ಗುತ್ತಿಗೆ ವಿವಾದ: ವಿಶ್ವಕಪ್‌ನಿಂದ ವಿಂಡೀಸ್ ಆಟಗಾರರು ಹೊರಕ್ಕೆ?
ಜಮೈಕಾ, ಫೆ.10: ಗುತ್ತಿಗೆ ವಿವಾದವನ್ನು ಮುಂದಿಟ್ಟುಕೊಂಡು ವೆಸ್ಟ್‌ಇಂಡೀಸ್‌ನ ಸ್ಟಾರ್ ಆಟಗಾರರು ಮುಂಬರುವ ಟ್ವೆಂಟಿ-20 ವಿಶ್ವಕಪ್‌ನಿಂದ ಹೊರಗುಳಿಯುವ ಸಾಧ್ಯತೆಯಿದೆ ಎನ್ನಲಾಗಿದೆ.
ವಿಶ್ವಕಪ್‌ಗೆ ಆಯ್ಕೆಯಾಗಿರುವ 15 ಸದಸ್ಯರನ್ನು ಒಳಗೊಂಡ ವೆಸ್ಟ್‌ಇಂಡೀಸ್ ಆಟಗಾರರು ವೆಸ್ಟ್‌ಇಂಡೀಸ್ ಕ್ರಿಕೆಟ್ ಮಂಡಳಿ(ಡಬ್ಲು ಐಸಿಬಿ) ಒಪ್ಪಂದದ ಕೊಡುಗೆಯನ್ನು ತಿರಸ್ಕರಿಸಿದ್ದು, ವೇತನದಲ್ಲಿ ಭಾರೀ ಕಡಿತವಾಗುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಗುತ್ತಿಗೆ ವಿವಾದವನ್ನು ರವಿವಾರದ ಒಳಗೆ ಪರಿಹರಿಸಲು ಗಡುವು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಾವು ವಿಶ್ವಕಪ್‌ನಲ್ಲಿ ವೆಸ್ಟ್‌ಇಂಡೀಸ್ ತಂಡವನ್ನು ಪ್ರತಿನಿಧಿಸಲು ಬಯಸಿದ್ದೇವೆ. ಆದರೆ, ನಮ್ಮ ಮುಂದಿಟ್ಟಿರುವ ಹಣಕಾಸು ಕೊಡುಗೆ ತೃಪ್ತಿಕರವಾಗಿಲ್ಲ. ನಾವು ಅದನ್ನು ಸ್ವೀಕರಿಸಲಾರೆವು ಎಂದು ವೆಸ್ಟ್‌ಇಂಡೀಸ್ ನಾಯಕ ಡರೆನ್ ಸಮ್ಮಿ ಡಬ್ಲುಐಸಿಬಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಕ್ರಿಕ್‌ಇನ್‌ಫೋ ಡಾಟ್‌ಕಾಮ್ ವರದಿ ಮಾಡಿದೆ.
ಡಬ್ಲುಐಸಿಬಿ ಟೂರ್ನಿಯಲ್ಲಿ ಆಡುವ ಬಗ್ಗೆ ಬದ್ಧವಾಗಿದೆ. ಆಟಗಾರರ ಒಪ್ಪಂದಕ್ಕೆ ಸಹಿ ಹಾಕದೇ ಯಾರೂ ವೆಸ್ಟ್‌ಇಂಡೀಸ್‌ನ್ನು ಬಿಟ್ಟು ಹೋಗುವಂತಿಲ್ಲ. ಒಂದು ವೇಳೆ ಆಟಗಾರರು ಸಹಿ ಹಾಕದೇ ಇದ್ದರೆ, ಬದಲಿ ಆಟಗಾರರನ್ನು ಆಯ್ಕೆ ಮಾಡದೇ ಬೇರೆ ದಾರಿಯಿಲ್ಲ ಎಂದು ಡಬ್ಲುಐಸಿಬಿ ಸಿಇಒ ಮೈಕಲ್ ಮುರಿಹೆಡ್ ತಿಳಿಸಿದ್ದಾರೆ.
ವೆಸ್ಟ್‌ಇಂಡೀಸ್ ತಂಡ 18 ತಿಂಗಳ ಹಿಂದೆ ಡಬ್ಲು ಐಸಿಬಿ ಹಾಗೂ ಆಟಗಾರರು ನಡುವೆ ವೇತನ ವಿವಾದ ಕಾಣಿಸಿಕೊಂಡಾಗ ವಿಂಡೀಸ್ ತಂಡ ಭಾರತ ಪ್ರವಾಸವನ್ನು ಮೊಟಕುಗೊಳಿಸಿ ಸ್ವದೇಶಕ್ಕೆ ವಾಪಸಾಗಿತ್ತು.







