ಹನುಮಂತಪ್ಪ ಇನ್ನಷ್ಟು ಗಂಭೀರ

ಸಾವು ಬದುಕಿನ ನಡುವೆ ಹೋರಾಡುತ್ತಿರುವ ಕನ್ನಡಿಗ ಯೋಧ
ಎಲ್ಲೆಡೆ ಪ್ರಾರ್ಥನೆ
ಹೊಸದಿಲ್ಲಿ, ಫೆ.10: ಆರು ದಿನಗಳ ಕಾಲ ಹಿಮದ ಅಡಿಯಲ್ಲಿ ಸಿಲುಕಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಕನ್ನಡಿಗ ಯೋಧ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ ಅವರ ಆರೋಗ್ಯ ಸ್ಥಿತಿ ಕ್ಷಣಕ್ಷಣಕ್ಕೂ ಕ್ಷೀಣಿಸುತ್ತಿದ್ದು, ತಜ್ಞವೈದ್ಯರ ಚಿಕಿತ್ಸೆಗೆ ಅವರ ದೇಹ ಸ್ಪಂದಿಸುತ್ತಿಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಈ ನಡುವೆ ಹನುಮಂತಪ್ಪನವರ ಚೇತರಿಕೆಗಾಗಿ ದೇಶಾದ್ಯಂತ ಪ್ರಾರ್ಥನೆಗಳು ನಡೆಯುತ್ತಿವೆ.
ದಿಲ್ಲಿಯ ಸೇನಾ ಸಂಶೋಧನಾ ಮತ್ತು ಚಿಕಿತ್ಸೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಆರೋಗ್ಯದ ಬಗ್ಗೆ ಮುಂದಿನ 24 ಗಂಟೆ ಕಾಲ ಕಾದು ನೋಡಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಕ್ಷಣಕ್ಷಣಕ್ಕೂ ಅವರ ದೇಹಸ್ಥಿತಿ ಹದಗೆಡುತ್ತಿದ್ದು, ಯಾವುದೇ ಚಿಕಿತ್ಸೆಗೂ ಸ್ಪಂದಿಸುತ್ತಿಲ್ಲವೆಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ನ್ಯುಮೋನಿಯಾ, ಲಿವರ್ ಮತ್ತು ಕಿಡ್ನಿ ವೈಫಲ್ಯಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಆಘಾತದಿಂದ ಇನ್ನೂ ಚೇತರಿಸಿಕೊಳ್ಳದ ಅವರು ಕೋಮಾ ಸ್ಥಿತಿಯಲ್ಲೇ ಇದ್ದಾರೆ. ರಕ್ತದ ಒತ್ತಡ ತೀರಾ ಕಡಿಮೆ ಇದೆ. ವಿಶೇಷ ತಜ್ಞರು, ನರರೋಗ ತಜ್ಞರು, ಮೂತ್ರರೋಗ ತಜ್ಞರು ಹಾಗೂ ಶಸ್ತ್ರ ಚಿಕಿತ್ಸಕರ ತಂಡ ಹನುಮಂತಪ್ಪ ಅವರಿಗೆ ಚಿಕಿತ್ಸೆ ನೀಡುತ್ತಿದೆ. ಅವರ ರಕ್ತದ ಒತ್ತಡವನ್ನು ಸಹಜ ಸ್ಥಿತಿಗೆ ತರಲು ಔಷಧಿ ನೀಡಲಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.
ಕೊಪ್ಪದ ಅವರನ್ನು 20,500 ಅಡಿ ಎತ್ತರದ ಹಿಮ ಪರ್ವತದಿಂದ 150 ಮಂದಿಯ ತಂಡ ರಕ್ಷಿಸಿತ್ತು. ಡಾಟ್ ಹಾಗೂ ಮಿಷಾ ಎಂಬ ಶ್ವಾನಗಳು ಈ ಪರಿಹಾರ ಕಾರ್ಯಾಚರಣೆಯಲ್ಲಿ ವಿಶೇಷ ಪಾತ್ರ ವಹಿಸಿ ದ್ದವು. ಸಿಯಾಚಿನ್ ಮೂಲಶಿಬಿರದಿಂದ ವಿಶೇಷ ಚಿಕಿತ್ಸೆಗಾಗಿ ಅವ ರನ್ನು ದಿಲ್ಲಿಗೆ ಕರೆತರಲಾಗಿತ್ತು. ಐದು ದಿನಗಳ ಕಾಲ ಮಂಜಿನಲ್ಲಿ ಹೂತಿದ್ದ ಹಿನ್ನೆಲೆಯಲ್ಲಿ ದೇಹದ ಶಾಖವನ್ನು ಹೆಚ್ಚಿಸುವ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಅದೃಷ್ಟವಶಾತ್ ಯಾವುದೇ ಶೀತಸಂಬಂಧಿ ಗಾಯ ಅಥವಾ ಎಲುಬು ಗಾಯಗಳಾಗಿಲ್ಲ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.
ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಹನುಮಂತಪ್ಪ ಚಿಕಿತ್ಸೆ ಪಡೆಯುತ್ತಿದ್ದು, ಶ್ವಾಸನಾಳ ಹಾಗೂ ಶ್ವಾಸ ಕೋಶಗಳನ್ನು ರಕ್ಷಿಸುವ ಎಲ್ಲ ಪ್ರಯತ್ನಗಳು ನಡೆದಿವೆ. ಮುಂದಿನ 24 ರಿಂದ 48 ಗಂಟೆಗಳು ಅತ್ಯಂತ ನಿರ್ಣಾಯಕ ಎಂದು ಮೂಲಗಳು ಹೇಳಿವೆ.
ಹನುಮಂತಪ್ಪ ತಾಯಿಗೆ ಸೋನಿಯಾ ಪತ್ರ
‘‘ಸಿಯಾಚಿನ್‌ನಲ್ಲಿ ಹಿಮಪಾತಕ್ಕೆ ಸಿಲುಕಿ ಭಾರತೀಯ ಸೇನೆಯ 9 ಮಂದಿ ಯೋಧರು ಸಾವನ್ನಪ್ಪಿರುವುದು ನಿಜಕ್ಕೂ ದುಃಖದ ಸಂಗತಿ. ಆದರೂ ನಿಮ್ಮ ಪುತ್ರ ಭರವಸೆಯ ಕಿರಣವಾಗಿ ಉಳಿದಿದ್ದಾರೆ. ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ ಅವರ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡುಬಂದು ಅವರು ಮತ್ತೆ ನಮ್ಮ ದೇಶ ರಕ್ಷಣೆ ಕಾಯಕದಲ್ಲಿ ತೊಡಗುವಂತಾಗಲಿ ಎಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ’’ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬುಧವಾರ ಹನುಮಂತಪ್ಪ ಕೊಪ್ಪದ ಅವರ ತಾಯಿಗೆ ಬರೆದ ಪತ್ರದಲ್ಲಿ ಭಾವನಾತ್ಮಕವಾಗಿ ಹೇಳಿದ್ದಾರೆ.







