ಜಿಪಂ-ತಾಪಂ ಚುನಾವಣೆ ವಿಶೇಷ

ಸುಳ್ಯ ತಾಲೂಕಿನ ಮೂವರಿಗೆ ಜಿಪಂ ಅಧ್ಯಕ್ಷತೆಯ ಭಾಗ್ಯ!
ದುರ್ಗಾಕುಮಾರ್ ನಾಯರ್‌ಕೆರೆ
ಸುಳ್ಯ, ಫೆ.9: ರಾಜ್ಯಕ್ಕೆ ಮುಖ್ಯಮಂತ್ರಿ ಮತ್ತು ಕೇಂದ್ರಕ್ಕೆ ಸಚಿವರನ್ನು ಕೊಟ್ಟ ಖ್ಯಾತಿಯ ಸುಳ್ಯ ತಾಲೂಕಿಗೆ ಮೂವರು ಜಿಪಂ ಅಧ್ಯಕ್ಷರನ್ನು ನೀಡಿದ ಹೆಮ್ಮೆಯೂ ಇದೆ.
ಇಲ್ಲಿ ಜಿಪಂ ಅಭ್ಯರ್ಥಿಗಳಾಗಿ ಗೆದ್ದು ಬಂದಿದ್ದ ಮೂವರು ಇದುವರೆಗೆ ಜಿಪಂ ಅಧ್ಯಕ್ಷ ಪೀಠಕ್ಕೇರಿದ್ದಾರೆ. ಈ ಮೂವರು ಕೂಡಾ ಬಿಜೆಪಿಯಿಂದ ಗೆದ್ದು ಬಂದವರು. 1994ರ ಮೊದಲ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರದಿಂದ ಗೆದ್ದಿದ್ದ ಮಾಲತಿ ರಾವ್ ಉಬರಡ್ಕ ಪ್ರಪ್ರಥಮ ಮಹಿಳಾ ಅಧ್ಯಕ್ಷರೂ ಆಗಿದ್ದರು. 2005ರಲ್ಲಿ ಗುತ್ತಿಗಾರು ಕ್ಷೇತ್ರದಿಂದ ಗೆದ್ದಿದ್ದ ವೆಂಕಟ್ ದಂಬೆಕೋಡಿ ಸ್ವಲ್ಪಕಾಲ ಪ್ರಭಾರ ನೆಲೆಯಲ್ಲಿ ಹಾಗೂ ಸ್ವಲ್ಪ ಕಾಲ ಹಂಗಾಮಿ ನೆಲೆಯಲ್ಲಿ ಅಧ್ಯಕ್ಷರಾಗಿ ಗೂಟದ ಕಾರಿನ ಅವಕಾಶ ಪಡೆದಿದ್ದರು. 2010ರಲ್ಲಿ ಬೆಳ್ಳಾರೆ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಆಶಾ ತಿಮ್ಮಪ್ಪಗೌಡ ಮೂರನೆ ಅವಧಿಗೆ ಅಧ್ಯಕ್ಷರಾಗಿದ್ದಾರೆ.
