ಅಪಪ್ರಚಾರ ಮಾಡಿದವರು ಈಗ ವೌನ: ಸಚಿವ ರೈ ಆರೋಪ
ಕಸ್ತೂರಿ ರಂಗನ್ ವರದಿ, ಹುಲಿ ಯೋಜನೆ
ಮಂಗಳೂರು, ಫೆ.10: ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿ ಜನಾಭಿಪ್ರಾಯ ಸಲ್ಲಿಸಲು ರಾಜ್ಯ ಸರಕಾರ ವಿಳಂಬ ಮಾಡುವುದರಿಂದ ಜನರಿಗೆ ತೊಂದರೆ ಆಗಲಿದೆ ಎಂದು ಗುಲ್ಲೆಬ್ಬಿಸಿದ್ದ ಸಂಸದರು, ಇದೀಗ ಕೇಂದ್ರ ಸರಕಾರವು ಈ ಬಗ್ಗೆ ಅಂತಿಮ ಪ್ರಕಟನೆಯನ್ನು ಇನ್ನೂ ಹೊರಡಿಸದಿರುವ ಬಗ್ಗೆ ಮಾತನಾಡುತ್ತಿಲ್ಲ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯನ್ನು ದ್ದೇಶಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಯುಪಿಎ ಸರಕಾರವಿದ್ದಾಗ ಹುಲಿ ಯೋಜನೆಗೆ ಅನುಮತಿ ನೀಡ ದಿದ್ದರೂ, ಕಾಂಗ್ರೆಸ್‌ನವರು ಹುಲಿ ಬಿಡುತ್ತಾರೆಂದು ಜನ ರಲ್ಲಿ ಭಯ ಹುಟ್ಟಿಸಿ ಮತ ಪಡೆದಿದ್ದ ಬಿಜೆಪಿಯ ಸಂಸದೆ ಶೋಭಾ ಕರಂದ್ಲಾಜೆ ಇದೀಗ ಎನ್‌ಡಿಎ ಸರಕಾರ ಹುಲಿ ಯೋಜನೆಗೆ ಅನುಮತಿ ಕೊಟ್ಟಿದ್ದರೂ ಮಾತನಾಡುತ್ತಿಲ್ಲ. ಬಿಜೆಪಿ ಯವರು ಕೇವಲ ಓಟಿಗಾಗಿ ಜನರನ್ನು ವಂಚಿಸುತ್ತಿ ದ್ದಾರೆ ಎಂದು ಟೀಕಿಸಿದರು.
ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿ ರಾಜ್ಯ ಸರಕಾರ ಜನಾಭಿಪ್ರಾಯ ಸಂಗ್ರಹಿಸಿ ಶಿಫಾರಸ್ಸಿನೊಂದಿಗೆ ಕೇಂದ್ರ ಸರಕಾರಕ್ಕೆ ಸಲ್ಲಿಸಿದೆ. ಆದರೆ ಅಂತಿಮ ಪ್ರಕಟನೆ ಹೊರಡಿ ಸಬೇಕಾದ ಬಗ್ಗೆ ಕೇಂದ್ರ ಸರಕಾರ ಇನ್ನೂ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಅಂದು ರಾಜ್ಯ ಸರಕಾರದ ವಿರುದ್ಧ ಅಪಪ್ರಚಾರ ನಡೆಸಿದ್ದ ಬಿಜೆಪಿಯ ಉಡುಪಿ ಸಂಸದರು ಯಾಕೆ ಸುಮ್ಮನಿದ್ದಾರೆ. ಹುಲಿ ಯೋಜನೆಯ ಬಗ್ಗೆಯೂ ಅಂದು ಕಾರ್ಕಳದಲ್ಲಿ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡಿ ಮತಗಳನ್ನು ಗಳಿಸಿಕೊಂಡಿದ್ದ ಅವರು ಇಂದು ಕೇಂದ್ರದಲ್ಲಿ ತಮ್ಮದೇ ಸರಕಾರ ಆ ಯೋಜನೆಗೆ ಅನುಮತಿ ನೀಡಿದ್ದರೂ ಮಾತನಾಡುತ್ತಿಲ್ಲ. ಈ ಬಗ್ಗೆ ಅವರು ಜನತೆಗೆ ಉತ್ತರಿಸಬೇಕು. ಜೊತೆಗೆ ಶೀಘ್ರವೇ ಕಸ್ತೂರಿ ರಂಗನ್ ವರದಿ ಬಗ್ಗೆ ಅಂತಿಮ ಪ್ರಕಟನೆ ಹೊರಡಿಸುವುದು ಹಾಗೂ ಹುಲಿ ಯೋಜನೆಯನ್ನು ಕೈ ಬಿಡುವಂತೆ ಕೇಂದ್ರ ಸರಕಾರಕ್ಕೆ ಒತ್ತಡ ಹೇರಬೇಕೆಂದು ಸಚಿವ ರೈ ಆಗ್ರಹಿಸಿದರು. ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಚಿವ ರೈ, ಆನೆ ಕಾರಿಡಾರ್ ಕರ್ನಾಟಕದಲ್ಲಿ ಮಾಡಿಲ್ಲ, ಹುಲಿ ಯೋಜನೆಯನ್ನೂ ಕರ್ನಾಟಕದಲ್ಲಿ ಅನುಷ್ಠಾನಗೊಳಿಸು ವುದಿಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರಾದ ಶಶಿಧರ ಹೆಗ್ಡೆ, ಮಹಾಬಲ ಮಾರ್ಲ, ನವೀನ್ ಡಿಸೋಜ, ಪ್ರವೀಣ್‌ಚಂದ್ರ ಆಳ್ವ, ಕೇಶವ ಮತ್ತಿತರರು ಉಪಸ್ಥಿತರಿದ್ದರು.







