸಂಶಯಗಳಿದ್ದರೂ ಅದನ್ನು ಓದಿ ನಿವಾರಿಸಿಕೊಳ್ಳಬಹುದಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಇಂದಿನ ಆಧುನಿಕತೆಗೆ ತಕ್ಕಂತೆ ಶಿಕ್ಷಣ ನೀಡುವುದು ಅಗತ್ಯ. ಮದ್ರಸದ ಬಗ್ಗೆ ಜನರಿಗೆ ತಿಳುವಳಿಕೆ ನೀಡಿ ಸಮಾಜವನ್ನು ಜಾಗೃತಗೊಳಿಸಬೇಕು ಎಂದರು.
ಶಾಸಕ ಪ್ರಮೋದ್ ಮಧ್ವರಾಜ್ ಮಾತನಾಡಿ, ಜಗತ್ತಿನಲ್ಲಿ ಧರ್ಮಗಳ ಮಧ್ಯೆ ಉಂಟಾಗುತ್ತಿರುವ ಘರ್ಷಣೆಗೆ ಅಜ್ಞಾನ ಕಾರಣ. ಧರ್ಮವನ್ನು ಅರಿಯದ ಕೆಲವೇ ಮಂದಿ ಸಮಾಜ ದಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತಿದ್ದಾರೆ. ಹೆಚ್ಚಿನವರಲ್ಲಿ ಮದ್ರಸದ ಬಗ್ಗೆ ತಪ್ಪು ತಿಳುವಳಿಕೆಗಳಿವೆ. ಅದನ್ನು ದೂರ ಮಾಡುವ ಕಾರ್ಯ ಆಗಬೇಕು ಎಂದರು.
ಎಸ್‌ಇಡಿಸಿ ರಾಜ್ಯಾಧ್ಯಕ್ಷ ಕೆ.ಕೆ.ಮುಹಿಯುದ್ದೀನ್ ಸಖಾಫಿ ಅಲ್‌ಕಾಮಿಲ್, ಕಾಪು ದಂಡತೀರ್ಥ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಅಲ್ಬನ್ ರೊಡಿಗ್ರಸ್, ಜೆಡಿಎಸ್ ಕಾರ್ಯಾ ಧ್ಯಕ್ಷ ವಾಸುದೇವ ರಾವ್, ಪಂಚಾಯತ್ ಒಕ್ಕೂಟದ ಜಿಲ್ಲಾ ಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಚಿಂತಕ ಜಿ.ರಾಜಶೇಖರ್ ಮಾತ ನಾಡಿದರು.
ಸೈಯದ್ ಜಅಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ದುಆ ನೆರವೇರಿಸಿದರು. ಎಸ್‌ಜೆಎಂ ಜಿಲ್ಲಾಧ್ಯಕ್ಷ ಅಲ್ಹಾಜ್ ಅಬೂಬಕರ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಅಲ್ಹಾಜ್ ಮುಸ್ತಫಾ ಸಅದಿ, ಹಂಝತ್ ಹೆಜಮಾಡಿ ಕೋಡಿ, ಅಬ್ದುಲ್ ಅಝೀಝ್ ಹೆಜಮಾಡಿ, ಪುಂಡಲೀಕ ಮರಾಠೆ, ಅಶ್ರಫ್ ಅಮ್ಜದಿ, ಅಬ್ದುರ್ರಹ್ಮಾನ್ ರಝ್ವಿ ಉಪಸ್ಥಿತರಿದ್ದರು.
ಎಸ್‌ಇಡಿಸಿ ಸ್ಥಾಪಕ ಕಾರ್ಯದರ್ಶಿ ಅಲ್ಹಾಜ್ ಅಬ್ದುರ್ರಶೀ್ ಸಖಾಫಿ ಅಲ್ ಕಾಮಿಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌ಜೆಎಂ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ನಈಮಿ ಸ್ವಾಗತಿಸಿದರು. ವಿಚಾರ ಸಂಕಿರಣದ ಸಂಚಾಲಕ ಮುಹಮ್ಮದ್ ಹನೀಫ್ ಸಅದಿ ನಾವುಂದ ವಂದಿಸಿದರು. ಸಲಾಂ ಮದನಿ ಅಳಿಕೆ ಕಾರ್ಯಕ್ರಮ ನಿರೂಪಿಸಿದರು.







