ಕಾರ್ಕಳ ಪುರಸಭೆ ಸಾಮಾನ್ಯ ಸಭೆ: ನೀರಿನ ಸಮರ್ಪಕ ಸರಬರಾಜಿಗೆ ಬಲ್ಕ್ ಮೀಟರ್ ಅಳವಡಿಸಲು ಒತ್ತಾಯ
ಕಾರ್ಕಳ, ಫೆ.9: ನೀರಿನ ಸರಬರಾಜಿಗೆ ಬಲ್ಕ್ ಮೀಟರ್ ಅಳವಡಿಸಿ, ಕುಡಿಯುವ ನೀರಿನ ಸಮಸ್ಯೆ ಸರಿಪಡಿಸಿ ಎಂದು ಸುಭಿತ್ ಎನ್.ಆರ್. ಸೂಚಿಸಿದ್ದಾರೆ. ಅವರು ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ, ನಳ್ಳಿ ನೀರಿನ ಟೆಂಡರ್ ವಿಳಂಬದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಅಶ್ಫಾಕ್ ಅಹ್ಮದ್ ಮಾತನಾಡಿ, ಬೇಸಿಗೆ ಸಮೀಪಿಸುತ್ತಿದ್ದು, ಬಂಗ್ಲೆಗುಡ್ಡೆಯ ವಾರ್ಡ್‌ಗೆ ಸಮರ್ಪಕವಾಗಿ ನೀರು ಸರಬರಾಜಾಗುತ್ತಿಲ್ಲ. ಪೇಟೆ ಭಾಗದಲ್ಲಿ ನೂತನ ಬಿಲ್ಡಿಂಗ್ ಮತ್ತು ಫ್ಲಾಟ್‌ಗಳಲ್ಲಿ ನೆಲ ಅಂತಸ್ತಿನ ಟ್ಯಾಂಕ್ ನಿರ್ಮಿಸಿ ನೀರು ಶೇಖರಣೆ ಮಾಡಲಾಗುತ್ತಿದೆ. ಈ ಬಗ್ಗೆ ಗಮನಹರಿಸಬೇಕು ಎಂದರು. ಮುಖ್ಯಾಧಿಕಾರಿ ರಾಯಪ್ಪಮಾತನಾಡಿ, ಈ ಬಾರಿ ಬೋರ್‌ವೆಲ್‌ಗಳು ಬತ್ತಿರುವ ಹಿನ್ನೆಲೆಯಲ್ಲಿ ಹಿರಿಯಂಗಡಿ, ಕುಂಟಲ್ಪಾಡಿ ಮುಂತಾದ ಕಡೆಗಳಲ್ಲಿನ ಸಮಸ್ಯೆಗೂ ಪರಿಹಾರ ನೀಡಬೇಕಾಗಿದೆ ಎಂದರು. ಈ ಸಂದರ್ಭ ಸದಸ್ಯರಾದ ಯೋಗೀಶ್ ದೇವಾಡಿಗ, ಸುನೀಲ್ ಕೋಟ್ಯಾನ್ ತಮ್ಮ ವಾರ್ಡ್‌ಗಳಿಗೂ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ ಎಂದು ಆರೋಪಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್ ದೇವಾಡಿಗ ಮಾತನಾಡಿ, ಪೊಲೀಸ್ ಸ್ಟೇಷನ್, ಕಾಬೆಟ್ಟು ಮತ್ತು ಕಲ್ಲೊಟ್ಟೆ ನೀರಿನ ಲೈನ್ ಸರಿಪಡಿಸುವ ಬಗ್ಗೆ ಪ್ರತ್ಯೇಕ ಕ್ರಮ ಕೈಗೊಳ್ಳಬೇಕಾಗಿದೆ ಎಂದರು. ವೆಂಕಟರಮಣ ದೇವಳದ ಜಾತ್ರೆ ಸಮೀಪಿಸುತ್ತಿದ್ದು, ಅರ್ಧಂಬರ್ಧ ಕಾಮಗಾರಿ ನಡೆಸಲಾಗಿದೆ. ಕೂಡಲೇ ಸ್ಥಗಿತಗೊಂಡ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ವಿವೇಕಾನಂದ ಶೆಣೈ ಆಗ್ರಹಿಸಿ, ಗುತ್ತಿಗೆದಾರ ನವೀನ್ ಹೆಗ್ಡೆ ಅವರ ಕಾಮಗಾರಿ ಕಳಪೆಯಾಗಿದ್ದು, ಬಿಲ್ ಪಾವತಿಸದಂತೆ ಒತ್ತಾಯಿಸಿದರು.
ಬಂಡೀಮಠ ಬಸ್ ನಿಲ್ದಾಣದ ಕುರಿತಂತೆ ನ್ಯಾಯಾಲಯದ ಆದೇಶ ಅನುಷ್ಠಾನ ಗೊಳಿಸದಿದ್ದಲ್ಲಿ ಲೋಕಾಯುಕ್ತಕ್ಕೆ ದೂರು ನೀಡುವುದಾಗಿ ಮುಹಮ್ಮದ್ ಶರೀಫ್ ಹೇಳಿದರು. ಬಸ್ ನಿಲ್ದಾಣ ಬಳಕೆ ಕುರಿತಂತೆ ನ್ಯಾಯಾಲಯದ ಆದೇಶವಿದ್ದರೂ, ಅಧಿಕಾರಿಗಳು ಅದನ್ನು ಅನುಷ್ಟಾನಕ್ಕೆ ತರುವಲ್ಲಿ ವಿಫಲರಾಗಿದ್ದಾರೆ. ಡಿಸಿ, ಆರ್‌ಟಿಒ, ಎಸ್‌ಪಿ, ತಹಶೀಲ್ದಾರ್ ಮತ್ತು ಮುಖ್ಯಾಧಿಕಾರಿ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲು ನಿರ್ಧರಿಸಿದ್ದೇನೆ ಎಂದಾಗ, ಮುಖ್ಯಾಧಿಕಾರಿ ರಾಯಪ್ಪ ಮಾತನಾಡಿ, ಈ ಬಗ್ಗೆ ನಾನು ಹಲವು ಬಾರಿ ಸಂಬಂಧಿಸಿದವರಿಗೆ ಪತ್ರ ಬರೆದಿದ್ದೇನೆ. ಮೇಲಧಿಕಾರಿಗಳು ಸಹಕರಿಸದಿದ್ದರೆ ನಾನೇನು ಮಾಡಲಿ? ಎಂದು ಹತಾಶೆ ವ್ಯಕ್ತಪಡಿಸಿದರು. ಪುರಸಭೆ ಅಧ್ಯಕ್ಷೆ ರೆಹಮತ್ ಎನ್.ಶೇಖ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶಶಿಕಲಾ, ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.







