ಸೇನಾ ಮುಖ್ಯಸ್ಥನಿಗೆ ಗಲ್ಲು; ಕಿಮ್ ಜಾಂಗ್ ಉನ್

ಸಿಯೋಲ್, ಫೆ. 10: ಉತ್ತರ ಕೊರಿಯದ ಸೇನಾ ಮುಖ್ಯಸ್ಥನನ್ನು ಭ್ರಷ್ಟಾಚಾರ ಹಾಗೂ ಇತರ ಆರೋಪಗಳಲ್ಲಿ ಗಲ್ಲಿಗೇರಿಸಲಾಗಿದೆ ಎಂದು ದಕ್ಷಿಣ ಕೊರಿಯದ ವಾರ್ತಾಸಂಸ್ಥೆ ಯೊನ್‌ಹಾಪ್ ವರದಿ ಮಾಡಿದೆ.
ಕೊರಿಯ ಪೀಪಲ್ಸ್ ಆರ್ಮಿಯ ಮುಖ್ಯಸ್ಥ ಜನರಲ್ ರಿ ಯೊಂಗ್-ಗಿಲ್ ವೈಯಕ್ತಿಕ ಲಾಭಕ್ಕಾಗಿ ಕೆಲಸ ಮಾಡಿದ ಆರೋಪಗಳನ್ನೂ ಎದುರಿಸುತ್ತಿದ್ದರು ಎಂದು ಸುದ್ದಿ ಸಂಸ್ಥೆ ಬುಧವಾರ ವರದಿ ಮಾಡಿದೆ.
ಕಳೆದ ವಾರ ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್ ಉನ್ ಅಧ್ಯಕ್ಷತೆ ವಹಿಸಿದ ಆಡಳಿತಾರೂಢ ವರ್ಕರ್ಸ್ ಪಾರ್ಟಿ ಮತ್ತು ಸೇನೆಯ ಜಂಟಿ ಸಭೆ ನಡೆಯುತ್ತಿದ್ದ ವೇಳೆ ಸೇನಾ ಮುಖ್ಯಸ್ಥನ ಮರಣ ದಂಡನೆಯನ್ನು ಜಾರಿಗೊಳಿಸಲಾಯಿತು ಎಂದು ಮೂಲವೊಂದನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
2013ರಲ್ಲಿ ಹುದ್ದೆಗೆ ನೇಮಿಸಲ್ಪಟ್ಟಿದ್ದ ಗಿಲ್ ತನ್ನ ನಾಯಕನ ವಿಶ್ವಾಸವನ್ನು ಗಳಿಸಿದ್ದರು. ಕಳೆದ ತಿಂಗಳವರೆಗೂ ಅವರು ಕಿಮ್ ಜಾಂಗ್ ಉನ್ ಜೊತೆ ಸೇನಾಭ್ಯಾಸ ಸ್ಥಳಗಳಿಗೆ ಹಾಗೂ ರಕ್ಷಣಾ ಸಚಿವಾಲಯಕ್ಕೆ ಭೇಟಿ ನೀಡುತ್ತಿದ್ದರು.
ಆದಾಗ್ಯೂ, ರವಿವಾರ ನಡೆದ ಯಶಸ್ವಿ ಉಪಗ್ರಹ ಉಡಾವಣೆಯ ಸಂಭ್ರಮವನ್ನು ಆಚರಿಸಿದ ಸಮಾರಂಭಗಳು ಹಾಗೂ ಪಕ್ಷ ಮತ್ತು ಸೇನೆಯ ಜಂಟಿ ಸಭೆಯಲ್ಲಿ ಗೈರುಹಾಜರಾಗಿದ್ದರು.
ಪ್ರಮುಖ ಸೇನಾ ಹುದ್ದೆಗಳಿಗೆ ಪಕ್ಷದ ನಾಯಕರನ್ನು ನೇಮಿಸುವುದಕ್ಕೆ ಗಿಲ್ ಆಕ್ಷೇಪ ವ್ಯಕ್ತಪಡಿಸಿರಬಹುದು ಹಾಗೂ ಅದರಿಂದ ಕಿಮ್ ಜಾಂಗ್ ಉನ್ ಆಕ್ರೋಶಗೊಂಡಿರಬಹುದು ಎಂದು ಶಂಕಿಸಲಾಗಿದೆ.





