ಉಲ್ಕಾ ಶಿಲೆ ಅಪ್ಪಳಿಸಿ ಬಸ್ ಚಾಲಕ ಮೃತಪಟ್ಟರೇ?
ಅಲ್ಲ ಎನ್ನುತ್ತಾರೆ ನಾಸಾ ವಿಜ್ಞಾನಿಗಳು!
ನ್ಯೂಯಾರ್ಕ್, ಫೆ. 10: ಶನಿವಾರ ವೆಲ್ಲೂರಿನ ಕಾಲೇಜೊಂದರ ಆವರಣಕ್ಕೆ ಉಲ್ಕಾ ಶಿಲೆಯೊಂದು ಅಪ್ಪಳಿಸಿದಾಗ ಓರ್ವ ಬಸ್ ಚಾಲಕ ಮೃತಪಟ್ಟರು ಹಾಗೂ ಮೂವರು ಗಾಯಗೊಂಡರು- ಹೀಗೆಂದು ಭಾರತೀಯ ಪತ್ರಿಕೆಗಳು ವರದಿ ಮಾಡಿದ್ದವು. ಜಗತ್ತಿನಾದ್ಯಂತದ ಸುದ್ದಿ ಸಂಸ್ಥೆಗಳು ಅವುಗಳನ್ನು ಮರುಪ್ರಸಾರಿಸಿದ್ದವು.
ಒಂದು ವೇಳೆ ಅದು ನಿಜವಾಗಿದ್ದರೆ, ಉಲ್ಕಾಶಿಲೆಯೊಂದು ಅಪ್ಪಳಿಸಿ ವ್ಯಕ್ತಿಯೊಬ್ಬರು ಮೃತಪಟ್ಟ ಮೊದಲ ವೈಜ್ಞಾನಿಕವಾಗಿ ಖಚಿತವಾದ ಘಟನೆಯಾಗುತ್ತಿತ್ತು.ಆದರೆ, ವೈಜ್ಞಾನಿಕ ಪರಿಣತರು ಈ ಘಟನೆಯ ಬಗ್ಗೆ ಗಮನ ಹರಿಸುತ್ತಿದ್ದಂತೆಯೇ, ಮಂಗಳವಾರದ ವೇಳೆಗೆ ಈ ಸುದ್ದಿ ಠುಸ್ ಆಯಿತು.
ಆರಂಭಿಕ ವರದಿಗಳು 5 ಅಡಿ ಆಳ ಮತ್ತು 2 ಅಡಿ ಅಗಲದ ಕುಳಿಯೊಂದರ ಚಿತ್ರಗಳನ್ನು ತೋರಿಸಿದವು. ತಾವು ಸ್ಫೋಟವೊಂದನ್ನು ಕೇಳಿರುವುದಾಗಿ ಪ್ರತ್ಯಕ್ಷದರ್ಶಿಗಳು ವಿವರಿಸಿದರು ಹಾಗೂ ಪೊಲೀಸರು ಸ್ಥಳದಿಂದ ಕುಳಿಯೊಂದನ್ನು ಹೊಂದಿರುವ ಕಪ್ಪು ಕಲ್ಲೊಂದನ್ನು ವಶಪಡಿಸಿಕೊಂಡರು. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಉಲ್ಕಾ ಶಿಲೆ ಅಪ್ಪಳಿಸಿ ಮೃತಪಟ್ಟ ಬಸ್ ಚಾಲಕ ಕಾಮರಾಜ್ ಹಾಗೂ ಗಾಯಗೊಂಡವರ ಕುಟುಂಬಗಳಿಗೆ ಪರಿಹಾರವನ್ನೂ ಘೋಷಿಸಿದ್ದಾರೆ. ಇಂಜಿನಿಯರಿಂಗ್ ಕಟ್ಟಡ ಹಾಗೂ ಹಲವಾರು ಬಸ್‌ಗಳ ಗಾಜುಗಳು ಒಡೆದು ಉಂಟಾದ ಗಾಯಗಳಿಂದ ಚಾಲಕ ಕಾಮರಾಜ್ ಅಸು ನೀಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರು ಒದಗಿಸಿದ ಕಲ್ಲಿನ ಮಾದರಿಗಳನ್ನು ಭಾರತೀಯ ಭೌತಶಾಸ್ತ್ರ ಸಂಸ್ಥೆಯ ವಿಜ್ಞಾನಿಗಳು ವಿಶ್ಲೇಷಿಸುತ್ತಿದ್ದಾರೆ. ‘‘ಉಲ್ಕಾಪಾತದ ಪೂರ್ವ ಸೂಚನೆ ಇರಲಿಲ್ಲ ಹಾಗೂ ಉಲ್ಕಾಪಾತದ ವೀಕ್ಷಣೆಯನ್ನೂ ಮಾಡಲಾಗಿಲ್ಲ ಎಂಬುದನ್ನು ಗಣನೆಗೆ ತೆಗೆದುಕೊಂಡರೆ, ಒಂದು ವೇಳೆ ಅದು ಉಲ್ಕಾ ಶಿಲೆಯೇ ಆಗಿದ್ದರೆ, ಖಂಡಿತವಾಗಿಯೂ ಅದೊಂದು ಅಪರೂಪದ ವಿದ್ಯಮಾನವೇ ಸರಿ’’ ಎಂದು ಸಂಸ್ಥೆಯ ಡೀನ್ ಪ್ರೊ. ಜಿ.ಸಿ. ಅನುಪಮಾ ಮಂಗಳವಾರ ‘ನ್ಯೂಯಾರ್ಕ್ ಟೈಮ್ಸ್’ಗೆ ಹೇಳಿದ್ದಾರೆ. ಆದರೆ, ಅಮೆರಿಕದ ನಾಸಾದ ವಿಜ್ಞಾನಿಗಳು ಈ ವಿಷಯದಲ್ಲಿ ಸ್ಪಷ್ಟತೆ ಹೊಂದಿದ್ದಾರೆ. ಇಂಟರ್ನೆಟ್‌ನಲ್ಲಿ ಹಾಕಲಾಗಿರುವ ಚಿತ್ರಗಳನ್ನು ಗಮನಿಸಿದರೆ, ಅದು ಬಾಹ್ಯಾಕಾಶದ ಸ್ಫೋಟಕ್ಕಿಂತಲೂ ಹೆಚ್ಚಾಗಿ ಭೂಮಿಗೆ ಸಂಬಂಧಿಸಿದ ಸ್ಫೋಟದಂತೆ ಕಾಣುತ್ತದೆ ಎಂದು ಅವರು ಹೇಳುತ್ತಾರೆ.
ಉಲ್ಕಾ ಶಿಲೆಯೊಂದು ಅಪ್ಪಳಿಸಿ ವ್ಯಕ್ತಿಯೊಬ್ಬರು ಮೃತಪಟ್ಟಿರುವುದು ಈವರೆಗೆ ವೈಜ್ಞಾನಿಕವಾಗಿ ಖಚಿತಪಟ್ಟಿಲ್ಲ ಎಂದು ನಾಸಾದ ಗ್ರಹ ಸಂರಕ್ಷಣಾ ಅಧಿಕಾರಿ ಲಿಂಡ್ಲೆ ಜಾನ್ಸನ್ ಹೇಳುತ್ತಾರೆ.ಭಾರತದಲ್ಲಿ ಉಲ್ಕೆ ಅಪ್ಪಳಿಸಿತೆನ್ನಲಾದ ಸ್ಥಳದಿಂದ ವಶಪಡಿಸಿಕೊಂಡಿರುವುದು ಕೆಲವೇ ಗ್ರಾಂ ತೂಗುವ ಕಲ್ಲು ಹಾಗೂ ಅದು ಭೂಮಿಯ ಸಾಮಾನ್ಯ ಬಂಡೆಯ ತುಂಡಿನಂತೆ ಕಾಣುತ್ತದೆ ಎಂದರು.
ಉಲ್ಕಾಪಾತದಿಂದ ಜನರು ಗಾಯಗೊಂಡಿರುವ ಬಗ್ಗೆ ವರದಿಗಳಿವೆ. ಅದೂ, ಮೂರು ವರ್ಷಗಳ ಹಿಂದೆ ರಶ್ಯದ ಚೆಲ್ಯಬಿನ್‌ಸ್ಕ್‌ನಲ್ಲಿ ನಡೆದ ಘಟನೆಗಿಂತ ಮೊದಲು ಇಂಥ ಘಟನೆಗಳು ನಡೆದಿರುವುದು ಅತ್ಯಂತ ಅಪರೂಪ.
- ಲಿಂಡ್ಲೆ ಜಾನ್ಸನ್, ನಾಸಾದ ಗ್ರಹ ಸಂರಕ್ಷಣಾ ಅಧಿಕಾರಿ







