ರಂಗೇರುತ್ತಿರುವ ಜಿಪಂ-ತಾಪಂ ಚುನಾವಣಾ ಕಣ

ಜಿ.ಪಂ.-19, ತಾ.ಪಂ.-54 ನಾಮಪತ್ರ ಹಿಂದೆಗೆತ
ಮಂಗಳೂರು, ಫೆ.10: ಮುಂಬರುವ ಜಿಪಂ, ತಾಪಂ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಇಂದು ಮಂಗಳೂರಿನಿಂದ 10, ಬಂಟ್ವಾಳದಿಂದ 6 ಮಂದಿ ಹಾಗೂಸುಳ್ಯದಿಂದ ಮೂವರು ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂಪಡೆ ದಿದ್ದಾರೆ.
ಈ ಮೂಲಕ ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ನಾಮನಿರ್ದೇಶಿತರಾದ 184 ಅಭ್ಯರ್ಥಿಗಳಲ್ಲಿ 19 ಮಂದಿ ತಮ್ಮ ನಾಮಪತ್ರಗಳನ್ನು ಹಿಂಪಡೆದಿದ್ದು, 165 ಮಂದಿ ಕಣದಲ್ಲಿ ಉಳಿದಿದ್ದಾರೆ.
ತಾಲೂಕು ಪಂಚಾಯತ್ ಕ್ಷೇತ್ರಗಳಲ್ಲಿ ಮಂಗಳೂರಿನಿಂದ 25, ಬಂಟ್ವಾಳದಿಂದ 15, ಬೆಳ್ತಂಗಡಿಯಿಂದ 1, ಪುತ್ತೂರಿನಿಂದ 11, ಸುಳ್ಯದಿಂದ ಇಬ್ಬರು ಸಹಿತ ಇಂದು ಒಟ್ಟು 54 ಮಂದಿ ತಮ್ಮ ನಾಮಪತ್ರಗಳನ್ನು ಹಿಂಪಡೆದಿದ್ದಾರೆ. ನಾಮನಿರ್ದೇಶಿಕ 524 ಅಭ್ಯರ್ಥಿಗಳಲ್ಲಿ 54 ಮಂದಿ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆಯುವ ಮೂಲಕ 470 ಮಂದಿ ಕಣದಲ್ಲಿ ಉಳಿದಂತಾಗಿದೆ.
ಚುನಾವಣೆ: ಎಸ್‌ಡಿಪಿಐ ಅಭ್ಯರ್ಥಿಗಳಾಗಿ ಪತಿ-ಪತ್ನಿ
ಉಳ್ಳಾಲ, ಫೆ.10: ಮುಂಬರುವ ತಾಪಂ ಚುನಾವಣೆಯಲ್ಲಿ ಮಂಜನಾಡಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಎಸ್‌ಡಿಪಿಐ ಅಭ್ಯರ್ಥಿ ಯಾಗಿ ಸಬಿನಾ ನಾಮಪತ್ರ ಸಲ್ಲಿಸಿದರು. ಮಂಜನಾಡಿ ಗ್ರಾಮದಲ್ಲಿ 2011ರ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಗಳಿಸಿತ್ತು. ಈ ಬಾರಿ ನೌಷಾದ್ ಕಲ್ಕಟ್ಟ ಕಿನ್ಯ- ತಲಪಾಡಿ ತಾಪಂ ಕ್ಷೇತ್ರದಲ್ಲಿ ಎಸ್‌ಡಿಪಿಐ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರೆ, ಅವರ ಪತ್ನಿ ಸಬಿನಾ ಮಂಜನಾಡಿ ತಾಪಂ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಣಕ್ಕಿಳಿದಿದ್ದಾರೆ.
ಮತದಾನ ಕೇಂದ್ರದಲ್ಲಿ ಮೊಬೈಲ್, ಕ್ಯಾಮರಾ ನಿಷೇಧ
ಉಡುಪಿ, ಫೆ.10: ಮುಂಬರುವ ಜಿಪಂ ಹಾಗೂ ತಾಪಂ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸುವ ನಿಟ್ಟಿನಲ್ಲಿ ಮತಗಟ್ಟೆಯೊಳಗೆ ಮೊಬೈಲ್ ಫೋನ್/ಕ್ಯಾಮರಾವನ್ನು ಒಯ್ಯುವುದನ್ನು ನಿಷೇಧಿಸಲಾಗಿದೆ. ಮತದಾರನು ಯಾವುದೇ ಒತ್ತಡಕ್ಕೆ ಮಣಿಯದೆ ನಿರ್ಭೀತಿಯಿಂದ ಮತ ಚಲಾಯಿಸಲು ಅನುಕೂಲವಾಗುವಂತೆ ಹಾಗೂ ಮತದಾನದ ರಹಸ್ಯವನ್ನು ಕಾಪಾಡುವ ದೃಷ್ಟಿಯಿಂದ ಅಭ್ಯರ್ಥಿಗಳ ಏಜೆಂಟರು, ಮತದಾರರು ಇತರ ವ್ಯಕ್ತಿಗಳು -ಮತದಾನದ ದಿನದಂದು ಚುನಾವಣಾ ಅಧಿಕೃತ ಅಧಿ ಕಾರಿಗಳು ಮತ್ತು ಸಂಬಂಧಿಸಿದ ಮತಗಟ್ಟೆ ಅಧಿಕಾರಿಗಳನ್ನು ಹೊರತುಪಡಿಸಿ ಮತಗಟ್ಟೆಯೊಳಗೆ ಮೊಬೈಲ್ ಫೋನ್/ಕ್ಯಾಮರಾವನ್ನು ಒಯ್ಯುವುದನ್ನು ನಿಷೇಧಿಸಲಾಗಿದೆ. ಅಲ್ಲದೆ ಮತಯಂತ್ರ ಹಾಳು ಮಾಡುವ ಉದ್ದೇಶದಿಂದ ಮಸಿ (ಇಂಕ್) ನೀರು ಇತ್ಯಾದಿ ವಸ್ತುಗಳನ್ನು ತೆಗೆದುಕೊಂಡು ಹೋಗುವುದನ್ನು ಸಹ ನಿಷೇಧಿಸಲಾಗಿದೆ.
ಮತಗಳ ಎಣಿಕೆ ದಿನದಂದು ಸಹ ಎಣಿಕೆ ಕೇಂದ್ರದೊಳಗೆ ಚುನಾವಣಾಧಿಕಾರಿಗಳು/ಚುನಾವಣಾನಿರತ ಅಧಿಕೃತ ಅಧಿಕಾರಿಗಳನ್ನು ಹೊರತುಪಡಿಸಿ ಅಭ್ಯರ್ಥಿಗಳು, ಅಭ್ಯರ್ಥಿಗಳ ಏಜೆಂಟರು ಹಾಗೂ ಇತರರು ಮೊಬೈಲ್ ಫೋನ್, ಕ್ಯಾಮರಾಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಚಾಕು, ಚೂರಿ ಇತ್ಯಾದಿ ಆಯುಧಗಳು, ಬೆಂಕಿಪೊಟ್ಟಣ, ಲೈಟರ್ ಇತ್ಯಾದಿ ವಸ್ತುಗಳನ್ನೂ ತೆಗೆದುಕೊಂಡು ಹೋಗು ವಂತಿಲ್ಲ ಎಂದು ರಾಜ್ಯ ಚುನಾವಣಾ ಆಯೋಗದ ಪ್ರಕಟನೆ ತಿಳಿಸಿದೆ.