ಸುಳ್ಯ ತಾಪಂ: ಅಧ್ಯಕ್ಷ, ಉಪಾಧ್ಯಕ್ಷರಿವರು
1995ರಲ್ಲಿ ಅಸ್ತಿತ್ವಕ್ಕೆ ಬಂದ ಪ್ರಥಮ ತಾಪಂನ ಮೊದಲ ಅವಧಿಗೆ ಆಲೆಟ್ಟಿಯ ಚಂದ್ರಾವತಿ ಅಧ್ಯಕ್ಷರಾದರೆ, ಜಾಲ್ಸೂರಿನ ಅಂಬಾಡಿ ಪಾಟಾಳಿ ಉಪಾಧ್ಯಕ್ಷರಾಗಿದ್ದರು. 2ನೆ ಅವಧಿಗೆ ಅಂಬಾಡಿ ಪಾಟಾಳಿ ಅಧ್ಯಕ್ಷರಾದರೆ, ನೇತ್ರಾವತಿ ಬಿಳಿಮಲೆ ಉಪಾಧ್ಯಕ್ಷರಾಗಿದ್ದರು. 3ನೆ ಅವಧಿಗೆ ಪಂಜದ ಎಸ್.ಎನ್. ಸುವರ್ಣಿನಿ ಅಧ್ಯಕ್ಷರಾಗಿ, ಐವರ್ನಾಡಿನ ಯಮುನಾ ಉಪಾಧ್ಯಕ್ಷರಾಗಿದ್ದರು. ಸ್ವಲ್ಪಸಮಯ ನೇತ್ರಾವತಿ ಬಿಳಿಮಲೆ ಕೂಡಾ ಅಧ್ಯಕ್ಷರಾಗಿದ್ದರು. 2000ರಲ್ಲಿ ಎರಡನೆ ತಾಲೂಕು ಪಂಚಾಯತ್‌ನ ಮೊದಲ ಅವಧಿಯಲ್ಲಿ ರಾಮಕೃಷ್ಣ ಕೊಯಿಂಗಾಜೆ ಅಧ್ಯಕ್ಷ ರಾದರೆ, ಕಲಾವತಿ ದೊಡ್ಡೇರಿ ಉಪಾಧ್ಯಕ್ಷರಾಗಿದ್ದರು. 2ನೆ ಅವಧಿಯಲ್ಲಿ ಕಲಾವತಿ ದೊಡ್ಡೇರಿ ಅಧ್ಯಕ್ಷರಾಗಿ, ಪಿ.ಸಿ. ಜಯರಾಮ್ ಉಪಾಧ್ಯಕ್ಷರಾದರು. 3ನೆ ಅವಧಿಯಲ್ಲಿ ಚಂದ್ರಶೇಖರ್ ಕಾಮತ್ ಅಧ್ಯಕ್ಷರಾಗಿ, ಕಲಾವತಿ ದೊಡ್ಡೇರಿ ಉಪಾಧ್ಯಕ್ಷರಾದರು.
2005ರ 3ನೆ ತಾಪಂನಲ್ಲಿ ಪ್ರಥಮ ಅವಧಿಗೆ ಸುವರ್ಣಿನಿ ಅಧ್ಯಕ್ಷರಾಗಿದ್ದು, ಎ.ಎಸ್.ವಿಜಯಕುಮಾರ್ ಉಪಾಧ್ಯಕ್ಷ ರಾಗಿದ್ದರು. ವಿಜಯಕುಮಾರ್ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಹರೀಶ್ ಕಂಜಿಪಿಲಿ ಉಪಾಧ್ಯಕ್ಷರಾದರು. 2ನೆ ಅವಧಿಯಲ್ಲಿ ಶಂಕರ್ ಪೆರಾಜೆ ಅಧ್ಯಕ್ಷರಾಗಿ ಸರಸ್ವತಿ ಬಾಳಿಲ ಉಪಾಧ್ಯಕ್ಷರಾದರು. 3ನೆ ಅವಧಿಗೆ ಪುಷ್ಪಾವತಿ ಬಾಳಿಲ ಅಧ್ಯಕ್ಷ ರಾದರೆ, ಶಂಕರ್ ಪೆರಾಜೆ ಉಪಾಧ್ಯಕ್ಷರಾದರು. 2010ರಲ್ಲಿ ಅಸ್ತಿತ್ವಕ್ಕೆ ಬಂದ 4ನೆ ತಾಲೂಕು ಪಂಚಾಯತ್‌ನಲ್ಲಿ ಮೊದಲ ಅವಧಿಯಲ್ಲಿ ಮುಳಿಯ ಕೇಶವ ಭಟ್ ಅಧ್ಯಕ್ಷರಾಗಿ, ಗುಣವತಿ ಕೊಲ್ಲಂತಡ್ಕ ಉಪಾಧ್ಯಕ್ಷರಾದರು. 2ನೆ ಅವಧಿಗೆ ಗುಣವತಿ ಕೊಲ್ಲಂತಡ್ಕ ಅಧ್ಯಕ್ಷರಾಗಿ ಹರೀಶ್ ದೇರಂಪಾಲು ಉಪಾಧ್ಯಕ್ಷರಾದರು. 3ನೆ ಅವಧಿಗೆ ಜಯಪ್ರಕಾಶ್ ಕುಂಚಡ್ಕ ಅಧ್ಯಕ್ಷರಾಗಿ ಮಮತಾ ಬೊಳುಗಲ್ಲು ಉಪಾಧ್ಯಕ್ಷರಾದರು.
