ಮಂಗಳೂರು : ಬಿಜೆಪಿ ಜಿಲ್ಲಾ ಮಟ್ಟದ ಪ್ರಣಾಳಿಕೆ ಬಿಡುಗಡೆ
ಮಂಗಳೂರು,ಫೆ.11: ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕದಿಂದ ಜಿ.ಪಂ ಮತ್ತು ತಾ.ಪಂ ಚುನಾವಣೆಗಾಗಿ ಜಿಲ್ಲಾಮಟ್ಟದ ಪ್ರಣಾಳಿಕೆಯನ್ನು ಇಂದು ಸಂಸದ ನಳಿನ್‌ಕುಮಾರ್ ಕಟೀಲ್ ದ.ಕ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಅಮ್ಮ, ಅನ್ನ, ಅಕ್ಷರ, ಆರೋಗ್ಯ ಧ್ಯೇಯದೊಂದಿಗೆ ಬಿಜೆಪಿ ಚುನಾವಣಾ ಪ್ರಣಾಳಿಕೆಯನ್ನು ತಯಾರಿಸಿದೆ. ಕಾಂಗ್ರೆಸ್ ದ.ಕ ಜಿಲ್ಲೆಯ ರೈತರಿಗೆ ಅನ್ಯಾಯವೆಸಗಿದ್ದು ರಬ್ಬರ್ ಬೆಳೆಗಾರರು ಬೆಂಬಲ ಬೆಲೆ ಸಿಗದೆ ಸಮಸ್ಯೆಗೀಡಾಗಿದ್ದಾರೆ. ರಾಜ್ಯ ಮತ್ತು ಜಿಲ್ಲೆಯ ಕೃಷಿಕರು ಕಣ್ಣೀರಿಡುವಂತಹ ಪರಿಸ್ಥಿತಿಯನ್ನು ಕಾಂಗ್ರೆಸ್ ಸೃಷ್ಟಿಸಿದ್ದು ರೈತರ ಶಾಪದಿಂದ ಕಾಂಗ್ರೆಸ್‌ಪಕ್ಷ ಚುನಾವಣೆಯಲ್ಲಿ ಹಿನ್ನಡೆ ಸಾಧಿಸುತ್ತದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಒಂದು ತಿಂಗಳಲ್ಲಿ 22 ಕೊಲೆ, ರಕ್ಷಣೆ ಇರಬೇಕಾದ ಕಾರಾಗೃಹದಲ್ಲಿ ಜೋಡಿಕೊಲೆ, ಮಹಿಳಾ ದೌರ್ಜನ್ಯ, ಗೋಹತ್ಯೆ, ವಿದ್ಯುತ್ ಸಮಸ್ಯೆಗಳಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ವಿರುದ್ದ ಜನರು ಆಕ್ರೋಶಗೊಂಡಿದ್ದಾರೆ. ಸರಕಾರ ಕುಮ್ಕಿ ಹಕ್ಕು ಕಸಿದುಕೊಳ್ಳುತ್ತಿದ್ದು ರಾಜ್ಯ ಸರಕಾರ ಕಸ್ತೂರಿರಂಗನ್ ವರದಿಗೆ ಸಂಬಂಧಪಟ್ಟು ಸರ್ವೆ ಮಾಡದೆ ವರದಿ ಕೊಡದೆ ಇರುವ ಕಾರಣದಿಂದ ಕಸ್ತೂರಿರಂಗನ್ ಸಮಸ್ಯೆ ಎದುರಾಗಿದೆ ಎಂದು ಹೇಳಿದರು.
ಚುನಾವಣೆಯ ನಂತರದಲ್ಲಿ ಎತ್ತಿನಹೊಳೆ ಯೋಜನೆ ವಿರುದ್ದ ಮತ್ತೆ ಆರಂಭಿಸಲಿದ್ದು ಈ ವಿಚಾರದಲ್ಲಿ ಆತ್ಮಸಾಕ್ಷಿಯಾಗಿ ಹೋರಾಟ ಮಾಡುತ್ತೇನೆ. ಯಶಸ್ವಿಯಾಗುವವರೆಗೂ ಬಿಟ್ಟು ಕೊಡುವುದಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್, ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಕೆ.ಜಯರಾಮ್ ಶೆಟ್ಟಿ, ರುಕ್ಮಯ ಪೂಜಾರಿ, ಮಾಜಿ ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಬಿಜೆಪಿ ನಾಯಕರಾದ ಸಂಜೀವ ಮಠಂದೂರು, ಕಿಶೋರ್ ರೈ ಮೊದಲಾದವರು ಉಪಸ್ಥಿತರಿದ್ದರು.







