ರದ್ದುಗೊಂಡ ಚೆಕ್ ಬಳಕೆ; 79 ಕೋಟಿ ರೂ. ವಂಚನೆ; ಮೂವರ ಬಂಧನ
ಬೆಂಗಳೂರು, ಫೆ.11: ಬ್ಯಾಂಕ್ ಮ್ಯಾನೇಜರ್ ಹಾಗೂ ಕಸ್ಟಮ್ಸ್ ಸರ್ವಿಸ್ ಆಫೀಸರ್ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ರದ್ದುಗೊಂಡ ಚೆಕ್‌ಗಳನ್ನು ಬಳಸಿಕೊಂಡು ಸುಮಾರು 79.09 ಕೋಟಿ ರೂ. ವನ್ನು ವಂಚಿಸಿರುವ ಘಟನೆ ಸಂಬಂಧ ಸಿಐಡಿ ಅಧಿಕಾರಿಗಳು ಮೂರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜಯಪುರದಲ್ಲಿರುವ ಐಸಿಐಸಿಐ ಬ್ಯಾಂಕಿನ ಕ್ಲಸ್ಟರ್ ಮ್ಯಾನೇಜರ್ ವಿಜಯಸಾರಥಿ, ಕಸ್ಟಮ್ಸ್ ಸರ್ವೀಸ್ ಆಫೀಸರ್ ಸಚಿನ್ ಅಣ್ಣಪ್ಪ ಪಾಟೀಲ್ ಹಾಗೂ ವಿಜಯಸಾರಥಿಯ ಪ್ರೇಯಸಿ ರೇಣುಕಾ ಶೆಟ್ಟಿ ಬಂಧಿತ ಆರೋಪಿಗಳು.
ಈ ಆರೋಪಿಗಳು ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಹೆಸರಲ್ಲಿ 30 ಕೋಟಿ ರೂ., ಸಿದ್ದೇಶ್ವರ ಸಹಕಾರಿ ಬ್ಯಾಂಕ್‌ನ 1.65 ಕೋಟಿ ರೂ., ಎನ್‌ಎಚ್‌ಎಐ ಹೆಸರಿನಲ್ಲಿ 13.45 ಕೋಟಿ ರೂ., ಕಿರಾಣಾ ಮರ್ಚೆಂಟ್ಸ್ ಅಸೋಷಿಯೇಷನ್ಸ್ ನ 2.25 ಕೋಟಿ ರೂ., ವಿಜಯಪುರ ಮಹಾನಗರ ಪಾಲಿಕೆ ಹೆಸರಿನಲ್ಲಿ 19.25 ಕೋಟಿ ರೂ., ನೀರು ಸರಬರಾಜು ಇಲಾಖೆಯ 4 ಕೋಟಿ ರೂ., ಹಾಗೂ ಎಸ್‌ಬಿಐನ 7.60 ಕೋಟಿ ರೂ. ಹಾಗೂ ಇತರರ ಹೆಸರಿನಲ್ಲಿರುವ 1.60 ಕೋಟಿ ರೂ.ಗಳನ್ನು ಅನಧಿಕೃತವಾಗಿ ನಗದೀಕರಿಸಿಕೊಂಡಿದ್ದಾರೆ ಎಂದು ಸಿಐಡಿ ಪೊಲೀಸರು ತಿಳಿಸಿದರು.
ಅನಧಿಕೃತವಾಗಿ ಪಡೆದ ಹಣವನ್ನು ಆರೋಪಿ ವಿಜಯಸಾರಥಿ ವಿಜಯಪುರದಲ್ಲಿ ಒಂದು ಮನೆ, ದಕ್ಷಿಣ ಕನ್ನಡ ಜಿಲ್ಲೆಯ ನಿಟ್ಟೆಯಲ್ಲಿ 6 ಎಕರೆ ಕೃಷಿ ಜಮೀನು, ತನ್ನ ಪ್ರೇಯಸಿ ರೇಣುಕಾಶೆಟ್ಟಿ ಹೆಸರಿನಲ್ಲಿ ಬೆಂಗಳೂರಿನ ಜೆಪಿ ನಗರದಲ್ಲಿ 2 ಕೋಟಿ ರೂ. ವೌಲ್ಯದ ಮನೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಮೀನನ್ನು ಖರೀದಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು. ಆರೋಪಿಗಳ ವಿರುದ್ದ ವಿಜಯಪುರದ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.





