ಹುಟ್ಟೂರಿನಲ್ಲಿ ನಾಳೆ ಯೋಧ ಹನುಮಂತಪ್ಪನ ಅಂತ್ಯ ಸಂಸ್ಕಾರ

-ಹುಬ್ಬಳ್ಳಿ ನೆಹರೂ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ
-ಅಂತ್ಯ ಸಂಸ್ಕಾರದಲ್ಲಿ ಸಿಎಂ ಸಿದ್ಧರಾಮಯ್ಯ, ಸಚಿವರು ಭಾಗಿ
-ಸಕಲ ಸರಕಾರಿ ಗೌರವ
ಬೆಂಗಳೂರು, ಫೆ. 11: ಹೊಸದಿಲ್ಲಿಯ ಮಿಲಿಟರಿ ಆರ್‌ಆರ್ ಆಸ್ಪತ್ರೆಯಲ್ಲಿ ಗುರುವಾರ ಬೆಳಗ್ಗೆ 11:45ರ ಸುಮಾರಿಗೆ ವೀರಮರಣವನ್ನಪ್ಪಿದ ಧಾರವಾಡ ಜಿಲ್ಲೆ, ಕುಂದಗೋಳ ತಾಲೂಕಿನ ಬೆಟದೂರಿನ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ ಪಾರ್ಥಿವ ಶರೀರವನ್ನು ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾತ್ರಿ ಬರಮಾಡಿ ಕೊಳ್ಳಲಿದ್ದಾರೆ.
ಲ್ಯಾನ್ಸ್ ನಾಯಕ್ ಹನುಮಂತಪ್ಪಕೊಪ್ಪದ ಅವರ ಅಂತಿಮ ದರ್ಶನ ಪಡೆದು, ಅವರ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿ ರಾಜ್ಯದ ಜನತೆಯ ಪರವಾಗಿ ಗೌರವ ಅರ್ಪಿಸಲಿರುವ ಸಿದ್ದರಾಮಯ್ಯ, ಇದೇ ವೇಳೆ ವೀರಯೋಧ ಕೊಪ್ಪದ ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಲಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ್ ಕುಲಕರ್ಣಿ, ಜಿಲ್ಲಾಧಿಕಾರಿ ರಾಜೇಂದ್ರ ಚೋಳನ್, ಪೊಲೀಸ್ ಆಯುಕ್ತ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಹಾಜರಿರಲಿದ್ದಾರೆ.
ಸಾರ್ವಜನಿಕರ ದರ್ಶನಕ್ಕೆ: ರಾತ್ರಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ವೀರ ಯೋಧನ ಪಾರ್ಥಿವ ಶರೀರವನ್ನು ಇರಿಸಲಾಗುವುದು. ಫೆ.12ರ ಬೆಳಗ್ಗೆ 7ರಿಂದ 10ಗಂಟೆ ವರೆಗೆ ಸಾರ್ವಜನಿಕರ ದರ್ಶನಕ್ಕೆ ಇಲ್ಲಿನ ನೆಹರೂ ಮೈದಾನದಲ್ಲಿ ಇರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ತಿಳಿಸಿದ್ದಾರೆ.
ಗುರುವಾರ ರಾತ್ರಿ ಹುಬ್ಬಳ್ಳಿಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶುಕ್ರವಾರ ಮಧ್ಯಾಹ್ನ 12:30ರ ಸುಮಾರಿಗೆ ಕೊಪ್ಪದ ಅವರ ಹುಟ್ಟೂರು ಬೆಟದೂರಿನಲ್ಲಿ ಸಕಲ ಸರಕಾರಿ ಹಾಗೂ ಮಿಲಿಟರಿ ಗೌರವಗಳೊಂದಿಗೆ ಲ್ಯಾನ್ಸ್ ನಾಯಕ್ ಕೊಪ್ಪದ ಅಂತ್ಯಸಂಸ್ಕಾರ ನರವೇರಿಸಲಾಗುವುದು ಎಂದರು.
ಕೊಪ್ಪದ ಅಂತ್ಯ ಸಂಸ್ಕಾರದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಂಪುಟ ಸಚಿವರು, ಜಿಲ್ಲೆಯ ಶಾಸಕರು, ಮುಖಂಡರು, ಹಿರಿಯ ಅಧಿಕಾರಿಗಳು, ಸಾರ್ವಜನಿಕರು, ಗ್ರಾಮಸ್ಥರು ಹಾಗೂ ಕೊಪ್ಪದ ಅವರ ಕುಟುಂಬದ ಸದಸ್ಯರು ಪಾಲ್ಗೊಳ್ಳಲಿದ್ದಾರೆಂದು ವಿನಯ್ ಕುಲಕಣಿ ತಿಳಿಸಿದರು.







