ಕತರ್ ಓಪನ್: ಶರಪೋವಾ ಅಲಭ್ಯ

ಕತರ್, ಫೆ.10: ಗಾಯದ ಸಮಸ್ಯೆಯ ಹಿನ್ನೆಲೆಯಲ್ಲಿ ರಶ್ಯದ ಟೆನಿಸ್ ತಾರೆ ಮರಿಯಾ ಶರಪೋವಾ ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ಕತರ್ ಓಪನ್ ಟೂರ್ನ ಮೆಂಟ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.
ವಿಶ್ವದ ನಂ.6ನೆ ಆಟಗಾರ್ತಿ ಶರಪೋವಾ ಈ ಋತುವಿನಲ್ಲಿ ಎರಡನೆ ಬಾರಿ ಗಾಯದ ಸಮಸ್ಯೆಯ ಕಾರಣ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಈ ವರ್ಷಾರಂಭದಲ್ಲಿ ಬ್ರಿಸ್ಬೇನ್ ಟೂರ್ನಮೆಂಟ್‌ನಿಂದ ಶರಪೋವಾ ಹಿಂದೆ ಸರಿದಿದ್ದರು.
ಗಾಯದ ಸಮಸ್ಯೆಯ ಕಾರಣ ದುರದೃಷ್ಟವಶಾತ್ ಈ ವರ್ಷ ತಾನು ಕತರ್ ಓಪನ್‌ನಲ್ಲಿ ಆಡುತ್ತಿಲ್ಲ. ನಾನು ಟೂರ್ನಿಗೆ ಶುಭ ಹಾರೈಸುವೆ. ಮುಂದಿನ ವರ್ಷ ದೋಹಾದ ಅಭಿಮಾನಿಗಳ ಮುಂದೆ ಆಡುವ ವಿಶ್ವಾಸದಲ್ಲಿದ್ದೇನೆ ಎಂದು 2005 ಹಾಗೂ 2008ರಲ್ಲಿ ಕತರ್ ಓಪನ್ ಜಯಿಸಿರುವ ಶರಪೋವಾ ಪ್ರತಿಕ್ರಿಯಿಸಿದರು.
14ನೆ ಆವೃತ್ತಿಯ ಕತರ್ ಓಪನ್ ಫೆ.21 ರಿಂದ 27ರ ತನಕ ನಡೆಯಲಿದೆ. ಟೂರ್ನಿಯಲ್ಲಿ ವಿಶ್ವದ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್, ಸಿಮೊನಾ ಹಾಲೆಪ್ ಹಾಗೂ ಪೆಟ್ರಾ ಕ್ವಿಟೋವಾ, ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಅಂಜೆಲಿಕ್ ಕರ್ಬರ್ ಭಾಗವಹಿಸಲಿದ್ದಾರೆ.