ಸರಪಾಡಿ ಜಿಪಂ ಕ್ಷೇತ್ರಕ್ಕೆ ಅನರ್ಹ ವ್ಯಕ್ತಿಗೆ ಸ್ಪರ್ಧಿಸಲು ಅವಕಾಶ: ಆರೋಪ
ಜನತಾ, ಉಚ್ಚ ನ್ಯಾಯಾಲಯಗಳಲ್ಲಿ ಹೋರಾಟ: ಬಿಜೆಪಿ
ಬಂಟ್ವಾಳ, ಫೆ.9: ಸರಪಾಡಿ ಜಿಪಂ ಕ್ಷೇತ್ರಕ್ಕೆ (ಹಿಂದುಳಿದ ವರ್ಗ ‘ಬಿ’) ಅನರ್ಹ ವ್ಯಕ್ತಿಯೊಬ್ಬರಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟ ಜಿಲ್ಲಾಡಳಿತ ನೀತಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೆ ಅಪಹಾಸ್ಯಕ್ಕೀಡು ಮಾಡಿದೆ. ಇದರ ವಿರುದ್ಧ ಜನತಾ ಮತ್ತು ಉಚ್ಚನ್ಯಾಯಾಲಯದಲ್ಲಿ ತಾರ್ಕಿಕ ಅಂತ್ಯದವರೆಗೂ ಹೋರಾಟ ನಡೆಸಲಾಗುವುದು ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪಸಿಂಹ ನಾಯಕ್ ತಿಳಿಸಿದ್ದಾರೆ.
ಬಿ.ಸಿ.ರೋಡ್‌ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಸರಪಾಡಿ ಜಿಪಂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮಶೇಖರ್ ಕುಮಾರ್ ವಿರುದ್ಧದ ಆರೋಪಗಳ ದಾಖಲೆಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಬಂಟ್ವಾಳ ತಹಶೀಲ್ದಾರರು ರಾಜಕೀಯ ಒತ್ತಡಕ್ಕೆ ಮಣಿದು ತೀರ್ಪು ಪ್ರಕಟಿಸುವಲ್ಲಿ ವಿಳಂಬ ಧೋರಣೆ ಅನುಸರಿಸಿದ್ದಾರೆ. ಇದನ್ನು ಕೂಡ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ತಿಳಿಸಿದರು.
ಈ ಸಂಬಂಧ ಅನರ್ಹ ಅಭ್ಯರ್ಥಿಯ ವಿರುದ್ಧ ನಾಲ್ಕು ದಿನಗಳ ಹಿಂದೆಯೇ ತಹಶೀಲ್ದಾರ್, ಸಹಾಯಕ ಕಮಿಷನರ್, ಜಿಲ್ಲಾಧಿಕಾರಿ ಹಾಗೂ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸಲಾಗಿದೆ.
