ಕಡಬ : ಮಾಲೇಶ್ವರ ಬಿಜೆಪಿ ಚುನಾವಣಾ ಪ್ರಚಾರ ಸಭೆ
ಕಡಬ, ಫೆ.11. ಜಿ.ಪಂ.ಹಾಗೂ ತಾ.ಪಂ.ಚುನಾವಣೆ ಹಿನ್ನಲೆಯಲ್ಲಿ ಕಡಬ ತಾ.ಪಂ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ 4 ಮತ್ತು 5ನೇ ವಾರ್ಡಿನಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯು ಕೋಡಿಂಬಾಳ ಮಾಲೇಶ್ವರದಲ್ಲಿ ನಡೆಯಿತು.
ಕಡಬ ಜಿ.ಪಂ.ಕ್ಷೇತ್ರದ ಅಭ್ಯರ್ಥಿ ಕೃಷ್ಣ ಶೆಟ್ಟಿ ಮಾತನಾಡಿ, ಕೇಂದ್ರದಲ್ಲಿನ ಬಿಜೆಪಿ ಸರಕಾರದ ಸಾಧನೆ, ಪ್ರಧಾನಿ ನರೇಂದ್ರ ಮೋದಿಯವರ ಜನಪರ ಆಡಳಿತದ ಬಗ್ಗೆ ಮತದಾರರಲ್ಲಿ ಒಲವು ಮೂಡಿಸಿದಲ್ಲಿ ಮತದಾರರು ಬಿಜೆಪಿಗೆ ಮತ ನೀಡಲಿದ್ದಾರೆ. ಈಗಿನ ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಸಂಪೂರ್ಣ ಲೂಟಿ ಮಾಡುವುದರೊಂದಿಗೆ ರೈತರನ್ನು ಕಂಗೆಡಿಸಿದ್ದು ಆಡಳಿತ ಕುಂಠಿತಗೊಂಡಿದೆ. ವಿದ್ಯುತ್ ಸಮಸ್ಯೆಯಿಂದ ಕೃಷಿ ಪಂಪುಗಳು ಚಾಲೂ ಆಗದೇ ರೈತರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ರೈತರು ಶೆಡ್‌ನಲ್ಲೇ ಮಲಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು. ಕಡಬ ಜಿ.ಪಂ. ವ್ಯಾಪ್ತಿಯ 9 ಗ್ರಾ.ಪಂ.ಗಳ ಪೈಕಿ 6 ಗ್ರಾ.ಪಂ.ಗಳಲ್ಲಿ ಬಿಜೆಪಿ ಆಡಳಿತವಿದೆ. ನಾವು ಎಲ್ಲಾ ಮತದಾರರನ್ನು ಭೇಟಿಯಾಗಿ ಮತಯಾಚಿಸಿದಲ್ಲಿ ಎಲ್ಲಾ ಕಡೆಗಳಲ್ಲೂ ನಮ್ಮ ಜಯ ಖಚಿತ. ಕಾಂಗ್ರೆಸ್‌ನವರು ಈಗಾಗಲೇ ಹತಾಶರಾಗಿದ್ದು ಅವರಿಗೆ ಸೋಲಿನ ಭಯ ಆವರಿಸಿದೆ ಎಂದರು.
ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯದರ್ಶಿ ಪುಲಸ್ತ್ಯ ರೈ ಮಾತನಾಡಿ, ಕಾಂಗ್ರೆಸ್ ಪಕ್ಷದ ಸಿದ್ದಾಂತ ಗರೀಬಿ ಹಠಾವೋ ಆದರೆ ಕಾಂಗ್ರೆಸ್ ನಾಯಕರು ತಮ್ಮ ಗರೀಬಿ ಹಠಾವೋ ಮಾಡುತ್ತಿದ್ದಾರೆ.ಪ್ರತಿಯೊಬ್ಬರಿಗೂ ಸ್ವಾವಲಂಬಿ ಬದುಕನ್ನು ಕಲ್ಪಿಸಿಕೊಟ್ಟು ಜನಧನ ಯೋಜನೆ, ಸುರಕ್ಷಾ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಜನ ಸಬಳೀಕರಣ ಹೊಂದುವಂತೆ ಮಾಡಿದೆ. ಕೇಂದ್ರ ಬಿಜೆಪಿ ಸರಕಾರದ ಸಾಧನೆಗಳನ್ನು ಮತದಾರರ ಮನ ಮುಟ್ಟಿಸುವಲ್ಲಿ ಕಾರ್ಯಕರ್ತರು ಶ್ರಮಿಸಿದಲ್ಲಿ ಬಿಜೆಪಿಗೆ ಸುಲಭ ಜಯ ಸಾಧ್ಯ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿ ನಮ್ಮ ಜಿ.ಪಂ. ಹಾಗೂ ತಾ.ಪಂ.ಅಭ್ಯರ್ಥಿಗಳನ್ನು ಗೆಲ್ಲಿಸೋಣ ಎಂದರು. ತಾ.ಪಂ.ಅಭ್ಯರ್ಥಿ ಸತೀಶ್ ನಾಯಕ್ ಮಾತನಾಡಿದರು. ಕಡಬ ಗ್ರಾ.ಪಂ. ಸದಸ್ಯ ಆದಂ ಕುಂಡೋಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಪೊರಂತು, ಕುಂಡೋಳಿ, ಮಾಲೇಶ್ವರ, ಪನ್ಯ ಭಾಗದಲ್ಲಿ ಪ್ರತೀ ಸಲದ ಚುನಾವಣೆಯಲ್ಲೂ ಬಿಜೆಪಿ ಅತೀ ಹೆಚ್ಚಿನ ಮತಗಳಿಸುತ್ತಿದೆ. ಇಲ್ಲಿ ಜಾತಿ ಮತ ಬೇಧವಿಲ್ಲದೆ ಎಲ್ಲರೂ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಈ ಸಲ ಕೃಷ್ಣ ಶೆಟ್ಟಿ ಮತ್ತು ಸತೀಶ್ ನಾಯಕ್ ಅಭ್ಯರ್ಥಿಯಾಗಿರುವುದರಿಂದ ಕಾರ್ಯಕರ್ತರು ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಎಲ್ಲರೂ ಒಟ್ಟಾಗಿ ದುಡಿದು ಜಿ.ಪಂ. ಹಾಗೂ ತಾ.ಪಂ. ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದರು. ಕಡಬ ಜಿ.ಪಂ.ಚುನಾವಣಾ ಪ್ರಮುಖ್ ಸೀತಾರಾಮ ಗೌಡ, ಬಿಜೆಪಿ ಕಡಬ ಗ್ರಾ.ಪಂ. ಸಮಿತಿ ಕಾರ್ಯದರ್ಶಿ ಎ.ಪಿ. ಗಿರೀಶ್, ಕಡಬ ಗ್ರಾ.ಪಂ. ಸದಸ್ಯೆ ಜಯಲಕ್ಷ್ಮೀ, ವಾರ್ಡ್ ಸಮಿತಿ ಅಧ್ಯಕ್ಷ ಸೋಮಯ್ಯ, ಲೋಕಯ್ಯ ಗೌಡ ಕೊಲ್ಲೆಸಾಗು, ಮಹಾವೀರ್ ಜೈನ್ ಪ್ರಮುಖರಾದ ಅಬ್ದುಲ್ ರಹಿಮಾನ್ ಪನ್ಯ, ಸುಂದರ ನಾಕ್, ಸಿದ್ದೀಕ್ ಜೆ.ಕೆ, ಇದ್ದಿನಬ್ಬ, ಆದಂ ಸಾಹೇಬ್ ಪೊರಂತು, ಇಂಜಿನಿಯರ್ ಪ್ರಸಾದ್ ಎನ್.ಕೆ, ಯತೀಶ್ ಹೊಸಮನೆ, ಹಂಝ ಕುಂಡೋಳಿ, ವಾಸು ಮೊದಲಾದವರು ಉಪಸ್ಥಿತರಿದ್ದರು. ಕಡಬ ಗ್ರಾ.ಪಂ.ಬಿಜೆಪಿ ಸಮಿತಿ ಪ್ರಮುಖ್ ಅಶೋಕ್ ಕುಮಾರ್ ಸ್ವಾಗತಿಸಿ, ಆದಂ ಕುಂಡೋಳಿ ವಂದಿಸಿದರು. ಫಯಾಜ್ ಕೆನರಾ ಕಾರ್ಯಕ್ರಮ ನಿರೂಪಿಸಿದರು.







