ಪಾಕ್‌ಗೆ 5,840 ಕೋಟಿ ರೂ. ನೆರವು: ಒಬಾಮ ಆಡಳಿತದ ಪ್ರಸ್ತಾಪ
ವಾಶಿಂಗ್ಟನ್, ಫೆ. 10: ಪಾಕಿಸ್ತಾನಕ್ಕೆ 860 ಮಿಲಿಯ ಡಾಲರ್ (ಸುಮಾರು 5,840 ಕೋಟಿ ಭಾರತೀಯ ರೂಪಾಯಿ) ಮೊತ್ತವನ್ನು ನೆರವಿನ ರೂಪದಲ್ಲಿ ನೀಡುವ ಪ್ರಸ್ತಾಪವನ್ನು ಅಮೆರಿಕದ ಒಬಾಮ ಆಡಳಿತ ಮುಂದಿಟ್ಟಿದೆ.
ಈ ಪೈಕಿ 265 ಮಿಲಿಯ ಡಾಲರ್ (ಸುಮಾರು 1,800 ಕೋಟಿ ರೂಪಾಯಿ) ಮೊತ್ತವನ್ನು ಸೇನಾ ಉಪಕರಣಗಳ ಖರೀದಿಗೆ ವ್ಯಯಿಸಲಾಗುವುದು.
ಈ ಮೊತ್ತವು ಪಾಕಿಸ್ತಾನಕ್ಕೆ ಭಯೋತ್ಪಾದಕರ ವಿರುದ್ಧ ಹೋರಾಡಲು, ಪರಮಾಣು ಅಸ್ತ್ರಗಳನ್ನು ಪಡೆಯಲು ಮತ್ತು ಭಾರತದೊಂದಿಗಿನ ಸಂಬಂಧವನ್ನು ಉತ್ತಮ ಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅಮೆರಿಕ ಹೇಳಿದೆ.
ಅಧ್ಯಕ್ಷ ಬರಾಕ್ ಒಬಾಮರ ಬಜೆಟ್ ಪ್ರಸ್ತಾಪಗಳಲ್ಲಿ ಪಾಕಿಸ್ತಾನವನ್ನು ಪ್ರಸ್ತಾಪಿಸಲಾಗಿಲ್ಲ. ಆದರೆ, ಪಾಕಿಸ್ತಾನದ ಜೊತೆಗಿನ ಮೈತ್ರಿಯನ್ನು ಮುಂದುವರಿಸಿಕೊಂಡು ಹೋಗುವುದಕ್ಕಾಗಿ ಆ ದೇಶಕ್ಕೆ 5,840 ಕೋಟಿ ರೂಪಾಯಿಯನ್ನು ಒದಗಿಸುವ ಪ್ರಸ್ತಾಪ ಬಜೆಟ್‌ನಲ್ಲಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ತನ್ನ ಪ್ರಸ್ತಾಪಗಳಲ್ಲಿ ಹೇಳಿದ್ದಾರೆ.
ವಿದೇಶಿ ತುರ್ತು ಕಾರ್ಯಾಚರಣೆಗಳ (ಒಸಿಒ) ನಿಧಿಯಡಿಯಲ್ಲಿ ಪಾಕಿಸ್ತಾನಕ್ಕೆ ಯಾಕೆ ನೆರವು ನೀಡಬೇಕು ಎನ್ನುವುದಕ್ಕೆ ವಿದೇಶಾಂಗ ಇಲಾಖೆ ಈ ವಿವರಣೆಯನ್ನು ನೀಡಿದೆ.
ಪ್ರಸ್ತಾಪಿತ ಮೊತ್ತವು ದೇಶದ ಭಯೋತ್ಪಾದನೆ ನಿಗ್ರಹ ಯೋಜನೆಗಳನ್ನು ಬೆಂಬಲಿಸುವುದು, ಸ್ಥಿರತೆಯನ್ನು ಬಲಪಡಿಸುವುದು, ಇಂಧನ ಲಭ್ಯತೆಯನ್ನು ಸುಧಾರಿಸುವುದು ಹಾಗೂ ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಸುಧಾರಣೆಯನ್ನು ಖಾತರಿಪಡಿಸುವುದು.
-ಜಾನ್ ಕೆರಿ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿಅಮೆರಿಕದ ಭಯೋತ್ಪಾದನೆ ನಿಗ್ರಹ ತಂತ್ರಗಾರಿಕೆ, ಅಫ್ಘಾನಿಸ್ತಾನದ ಶಾಂತಿ ಪ್ರಕ್ರಿಯೆ, ಪರಮಾಣು ಪ್ರಸರಣ ನಿಗ್ರಹ ಪ್ರಯತ್ನಗಳು ಮತ್ತು ದಕ್ಷಿಣ ಹಾಗೂ ಮಧ್ಯ ಏಶ್ಯದ ಆರ್ಥಿಕ ಏಕೀಕರಣಗಳಲ್ಲಿ ಪಾಕಿಸ್ತಾನದ ಪಾತ್ರ ಮಹತ್ವದ್ದಾಗಿದೆ.
-ವಿದೇಶಾಂಗ ಇಲಾಖೆ







