ಫೆ.18-19: ನಾಥಪಂಥದ ಝಂಡಿಯಾತ್ರೆ
ಉಡುಪಿ, ದ.ಕ.ಕ್ಕೆ ಉಡುಪಿ, ಫೆ.9: ನಾಥಪಂಥದ ಯೋಗಿಗಳ ಝಂಡಿ ಯಾತ್ರೆ ಫೆ.18 ಮತ್ತು 19ರಂದು ಆಗಮಿಸಲಿದ್ದು, ಕುಂದಾಪುರ ತಾಲೂಕಿನ ಯಡಮೊಗೆಯ ಜೋಗಿ ಮಠದಲ್ಲಿ ಯೋಗಿಗಳು ತಂಗಲಿದ್ದಾರೆ ಎಂದು ಯಡಮೊಗೆ ಅಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ಕೇಶವ ಕೋಟೇಶ್ವರ ತಿಳಿಸಿದ್ದಾರೆ.
ಪ್ರತಿ 12 ವರ್ಷಗಳಿಗೊಮ್ಮೆ ಜರಗುವ ಮಹಾ ಕುಂಭಮೇಳ ಮುಗಿದ ಬಳಿಕ ನಾಸಿಕದ ತ್ರಯಂಭಕೇಶ್ವರದಿಂದ ಮಂಗಳೂರಿನ ಕದ್ರಿ ಕಾಲಭೈರವ ಯೋಗೇಶ್ವರ ಮಠದಲ್ಲಿ ರಾಜ ಪಟ್ಟಾಭಿಷೇಕ ಕ್ಕಾಗಿ ಶ್ರೀ ಪಾತ್ರದೇವತಾದೊಂದಿಗೆ 1,750 ಕಿ.ಮೀ. ದೂರ ಪಾದಯಾತ್ರೆಯಲ್ಲಿ ಸುಮಾರು 500 ಮಂದಿ ಯೋಗಿಗಳು ಆಗಮಿಸಲಿದ್ದಾರೆ.
ಸುಮಾರು 1,100 ವರ್ಷಗಳ ಇತಿಹಾಸ ವಿರುವ ಯಡ ಮೊಗೆಯ ಶ್ರೀಸಿದ್ಧಪೀಠ ಕೊಡಚಾದ್ರಿ ಹಲವರಿ ಜೋಗಿ ಮಠದಲ್ಲಿ ನಾಥಪಂಥದ ಯೋಗೀಶ್ವರರಿಗೆ ಗುರು ವಂದನಾ, ಕಾಣಿಕೆಯನ್ನು ಸಲ್ಲಿಸಲಾಗುವುದು ಎಂದ ಅವರು, ಮಠ ನೂತನ ಗುರುಗಳಿಗೆ ಪಟ್ಟಾಭಿಷೇಕ ನಡೆಸುವರು ಎಂದರು.
ತ್ರಯಂಭಕೇಶ್ವರದಿಂದ ಹೊರಟ ಝಂಡಿ ಯಾತ್ರೆ ಕದ್ರಿ ಯನ್ನು ತಲುಪುವವರೆಗೆ ಒಟ್ಟು 80 ಕಡೆಗಳಲ್ಲಿ ಮೊಕ್ಕಾಂ ಹೂಡುತ್ತದೆ. ಕರ್ನಾಟಕದಲ್ಲೂ ನಿಪ್ಪಾಣಿಯಿಂದ ಆರಂಭಿಸಿ ಅಲ್ಲಲ್ಲಿ ನಾಥಪಂಥದ ಮಠಗಳಲ್ಲಿ ಉಳಿದುಕೊಂಡು ಮುಂದೆ ಹೊರಡುತ್ತದೆ. ಉತ್ತರ ಕನ್ನಡದ ಯಲ್ಲಾಪುರ, ಮಂಚಿಕೇರಿ, ಶಿರಸಿ, ಚಂದ್ರಗುತ್ತಿ, ಸೊರಬ, ಸಾಗರ, ಹೊಸನಗರದ ಮೂಲಕ ಘಟ್ಟದಿಂದ ಇಳಿಯುವ ಯೋಗಿಗಳು ಯಡಮೊಗೆಯ ಹಲವರಿ ಮಠದಲ್ಲಿ ಎರಡು ದಿನ ತಂಗಲಿದ್ದಾರೆ. ಬಳಿಕ ಅಲ್ಲಿಂದ ಹಾಲಾಡಿ, ಬಾರಕೂರು, ಉಡುಪಿ, ಮುಲ್ಕಿ, ಪಣಂಬೂರು ಬಳಿಕ ಕೊನೆಯದಾಗಿ ಕದ್ರಿಯಲ್ಲಿ ಝಂಡಿ ಯಾತ್ರೆ ಸಮಾಪ್ತಿಗೊಳ್ಳಲಿದೆ.
