ಹ್ಯಾಂಪ್‌ಶಯರ್‌ನಲ್ಲಿ ಹಿಲರಿಗೆ ಸೋಲು; ಸ್ಯಾಂಡರ್ಸ್, ಡೊನಾಲ್ಡ್ ಟ್ರಂಪ್‌ಗೆ ಜಯ
ವಾಶಿಂಗ್ಟನ್, ಫೆ. 10: ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದ ಬರ್ನೀ ಸ್ಯಾಂಡರ್ಸ್ ನ್ಯೂ ಹ್ಯಾಂಪ್‌ಶಯರ್‌ನಲ್ಲಿ ಮಂಗಳವಾರ ರಾತ್ರಿ ನಡೆದ ತಮ್ಮ ತಮ್ಮ ಪಕ್ಷಗಳ ಅಭ್ಯರ್ಥಿ ಆಯ್ಕೆಯ ಪ್ರಾಥಮಿಕ ಚುನಾವಣೆಯಲ್ಲಿ ಸುಲಭವಾಗಿ ಜಯ ಗಳಿಸಿದ್ದಾರೆ.
ಮತದಾನ ಮುಗಿದ ನಿಮಿಷಗಳಲ್ಲೇ ಡೆಮಾಕ್ರಟಿಕ್ ಪಕ್ಷದ ಟಿಕೆಟ್‌ಗಾಗಿ ಸ್ಪರ್ಧಿಸುತ್ತಿರುವ ಹಿಲರಿ ಕ್ಲಿಂಟನ್ ಸೋಲೊಪ್ಪಿಕೊಂಡಿದ್ದಾರೆ. ಸೌತ್ ಕ್ಯಾರಲೈನ ಮತ್ತು ನೆವಾಡಗಳಲ್ಲಿ ನಡೆಯಲಿರುವ ಪ್ರಾಥಮಿಕ ಚುನಾವಣೆಯತ್ತ ತಾವು ಗಮನ ಹರಿಸುವುದಾಗಿ ಹಿಲರಿ ಕ್ಲಿಂಟನ್‌ರ ಪ್ರಚಾರ ತಂಡ ಹೇಳಿದೆ.
ತಾನಿನ್ನೂ ಕಠಿಣ ಪರಿಶ್ರಮ ಪಡಬೇಕಿದೆ ಎಂಬುದು ತನಗೆ ಗೊತ್ತಿದೆ ಎಂದು ತನ್ನ ಸೋಲೊಪ್ಪಿಕೊಂಡ ಭಾಷಣದಲ್ಲಿ ಕ್ಲಿಂಟನ್ ಹೇಳಿದರು. ಯುವ ಜನರ ಮತಗಳನ್ನು ಪಡೆಯುವುದೇ ಸಮಸ್ಯೆ ಎಂಬುದನ್ನು ಒಪ್ಪಿಕೊಂಡ ಅವರು, ಯುವಜನರು ತನ್ನ ಕೈಹಿಡಿಯದಿದ್ದರೂ ತಾನು ಅವರನ್ನು ಬೆಂಬಲಿಸುವುದಾಗಿ ಹೇಳಿದರು.
ವಿಜಯದ ಬಳಿಕ ಇನ್ನೊಂದು ಸಮಾರಂಭದಲ್ಲಿ ಮಾತನಾಡಿದ ಸ್ಯಾಂಡರ್ಸ್, ನಿಜವಾದ ಸ್ಪರ್ಧೆ ಈಗ ಆರಂಭವಾಗಿದೆ ಎಂದರು. ಅದೇ ವೇಳೆ, ರಿಪಬ್ಲಿಕನ್ ಟಿಕೆಟ್‌ಗಾಗಿನ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಮೊದಲ ವಿಜಯ ಗಳಿಸಿದ್ದಾರೆ. ಈ ಮೊದಲು ಅಯೋವದಲ್ಲಿ ನಡೆದ ಚುನಾವಣೆಯಲ್ಲಿ ಅವರು ಎರಡನೆ ಸ್ಥಾನ ಗಳಿಸಿದ್ದರು.
‘‘ನಾವು ಮತ್ತೆ ಗೆಲ್ಲಲು ಆರಂಭಿಸಿದ್ದೇವೆ’’ ಎಂದು ವಿಜಯ ಭಾಷಣದಲ್ಲಿ ಟ್ರಂಪ್ ಹೇಳಿದರು.
ಜಾನ್ ಕ್ಯಾಸಿಕ್ ಎರಡನೆ ಸ್ಥಾನಿಯಾದರು. ಅಯೋವ ಕಾಕಸಸ್‌ನಲ್ಲಿ ಗೆದ್ದಿದ್ದ ಟೆಡ್ ಕ್ರೂಝ್, ಜೇಬ್ ಬುಶ್, ಮಾರ್ಕೊ ರೂಬಿಯೊ ಮತ್ತು ಕ್ರಿಸ್ ಕ್ರಿಸ್ಟೀ ನೇಪಥ್ಯಕ್ಕೆ ಸರಿದರು.





