ಹೀಗೊಂದು ರಾಜಕೀಯ ಪ್ರಹಸನ....! ಪಕ್ಷಕ್ಕೆ ಬರಮಾಡಿಕೊಂಡರು, ಬಳಿಕ ದಿಕ್ಕರಿಸಿದರು

ಕಾರ್ಕಳ : ಪಕ್ಷಕ್ಕೆ ಅಗತ್ಯವಿದೆ ಎಂದು ಬರಮಾಡಿಕೊಂಡವರು. ಅನಗತ್ಯ ಎಂದಾಗ ದಿಕ್ಕರಿಸಿ ಬಿಟ್ಟರು. ಇದು ಕಾರ್ಕಳ ಕಾಂಗ್ರೆಸ್‌ನಲ್ಲಿ ಕಳೆದ ಹತ್ತೆ ದಿನಗಳಲ್ಲಿ ಚರ್ಚೆಗೆ ದಾರಿ ಮಾಡಿಕೊಟ್ಟ ರಾಜಕೀಯ ಪ್ರಹಸನ...!
ಹಿರ್ಗಾನ ಗ್ರಾ.ಪಂ.ಸದಸ್ಯೆಯಾಗಿ, ಒಂದು ಅವಧಿಗೆ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ರತ್ನಾವತಿ ನಾಯಕ್ ಹಿರಿಯ ರಾಜಕೀಯ ಧುರೀಣೆ. ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಆಕೆ, ಕಳೆದ ಗ್ರಾ.ಪಂ.ಚುನಾವಣೆಯಲ್ಲಿ ತಟಸ್ಥರಾಗಿದ್ದರು. ಈ ಹಿಂದಿನ ಮೊದಲ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಅವರು, ಎರಡನೇ ಅವಧಿಯಲ್ಲಿ ಸಾಮಾನ್ಯ ಮಹಿಳೆ ಮೀಸಲಾತಿ ಲಭಿಸಿದ್ದ ಹಿನ್ನೆಲೆಯಲ್ಲಿ ಗ್ರಾ.ಪಂ.ನ ಎರಡನೇ ಅವಧಿಯಲ್ಲೂ ತನಗೆ ಅಧ್ಯಕ್ಷಗಾದಿ ನೀಡಬೇಕೆನ್ನುವ ಬೇಡಿಕೆಯನ್ನು ಬಿಜೆಪಿ ಹೈಕಮಾಂಡ್ ಮುಂದಿಟ್ಟಿದ್ದರು. ಆದರೆ ಅನ್ಯರಿಗೆ ಅವಕಾಶ ನೀಡುವ ಮೂಲಕ ಬಿಜೆಪಿ ಹೈಕಮಾಂಡ್ ರೇವತಿ ಶೆಟ್ಟಿ ಅವರನ್ನು ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಗೊಳಿಸಿತು. ಇದು ರತ್ನಾವತಿ ನಾಯಕ್ ಅವರ ಅಸಮಾಧಾನಕ್ಕೂ ಕಾರಣವಾಗಿತ್ತು. ಪ್ರಸ್ತುತ ಬಿಜೆಪಿಯಿಂದ ದೂರವೇ ಉಳಿದಿರುವ ರತ್ನಾವತಿ ನಾಯಕ್ ಅವರನ್ನು ಕಾಂಗ್ರೆಸ್ ಪಕ್ಷವು ಬರ ಮಾಡಿಕೊಂಡಿತ್ತು. ಪಕ್ಷದ ಧ್ವಜವನ್ನು ನೀಡಿ ಅಧೀಕೃತವಾಗಿ ಕಾಂಗ್ರೆಸ್‌ಗೆ ಸೇರ್ಪಡೆಗೊಳಿಸಿತ್ತು. ಬಳಿಕ ಹಿರ್ಗಾನ ತಾ.ಪಂ.