ಈ ಯಾತ್ರೆಯ ಸಂದರ್ಭ ಸಿಗುವ ನಾಥ ಪಂಥದ ಮಠಗಳಿಗೆ ಪ್ರತಿ 12 ವರ್ಷಗಳಿಗೊಮ್ಮೆ ನೂತನ ಪೀಠಾಧಿಪತಿಗಳನ್ನು ನೇಮಕ ಮಾಡಲಾಗುತ್ತದೆ. ಇವುಗಳಲ್ಲಿ ಖಾನಾಪುರ, ಚಂದ್ರಗುತ್ತಿ, ಹಲವರಿ, ವಿಟ್ಲದ ಯೋಗೇಶ್ವರ ಮಠ ಸೇರುತ್ತದೆ. ಇಂದು ಯಾತ್ರೆ ಚಂದ್ರಗುತ್ತಿಯ ಚಂದ್ರಮುಖಿ ಯೋಗಿ ಮಠದಲ್ಲಿ ಉಳಿದುಕೊಂಡಿದೆ ಎಂದು ಕೇಶವ ಕೋಟೇಶ್ವರ ನುಡಿದರು.
ಈ ವರ್ಷ ಬಂದು ಹೋದ ಬಳಿಕ ಈ ಯಾತ್ರೆ 12 ವರ್ಷಗಳ ಬಳಿಕ ಮತ್ತೆ ಬರುತ್ತದೆ. ಯಾತ್ರಾ ತಂಡದಲ್ಲಿ ಸಾಕಷ್ಟು ಮಂದಿ ಹಠಯೋಗಿಗಳೂ ಇದ್ದು, ಮೂವರು ಇಂಜಿನಿಯರ್‌ಗಳು, ಇಬ್ಬರು ವೈದ್ಯರು, 19 ಮಂದಿ ಸ್ನಾತಕೋತ್ತರ ಪದವೀಧರ ಯೋಗಿಗಳೂ ಸೇರಿದ್ದಾರೆ ಎಂದವರು ನುಡಿದರು.
ಝಂಡಿ ಯಾತ್ರೆ ಫೆ.18ರಂದು ಬೆಳಗ್ಗೆ 10:30ಕ್ಕೆ ಹಲವರಿ ಮಠಕ್ಕೆ ಆಗಮಿಸಲಿದೆ. ಈ ಸಂಬಂಧ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದವರು ನುಡಿದರು. ಪತ್ರಿಕಾಗೋಷ್ಠಿಯಲ್ಲಿ ಶೇಖರ ಬಳೆಗಾರ, ಶಿವರಾಮ ಬಳೆ ಗಾರ, ರಮೇಶ್ ಜೋಗಿ ಹೆಮ್ಮಾಡಿ, ನಾಗೇಶ್ ಜೋಗಿ, ರಾಮನಾಥ ಬಳೆಗಾರ, ರಾಘವೇಂದ್ರ ಕೆರೆಮನೆ ಉಪಸ್ಥಿತರಿದ್ದರು.







