ಫೆ.14ರಂದು ಉಡುಪಿಯಲ್ಲಿ ರೈತ ಸಮಾವೇಶ
ಉಡುಪಿ, ಫೆ.9: ಉಡುಪಿ ಜಿಲ್ಲಾ ಕೃಷಿಕ ಸಂಘದ ವತಿಯಿಂದ 11ನೆ ವರ್ಷದ ರೈತ ಸಮಾವೇಶ ಫೆ.14ರಂದು ಉಡುಪಿಯ ಕುಂಜಿಬೆಟ್ಟಿನಲ್ಲಿರುವ ಶಾರದಾ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ತಿಳಿಸಿದ್ದಾರೆ.
ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶವನ್ನು ಬೆಳಗ್ಗೆ 10 ಗಂಟೆಗೆ ಶ್ರೀಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭ ತೀರ್ಥರು ಉದ್ಘಾಟಿಸಲಿದ್ದು, ತೀರ್ಥಹಳ್ಳಿ ರೈತಪರ ಹೋರಾಟಗಾರ ನರಸಿಂಹ ನಾಯಕ್ ಕುರುವಳ್ಳಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸಮಾರಂಭದಲ್ಲಿ ಸಾಧನೆ ಮಾಡಿರುವ ಐವರು ಕೃಷಿಕರನ್ನು ಸನ್ಮಾನಿಸಲಾಗುವುದು ಎಂದರು.
ಬೆಳಗ್ಗೆ 11:30ರಿಂದ ಪ್ರಾರಂಭಿಸಿ ಕೃಷಿ, ತೋಟಗಾರಿಕೆ ಬೆಳೆ ಹಾಗೂ ಹೈನುಗಾರಿಕೆಗೆ ಸಂಬಂಧಿಸಿದಂತೆ ಮೂರು ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಈ ಗೋಷ್ಠಿಗಳಲ್ಲಿ ವಿಷಯ ತಜ್ಞರು ವಿವಿಧ ವಿಷಯಗಳ ಕುರಿತು ಹಾಗೂ ಸಮಗ್ರ ಕೃಷಿ ಪದ್ಧತಿ ಕುರಿತಂತೆ ಉಪನ್ಯಾಸ ನೀಡಲಿದ್ದಾರೆ ಎಂದರು.
ಅಪರಾಹ್ನ 2:15ರಿಂದ ಜಿಪಂ ಸಿಇಒ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ಅಧ್ಯಕ್ಷತೆಯಲ್ಲಿ ಸರಕಾರದ ಕೃಷಿ, ತೋಟಗಾರಿಕೆ, ವಿದ್ಯುತ್, ಸಹಕಾರಿ, ಕಂದಾಯ ಇಲಾಖೆಗಳ ಅಧಿಕಾರಿಗಳಿಂದ ರೈತಪರ ಯೋಜನೆಗಳು ಹಾಗೂ ಕೃಷಿಕರ ವಿವಿಧ ಸಮಸ್ಯೆಗಳಿಗೆ ಪರಿಹಾರ, ಮಾರ್ಗೋಪಾಯಗಳ ಕುರಿತು ಮಾಹಿತಿ, ಪ್ರಶ್ನೋತ್ತರ ಕಾರ್ಯಕ್ರಮ ನಡೆಯಲಿದೆ ಎಂದು ಶರ್ಮ ನುಡಿದರು.
ಸಮಾವೇಶದಲ್ಲಿ ಕೃಷಿ ಮಾಹಿತಿ-ಮಾರ್ಗದರ್ಶನಗಳ ಜೊತೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಆಧುನಿಕ ಕೃಷಿ ಪರಿಕರಗಳು, ಹೊಸ ಆವಿಷ್ಕೃತ ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಮಾರಾಟವೂ ನಡೆಯಲಿದೆ. ಕುಮ್ಕಿ ಹಕ್ಕಿನ ಕುರಿತಂತೆ ಮುಂದಿನ ದಿನಗಳಲ್ಲಿ ಕೃಷಿಕರ ಬೃಹತ್ ಹೋರಾಟ ವೊಂದನ್ನು ಹಮ್ಮಿಕೊಳ್ಳಲು ನಿರ್ಣಯ ಕೈಗೊಳ್ಳಲಾಗುವುದು. ಅಲ್ಲದೇ ರೈತರು ಬೆಳೆದ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ, ಕಾಡುಪ್ರಾಣಿಗಳ ಹಾವಳಿಯಿಂದ ರೈತರು ಹಾಗೂ ಬೆಳೆಗಳ ರಕ್ಷಣೆ, ಬೆಳೆನಾಶಕ್ಕೆ ಸೂಕ್ತ ಪರಿಹಾರದ ಕುರಿತು ಸರಕಾರಕ್ಕೆ ಮನವಿ ಸಲ್ಲಿಸ ಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೃಷಿಕ ಸಂಘದ ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್, ದಿನೇಶ್ ಶೆಟ್ಟಿ ಹೆರ್ಗ, ಕೋಶಾಧಿಕಾರಿ ಪಾಂಡುರಂಗ ನಾಯಕ್ ಉಪಸ್ಥಿತರಿದ್ದರು.