ಕ್ಷೇತ್ರದ ಸಾಮಾನ್ಯ ಮಹಿಳೆ ಮೀಸಲಾತಿಯನ್ವಯ ರತ್ನಾವತಿ ನಾಯಕ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಸುವ ತೀರ್ಮಾನವೂ ಕೈಗೊಂಡಿತ್ತು. ಅಂತೆಯೇ ರತ್ನಾವತಿ ನಾಯಕ್ ಅವರು ಕಾಂಗ್ರೆಸ್ ಅಭ್ಯರ್ಥಿ ಎಂದು ಪ್ರಚಾರ ಕಾರ್ಯವನ್ನು ಕೈಗೆತ್ತಿಕೊಂಡಿದ್ದರು. ಮತ ಯಾಚಿಸುತ್ತಾ ಒಂದು ಸುತ್ತು ಹಿರ್ಗಾನ ತಾ.ಪಂ.ಕ್ಷೇತ್ರವನ್ನು ಸುತ್ತಿದ್ದರು. ಆದರೆ ಕಾಂಗ್ರೆಸ್ ಕೊನೆಯ ಕ್ಷಣದಲ್ಲಿ ನಡೆಸಿದ ದಿಢೀರ್ ಬದಲಾವಣೆಯಿಂದಾಗಿ ಆ ಸ್ಥಾನಕ್ಕೆ ಗ್ರಾ.ಪಂ.ಉಪಾಧ್ಯಕ್ಷೆ ಲೀಲಾವತಿ ನಾಯಕ್ ಕಣಕ್ಕಿಳಿಸಿತ್ತು. ರತ್ನಾವತಿ ನಾಯಕ್ ಅವರಿಗೆ ಕೈಕೊಟ್ಟಿತ್ತು. ಇದೀಗ ರತ್ನಾವತಿ ನಾಯಕ್ ಅತ್ತಾವೂ ಇಲ್ಲ, ಇತ್ತಾವೂ ಇಲ್ಲ ಎನ್ನುವ ಸ್ಥಿತಿ ಅವರದ್ದಾಗಿದೆ. ಮಾತೃಪಕ್ಷದಲ್ಲೇ ತಾನು ಗುರುತಿಸಿಕೊಳ್ಳುವುದಾಗಿ ಹೇಳಿಕೊಂಡ ಅವರು ಸೇರ್ಪಡೆಗೊಂಡ ಹತ್ತೆ ದಿನದಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಬಿಜೆಪಿಗೆ ಬೆಂಬಲ :
ಕಾಂಗ್ರೆಸ್ ಒಂದು ಕಸದ ಬುಟ್ಟಿ. ಅಲ್ಲಿ ಎಲ್ಲರನ್ನು ಬುಟ್ಟಿಗೆ ಬೀಸಾಡುತ್ತದೆ. ಬುಟ್ಟಿಗೆ ಬೀಸಾಡಿದ ಬಳಿಕ ಮತ್ತೆ ಎತ್ತಿ ತರುವ ಕೆಲಸವಾಗುವುದಿಲ್ಲ. ಸದ್ಯಕ್ಕೆ ನಾನು ಮನೆಯಲ್ಲಿದ್ದೇನೆ. ಈ ಬಾರಿಯ ತಾ.ಪಂ ಮತ್ತು ಜಿ.ಪಂ.ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಲು ನಿರ್ಧರಿಸಿದ್ದೇನೆ. ಆದರೆ ಕಾಂಗ್ರೆಸ್‌ನಿಂದ ಬಿಜೆಪಿ ಎಷ್ಟೋ ವಾಸಿ ಎನ್ನುತ್ತಾರೆ ರಾಜಕೀಯದಲ್ಲಿ ನೊಂದಿರುವ ರತ್ನಾವತಿ ನಾಯಕ್ ಹಿರ್ಗಾನ. ಕಾಂಗ್ರೆಸ್ ಸೇರ್ಪಡೆ ಸಂದರ್ಭ ಸೀಟಿನ ಅಪೇಕ್ಷೆ ಮುಂದಿಟ್ಟಿಲ್ಲ. ಆದರೆ ಕಾಂಗ್ರೆಸ್ ಸೀಟು ನೀಡುವ ಭರವಸೆ ನೀಡಿ ಕೊನೆಯ ಕ್ಷಣದಲ್ಲಿ ಕೈಕೊಟ್ಟಿದೆ. ಹಾಗಾಗಿ....ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇನೆ ಎನ್ನುತ್ತಾರೆ ಅವರು.