ಮಂಗಳವಾರ ನಾಮಪತ್ರ ಪರಿಶೀಲನೆಯ ವೇಳೆ ಚುನಾವಣಾಧಿಕಾರಿಯೂ ಆಗಿರುವ ಸಹಾಯಕ ಕಮಿಷನರ್‌ರಿಗೂ ಈ ಬಗ್ಗೆ ತಕರಾರು ಅರ್ಜಿ ಸಲ್ಲಿಸಲಾಗಿತ್ತು. ಆದರೂ ಅವರು ಕೆಳಹಂತದ ಅಧಿಕಾರಿಗಳು ನೀಡಿರುವ ಪ್ರಮಾಣಪತ್ರವನ್ನೇ ಆಧಾರವಾಗಿಟ್ಟುಕೊಂಡು ನಾಮಪತ್ರವನ್ನು ಅಂಗೀಕರಿಸಿದ್ದಾರೆ. ಹಾಗೆಯೇ ಈ ಪ್ರಕರಣಕ್ಕೆ ಸಂಬಂಧಿಸಿ ಚುನಾವಣಾ ಪ್ರಕ್ರಿಯೆ ಮುಗಿಯುವುರೊಳಗಾಗಿ ತೀರ್ಪು ಪ್ರಕಟಿಸುವಂತೆ ಸೂಚಿಸಿದ್ದಾರೆ ಎಂದು ಪ್ರತಾಪಸಿಂಹ ನಾಯಕ್ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ರಾಜೇಶ್‌ನಾಕ್ ಉಳಿಪಾಡಿಗುತ್ತು, ಸುಲೋಚನಾ ಭಟ್, ರಾಮದಾಸ್ ಬಂಟ್ವಾಳ್, ದೇವದಾಸ್ ಶೆಟ್ಟಿ, ದಿನೇಶ್ ಭಂಡಾರಿ, ದಿನೇಶ್ ಅಮ್ಟೂರು, ಗೋವಿಂದ ಪ್ರಭು, ಆನಂದಕುಲಾಲ್ ಎಡ್ತೂರು, ರವೀಂದ್ರ ಕಂಬಳಿ ಉಪಸ್ಥಿತರಿದ್ದರು.
ನೆಟ್ಲ ಮುಡ್ನೂರು: ಚುನಾವಣಾ ಬಹಿಷ್ಕಾರಕ್ಕೆ ನಿರ್ಧಾರ
ಪುತ್ತೂರು, ಫೆ.9: ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಪಂಗೊಳಪಟ್ಟ ಗೋಳಿದಡಿ ವಾರ್ಡ್‌ನ್ನು ಜನಪ್ರತಿನಿಧಿಗಳು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಆರೋಪಿಸಿ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸಲು ಗೋಳಿದಡಿ ವಾರ್ಡ್‌ನ ನಾಗರಿಕರು ನಿರ್ಧಾರ ಕೈಗೊಂಡಿದ್ದು, ಇಲ್ಲಿ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದಾರೆ. ಗ್ರಾಪಂ, ತಾಪಂ ಮತ್ತು ಜಿಪಂನ ಜನಪ್ರತಿನಿಧಿಗಳು ಇಲ್ಲಿನ ನಾಗರಿಕರ ಯಾವುದೇ ಬೇಡಿಕೆಗಳಿಗೆ ಸ್ಪಂದಿಸಿಲ್ಲ. ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ನಡೆಸಿಲ್ಲ. ಸರಿಯಾದ ದಾರಿದೀಪ ವ್ಯವಸ್ಥೆಯಿಲ್ಲ. ಇಲ್ಲಿನ ಬೀಚಗದ್ದೆ, ಮಕ್ಕಿಗದ್ದೆ ಮೊದಲಾದ ಪ್ರದೇಶಗಳಿಗೆ ಸರಿ ಯಾದ ರಸ್ತೆಯಿಲ್ಲದೆ, ಇಲ್ಲಿನ ನಿವಾಸಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಗೋಳಿದಡಿ ಮತ್ತು ಆಸುಪಾಸಿನ ಪ್ರದೇಶವನ್ನು ಜನಪ್ರತಿನಿಧಿಗಳು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು, ಚುನಾವಣೆಯ ಸಂದರ್ಭ ಭರವಸೆ ನೀಡಿದವರು ನಂತರ ಇಲ್ಲಿನ ಬೇಡಿಕೆಗಳಿಗೆ ಸ್ಪಂದಿಸಿಲ್ಲ. ಜನಪ್ರತಿನಿಧಿಗಳು ಸಂಪೂರ್ಣವಾಗಿ ಈ ವಾರ್ಡ್‌ನ್ನು ಕಡೆಗಣಿಸಿರುವುದರಿಂದ ಮತದಾನ ಬಹಿಷ್ಕರಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಸುಮಾರು 116 ಮಂದಿ ಮತದಾನ ಬಹಿಷ್ಕಾರಕ್ಕೆ ಸಹಿ ಹಾಕಿರುವ ಮನವಿಯನ್ನು ಅಧಿಕಾರಿಗಳಿಗೆ ಸಲ್ಲಿಸಲು ನಿರ್ಧರಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.







