ವೈಟ್‌ಫೀಲ್ಡ್ ಸಮೀಪ ಚಿರತೆಗಳು ಪ್ರತ್ಯಕ್ಷ ವದಂತಿ, ಅರಣ್ಯಇಲಾಖೆ ಸಿಬ್ಬಂದಿ, ಪೊಲೀಸರಿಂದ ಪರಿಶೀಲನೆ

ಬೆಂಗಳೂರು, ಫೆ.10: ವೈಟ್‌ಫೀಲ್ಡ್ ಸಮೀಪದ ನಲ್ಲೂರಹಳ್ಳಿ ಹಾಗೂ ತೂಬರ ಹಳ್ಳಿಯ ವಿಬ್‌ಗಯಾರ್ ಶಾಲೆಯ ಬಳಿ ಮೂರು ಚಿರತೆಗಳು ಪ್ರತ್ಯಕ್ಷವಾಗಿರುವ ವದಂತಿಗಳು ಹಬ್ಬಿರುವುದರಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.
ಮಂಗಳವಾರ ರಾತ್ರಿ ನಲ್ಲೂರಹಳ್ಳಿಯಲ್ಲಿನ ಕಾರ್ಮಿಕರ ಕಾಲನಿ ನಿವಾಸಿ ಸರಸ್ವತಿ ಎಂಬವರು ಬಹಿರ್ದೆಸೆಗೆ ಹೋಗಿದ್ದ ಸಂದರ್ಭದಲ್ಲಿ ಚಿರತೆಯನ್ನು ಗುರುತಿಸಿದ್ದಾರೆ. ತೂಬರಹಳ್ಳಿಯ ವಿಬ್‌ಗಯಾರ್ ಶಾಲೆಯ ಬಳಿ ಎರಡು ಚಿರತೆಗಳನ್ನು ನೋಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.ರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ನಲ್ಲೂರಹಳ್ಳಿಯ ಕಾರ್ಮಿಕ ಕಾಲನಿ ಬಳಿಯಿರುವ ಪೊದೆಗಳಲ್ಲಿ ಒಂದು ಚಿರತೆ ಓಡಾಡಿರುವ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ವಿಬ್‌ಗಯಾರ್ ಶಾಲೆ ಹಿಂಭಾಗದಲ್ಲಿರುವ ನೀಲಗಿರಿ ತೋಪಿನಲ್ಲಿ ಎರಡು ಚಿರತೆಗಳ ಹೆಜ್ಜೆ ಗುರುತುಗಳು ಕಂಡು ಬಂದಿವೆ ಎಂದು ಪೊಲೀಸರು ಹೇಳಿದ್ದಾರೆ. ಶಾಲೆಯ ಹಿಂಭಾಗದಲ್ಲಿರುವ ಕೀರ್ತನಾ ಗಾರ್ಡೇನಿಯಾ ಅಪಾರ್ಟ್‌ಮೆಂಟ್‌ಗೆ ಎರಡು ಚಿರತೆಗಳು ನುಗ್ಗಲು ಯತ್ನಿಸಿವೆ. ಇದರಿಂದ, ಗಾಬರಿಗೊಂಡ ಅಲ್ಲಿನ ನಿವಾಸಿಗಳು ಪಟಾಕಿ ಸಿಡಿಸಿ ಚಿರತೆಗಳನ್ನು ಓಡಿಸಲು ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ಶಾಲೆ ಸಮೀಪ ಕಂಡು ಬಂದಿರುವ ಹೆಜ್ಜೆ ಗುರುತು ರವಿವಾರ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡ ಚಿರತೆಯದ್ದೇ ಅಥವಾ ಬೇರೆ ಚಿರತೆಯದ್ದೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಸದ್ಯಕ್ಕೆ ಎರಡು ಕಡೆ ಪರಿಶೀಲನಾ ಕಾರ್ಯವನ್ನು ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ, ಚಿರತೆಗಳನ್ನು ಪತ್ತೆ ಮಾಡುವವರೆಗೂ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಗಲಾಟೆ ಮಾಡುವುದು, ಪಟಾಕಿ ಸಿಡಿಸುವುದು ಹಾಗೂ ಒಂಟಿಯಾಗಿ ಓಡಾಡದಂತೆ ಸ್ಥಳೀಯರಲ್ಲಿ ಮನವಿ ಮಾಡಿದ್ದಾರೆ.
ವಿಬ್‌ಗಯಾರ್ ಶಾಲೆಯ ಸುತ್ತಮುತ್ತ ಚಿರತೆಗಳು ಓಡಾಡಿರುವುದನ್ನು ಹಲವಾರು ಮಂದಿ ಕೂಲಿ ಕಾರ್ಮಿಕರು ನೋಡಿದ್ದಾರೆ. ಆದುದರಿಂದ, ಚಿರತೆಗಳು ಇಲ್ಲಿಗೆ ಬಂದೇ ಇಲ್ಲ ಎಂದು ಖಿಚಿತವಾಗಿ ಹೇಳಲು ಸಾಧ್ಯವಿಲ್ಲ. ಶಾಲೆಯ ಸುತ್ತಮುತ್ತ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಶಾಲೆಯ ಕಟ್ಟಡ ಮಾಲಕ ಮುನಿರೆಡ್ಡಿ ಹೇಳಿದ್ದಾರೆ.
ನಲ್ಲೂರಹಳ್ಳಿ ಹಾಗೂ ವಿಬ್‌ಗಯಾರ್ ಶಾಲೆಯ ಸುತ್ತಮುತ್ತಲೂ ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಮೊಕ್ಕಾಂ ಹೂಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ, ಸುತ್ತಮುತ್ತಲಿನ ಗ್ರಾಮಸ್ಥರು, ಕಾರ್ಮಿಕರು ನೆಲೆಸಿರುವಂತಹ ಕಾಲನಿಗಳು ಹಾಗೂ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆಗಳನ್ನು ನೀಡಲಾಗಿದೆ.
ವಿಬ್‌ಗಯಾರ್ ಶಾಲೆಯ ಹಿಂಭಾಗದಲ್ಲಿ ಇರುವಂತಹ ನೀಲಗಿರಿ ತೋಪಿನಲ್ಲಿ ಚಿರತೆಯನ್ನು ಹಿಡಿಯಲು ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಸೂಚನೆಯಂತೆ ಇಲಾಖೆ ಸಿಬ್ಬಂದಿ ಬೋನನ್ನು ತಂದು ಇಟ್ಟಿದ್ದಾರೆ. ಚಿರತೆ ಹಿಡಿಯುವ ಕಾರ್ಯಾಚರಣೆಗೆ ಯಾವುದೇ ರೀತಿಯ ಅಡ್ಡಿಯನ್ನುಂಟು ಮಾಡದಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಶಾಲೆಗಳಿಗೆ ರಜೆ: ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ದೊಡ್ಡಕನ್ನಳ್ಳಿ, ಇಮ್ಮಡಿಹಳ್ಳಿ, ಮಾರತ್‌ಹಳ್ಳಿ, ವರ್ತೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸರಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಬುಧವಾರ ರಜೆ ಘೋಷಣೆ ಮಾಡಲಾಗಿತ್ತು. ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ತೀರ್ಮಾನವನ್ನು ಕೈಗೊಳ್ಳುವುದಾಗಿ ಬೆಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎನ್.ರಮೇಶ್ ತಿಳಿಸಿದ್ದಾರೆ.







