ಲೈಂಗಿಕ ಕಿರುಕುಳ ಆರೋಪದ ತನಿಖೆಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇಮಕ

ಹೊಸದಿಲ್ಲಿ,ಫೆ.11:ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ನ್ಯಾ.ಎಸ್.ಕೆ.ಗಂಗೆಲೆ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ತನಿಖೆಯನ್ನು ನಡೆಸುತ್ತಿರುವ ಸಮಿತಿಯ ಮುಖ್ಯಸ್ಥರಾಗಿದ್ದ ನ್ಯಾ. ವಿಕ್ರಮಜಿತ್ ಸೇನ್ ಅವರು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಹುದ್ದೆಯಿಂದ ನಿವೃತ್ತರಾಗಿರುವ ಹಿನ್ನೆಲೆಯಲ್ಲಿ ರಾಜ್ಯಸಭೆಯ ಸಭಾಪತಿ ಹಾಮಿದ್ ಅನ್ಸಾರಿ ಅವರು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ನ್ಯಾ.ರಂಜನ್ ಗೊಗೊಯ್ ಅವರನ್ನು ಸಮಿತಿಯ ನೂತನ ಮುಖ್ಯಸ್ಥರನ್ನಾಗಿ ನೇಮಕಗೊಳಿಸಿದ್ದಾರೆ.
ನ್ಯಾಯಾಧೀಶರೋರ್ವರು ಹುದ್ದೆಯಿಂದ ನಿವೃತ್ತರಾದ ಬಳಿಕವೂ ಸಮಿತಿ ಮುಖ್ಯಸ್ಥರಾಗಿ ಮುಂದುವರಿಯಬಹುದೇ ಎಂಬ ಬಗ್ಗೆ ನ್ಯಾಯಾಧೀಶರ ವಿಚಾರಣಾ ಕಾಯ್ದೆ,1968 ವೌನವಾಗಿದೆ. ಹೀಗಾಗಿ ನ್ಯಾ.ಸೇನ್ ಕಳೆದ ವರ್ಷದ ಡಿ.31ರಂದು ಹುದ್ದೆಯಿಂದ ನಿವೃತ್ತರಾಗಿದ್ದರೂ ಅವರು ವಿಚಾರಣಾ ಸಮಿತಿಯ ಮುಖ್ಯಸ್ಥರಾಗಿ ಮುಂದುವರಿಯಬಹುದಾಗಿದೆ ಎಂದು ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರು ಇತ್ತೀಚಿಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ನ್ಯಾ.ಸೇನ್ ಅವರೇ ಮುಂದುವರಿಯಬೇಕೇ ಅಥವಾ ನೂತನ ಮುಖ್ಯಸ್ಥರನ್ನಾಗಿ ಹಾಲಿ ನ್ಯಾಯಾಧೀಶರನ್ನು ನೇಮಕಗೊಳಿಸಬೇಕೇ ಎನ್ನುವುದನ್ನು ರಾಜ್ಯಸಭಾ ಸಭಾಪತಿಗಳು ನಿರ್ಧರಿಸಬೇಕು ಎಂದಿದ್ದರು.
ಆದರೆ ನ್ಯಾ.ಸೇನ್ ಅವರು ಸರ್ವೋಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರೆಂಬ ನೆಲೆಯಲ್ಲಿ ಸಮಿತಿ ಮುಖ್ಯಸ್ಥರಾಗಿದ್ದರಿಂದ ಅವರ ಸ್ಥಾನದಲ್ಲಿ ಬೇರೊಬ್ಬರನ್ನು ನೇಮಿಸಬೇಕು ಎಂದು ಕಾನೂನು ಸಚಿವಾಲಯವು ಹೇಳಿತ್ತು. ಈ ಹಿನ್ನೆಲೆಯಲ್ಲಿ ಸಮಿತಿಯ ಪುನರ್‌ರಚನೆಗೆ ಉಪರಾಷ್ಟ್ರಪತಿ ಅನ್ಸಾರಿ ನಿರ್ಧರಿಸಿದ್ದರು.





